ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಚೆಕ್ ಪೋಸ್ಟ್ ಬಳಿ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮಲೆ ಮಾದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದ 300ಕ್ಕೂ ಹೆಚ್ಚು ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡದೆ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಜಾನುವಾರುಗಳನ್ನು ಓಡಿಸಿದ್ದಾರೆ. ತಲತಲಾಂತರದಿಂದ ಜಾನುವಾರು ಮೆಯಿಸಿಕೊಂಡು ಸಂರಕ್ಷಿಸಲಾಗುತ್ತಿತ್ತು. ಇತ್ತೀಚೆಗೆ ಅರಣ್ಯಾಧಿಕಾರಿಗಳ ದುಂಡಾವತಿಯಿಂದ ಜಾನುವಾರುಗಳಿಗೆ ಗ್ರಾಮಗಳಲ್ಲಿ ಮೇವು, ನೀರು ಇಲ್ಲದೆ ರೈತರು ಪರದಾಡುವಂಥ ಪರಿಸ್ಥಿತಿ ಇದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಮಲೆ ಮಾದೇಶ್ವರ ಬೆಟ್ಟದ ಎಸಿಎಫ್ ಮರಿಸ್ವಾಮಿ ಭೇಟಿ ನೀಡಿ ಮಾತನಾಡಿ, ಇಂಡಿಗನತ್ತ ಗ್ರಾಮದ ರೈತರು ಒಬ್ಬರು ಅರಣ್ಯ ಪ್ರದೇಶದಲ್ಲಿ ನೇಣುಹಾಕಿಕೊಂಡು ಸಾವನ್ನಪ್ಪಿರುವ ಪ್ರಕರಣ ನಡೆದಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳಿಗೆ ದೊಡ್ಡಿ ಹಾಕಲು ಅವಕಾಶ ಇಲ್ಲ. ಹೀಗಾಗಿ ಜಾನುವಾರುಗಳನ್ನು ಓಡಿಸಲಾಗಿದೆ ಎಂದು ತಿಳಿಸಿದರು.ರೈತ ಮುಖಂಡ ಪ್ರಕಾಶ್ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದು ನಮ್ಮ ಹಕ್ಕು. ಹೀಗಾಗಿ ಸಂಬಂಧಿಸಿದ ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಮಲೆ ಮಹದೇಶ್ವರ ಬೆಟ್ಟದಲ್ಲಿ ಬಂದು ಸಭೆ ನಡೆಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಅರಣ್ಯಾಧಿಕಾರಿಗಳು ಈ ರೀತಿ ದುಂಡಾವರ್ತನೆಯಿಂದ ಜಾನುವಾರುಗಳನ್ನು ಪಟಾಕಿ ಸಿಡಿಸಿ ಓಡಿಸುವುದು ಸರಿಯಾದ ಕ್ರಮವಲ್ಲ ಎಂದರು.
ಹನೂರು ತಾಲೂಕಿನಲ್ಲಿ ಎಂಟು ಹುಲಿಗಳು ಸಾವನ್ನಪ್ಪಿವೆ. ಹೀಗಾಗಿ ಅರಣ್ಯದಂಚಿನ ರೈತರ ಹಾಗೂ ಅಧಿಕಾರಿಗಳ ಸಭೆ ಕರೆದು ಅರಣ್ಯ ಸಚಿವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರೈತರ ಹಾಗೂ ಗ್ರಾಮದ ನಿವಾಸಿಗಳ ಸಭೆಯನ್ನು ಸಹ ನಡೆಸದೆ ಇಷ್ಟಾನುಸಾರ ನಿಯಮಗಳನ್ನು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.ರೈತ ಮುಖಂಡರು ಮಾತನಾಡಿ, ಜಾನುವಾರುಗಳನ್ನು ಮೇಯಲು ಬಿಡದಿದ್ದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಸಂಬಂಧಪಟ್ಟ ಸಚಿವರು ಸಭೆ ನಡೆಸಿ ಕ್ರಮ ಕೈಗೊಳ್ಳುವವರೆಗೂ ರೈತರ ಜಾನುವಾರುಗಳನ್ನು ಮೇಯಲು ತೊಂದರೆ ನೀಡಬಾರದು ಎಂದು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ತಾಲೂಕಿನ ವಿವಿಧಡೆ ಅರಣ್ಯದಂಚಿನ ಗ್ರಾಮಗಳಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಅರಣ್ಯದಂಚಿನ ಭಾಗದಲ್ಲಿ ರೈತರ ಜಮೀನುಗಳಿಗೆ ಕಾಡುಪ್ರಾಣಿಗಳು ಬರದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡದಿದ್ದರೆ ನಿಮ್ಮ ಕಾಡುಪ್ರಾಣಿಗಳು ನಮ್ಮ ರೈತರ ಜಮೀನಿಗೆ ಬರದಂತೆ ತಡೆಗಟ್ಟಲು ಮುಂದಾಗಿ ಎಂದರು.ಇದೇ ವೇಳೆಯಲ್ಲಿ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ಪ್ರತಿಭಟನೆ ಚಳುವಳಿಯಲ್ಲಿ ಭಾಗವಹಿಸಿದ್ದರು.