ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಮಹಾನವಮಿ ದಿಬ್ಬದ ಎದುರು ಪತ್ತೆಯಾದ ಎರಡು ಪುರಾತನ ಜಲಕುಂಡಗಳ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಉತ್ಖನನ ಸಂದರ್ಭದಲ್ಲಿ ಪತ್ತೆಯಾಗಿರುವ ಎರಡು ಪುರಾತನ ಜಲಕುಂಡಗಳನ್ನು ಯಾವುದೇ ಆಧುನಿಕ ಕೃತಕ ಸಾಮಗ್ರಿಗಳನ್ನು ಬಳಸದೆ, ಸಂಪೂರ್ಣವಾಗಿ ಪ್ರಾಚೀನ ಸಂರಕ್ಷಣಾ ಪದ್ಧತಿಗಳ ಮೂಲಕ ಐತಿಹಾಸಿಕ ರಚನೆಗೆ ಮರು ಜೀವ ನೀಡಲಾಗಿದೆ.

ಹಾನಿಗೊಳಗಾಗಿದ್ದ ಜಲಕುಂಡಗಳ ಮೇಲ್ಮೈಯನ್ನು ಎಚ್ಚರಿಕೆಯಿಂದ ಕಿತ್ತು ತೆಗೆದು, ಹೊಸ ಇಟ್ಟಿಗೆ ಜಲ್ಲಿ ಕಾಂಕ್ರಿಟ್ ಅಳವಡಿಸಲಾಗಿದೆ. ನಂತರ 1:2 ಅನುಪಾತದ ಸುಣ್ಣದ ಗಾರೆ ಬಳಸಲಾಗಿದೆ. ಈ ಗಾರೆಯ ಗುಣಮಟ್ಟ ಮತ್ತು ಬಾಳಿಕೆಯನ್ನು ಹೆಚ್ಚಿಸಲು ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿದೆ. ಸುಣ್ಣ ಬಳಕೆಗೆ ಮುಂಚಿತವಾಗಿ 21 ದಿನಗಳ ಕಾಲ ನೆನೆಸಿ ಹದಗೊಳಿಸಲಾಗಿತ್ತು. ಜತೆಗೆ ಸಾಂಪ್ರದಾಯಿಕ ಸಂಯೋಜಕಗಳಾದ ಗಾರೆಯ ಬಳಸಿ ಮತ್ತಷ್ಟು ಗಟ್ಟಿಗೊಳಿಸಲಾಗಿದೆ. ಈ ಸಂರಕ್ಷಣಾ ಕಾರ್ಯಕ್ಕೆ ಅಂದಾಜು ₹80 ಸಾವಿರ ವೆಚ್ಚದಲ್ಲಿ ಸಂರಕ್ಷಣೆ ಮಾಡಲಾಗಿದೆ ಎಂದು ಭಾರತೀಯ ಪುರಾತ್ವತ ಸರ್ವೇಕ್ಷಣಾ ಇಲಾಖೆಯ ಪುರಾತತ್ವ ಅಧೀಕ್ಷ ಕೆ. ರಾಮಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಹಂಪಿಯ ಮಹಾನವಮಿ ದಿಬ್ಬದ ಎದುರಿನಲ್ಲಿ ಪತ್ತೆಯಾದ ಎರಡು ಪುರಾತನ ಜಲಕುಂಡಗಳ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.