ತಡೆಯಾಜ್ಞೆ ತೆರವು: ಇಂದು ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

| Published : Sep 25 2024, 12:47 AM IST

ತಡೆಯಾಜ್ಞೆ ತೆರವು: ಇಂದು ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯ ಶಹರಿ ರೋಜ್‌ಗಾರ್ ಭವನದಲ್ಲಿ ಬೆಳಗ್ಗೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ನೂತನ ಮೀಸಲಾತಿ ಪ್ರಕಾರ ಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿತ್ತು.

ಎಂ.ಕೆ.ಹರಿಚರಣ್ ತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನ್ಯಾಯಾಲಯದ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು (ಸೆ.25 ) ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಅನುಕೂಲ ವಾತಾವರಣವಿದ್ದು, ಜೆಡಿಎಸ್ - ಬಿಜೆಪಿ ಮೈತ್ರಿ ಸದಸ್ಯರಲ್ಲಿ ಗೊಂದಲ ಏರ್ಪಟ್ಟಿದೆ.

ಪುರಸಭೆಯ ಶಹರಿ ರೋಜ್‌ಗಾರ್ ಭವನದಲ್ಲಿ ಬೆಳಗ್ಗೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ನೂತನ ಮೀಸಲಾತಿ ಪ್ರಕಾರ ಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿತ್ತು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿರುವ ಸರ್ಕಾರದ ನಿಲುವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಸದಸ್ಯ ಕೆ.ಸಿ.ಮಂಜುನಾಥ್ ರಾಜ್ಯ ಹೈಕೋರ್ಟ್‌ ನಿಂದ ತಡೆಯಾಜ್ಞೆ ತಂದಿದ್ದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಪರಿಣಾಮ ಕಳೆದ ಸೆ.2 ರಂದು ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿತ್ತು.

ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಕಾಂಗ್ರೆಸ್ ಸದಸ್ಯೆ ಸೌಭಾಗ್ಯ ಉಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈಗ ತಡೆಯಾಜ್ಞೆ ತೆರವಾಗಿರುವುದರಿಂದ ಮೂರು ಪಕ್ಷಗಳಲ್ಲೂ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ.

ಪಟ್ಟಣ ಪುರಸಭೆಯಲ್ಲಿ 23 ಜನ ಚುನಾಯಿತ ಸದಸ್ಯರಲ್ಲಿ ಜೆಡಿಎಸ್ 11, ಕಾಂಗ್ರೆಸ್ 10, ಓರ್ವ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರಿದ್ದಾರೆ. ಇದರೊಂದಿಗೆ ಕ್ಷೇತ್ರದ ಶಾಸಕ ಮತ್ತು ಸಂಸದರು ಸೇರಿ 25 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ.

ಮೇಲ್ನೋಟಕ್ಕೆ ಜೆಡಿಎಸ್ - ಬಿಜೆಪಿ ಮೈತ್ರಿಕೂಟ 14 ಮತಗಳಿಂದ ಬಹುಮತ ಹೊಂದಿದ್ದರೂ ಒಳಗೆ ಸಾಕಷ್ಟು ಭಿನ್ನವಾಗಿದೆ.

11 ಮಂದಿ ಜೆಡಿಎಸ್ ಸದಸ್ಯರಲ್ಲಿ ಒಮ್ಮತವಿಲ್ಲ. ನಾಲ್ವರು ಜೆಡಿಎಸ್, 7 ಮಂದಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಬೆಂಬಲಿತ ಬಿಜೆಪಿ ಪಾಳಯದಲ್ಲಿದ್ದಾರೆ. ಸಮನ್ವಯತೆಯ ಕೊರತೆಯಿಂದ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದ ಜೆಡಿಎಸ್ ಈಗಲೂ ಒಡೆದ ಮನೆಯಾಗಿದೆ. ಸಹಜವಾಗಿಯೇ ಇದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ದಕ್ಕುವ ನಿರೀಕ್ಷೆ ಇದೆ.

10 ಸದಸ್ಯರ ಬೆಂಬಲ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಪಕ್ಷೇತರ ಸದಸ್ಯ ತಿಮ್ಮೇಗೌಡ ಬೆಂಬಲವಿದೆ. ಇವರೊಟ್ಟಿಗೆ ನಾಲ್ಕಕ್ಕೂ ಹೆಚ್ಚು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಸಹೋದರ ಕೆ.ಬಿ.ಪ್ರಕಾಶ್ ಪತ್ನಿ ಪಂಕಜ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ.

ಮೈತ್ರಿ ಪಾಳಯದಲ್ಲಿ ಇದುವರೆಗೂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಆದರೂ ಶಾಸಕ ಎಚ್.ಟಿ.ಮಂಜು ಅವರು ಘೋಷಿಸುವ ಅಭ್ಯರ್ಥಿಗೆ ಮತ ಹಾಕುವುದಾಗಿ ಪ್ರಕಟಿಸಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ಕಾಂಗ್ರೆಸ್ ಗೆಲುವು ನಿರಾಯಾಸ ಎನ್ನುವ ವಾತಾವರಣವಿದೆ. ಜೆಡಿಎಸ್ ಪಕ್ಷದಿಂದ ಯಾರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆನ್ನುವ ಕುತೂಹಲ ಮೂಡಿದೆ.

ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ಒಗ್ಗೂಡಿದರೆ ಮಾತ್ರ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಳಯಕ್ಕೆ ಒಲಿಯಲಿದೆ. ಇಲ್ಲದಿದ್ದರೆ ಈಗಾಗಲೇ ಉಪಾಧ್ಯಕ್ಷ ಸ್ಥಾನವನ್ನು ಗೆದ್ದು ಬೀಗಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಪಂಕಜಾ ಪ್ರಕಾಶ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ.