ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಜೂನ್ 4ರಂದು ಬೆಳಿಗ್ಗೆ 7 ರಿಂದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಈ ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಯೊಳಗೆ ಫಲಿತಾಂಶ ಪ್ರಕಟ ವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತ ಎಣಿಕೆ ಸಿದ್ಧತೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 20 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಎರಡು ಇವಿಎಂ ಯಂತ್ರಗಳಿವೆ. ಹಾಗಾಗಿ ಫಲಿತಾಂಶ ಪ್ರಕಟವಾಗಲು ತುಸು ತಡವಾಗಲಿದೆ. ಅಂಚೆ ಮತ ಪತ್ರಗಳ ಎಣಿಕೆ ನಂತರವೇ ಇವಿಎಂ ಯಂತ್ರಗಳ ಕೈಗೆತ್ತಿ ಕೊಳ್ಳಲಾಗುವುದು ಎಂದರು.
ಇದೇ ಮೊದಲ ಬಾರಿಗೆ ಮತಯಂತ್ರಗಳ ದಾಸ್ತಾನು ಮಾಡಿರುವ ಕಟ್ಟಡದ ಮೇಲುಸ್ತುವಾರಿಗಾಗಿ ಓರ್ವ ಪತ್ರಾಂಕಿತ ಹುದ್ದೆಯ ಅಧಿಕಾರಿಯನ್ನು ದಿನದ 24 ಗಂಟೆಯ ಅವಧಿಗೆ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಿತ್ಯವೂ ತಾವು ಖುದ್ದಾಗಿ ಭೇಟಿ ನೀಡಿ ಭದ್ರತಾ ಕೊಠಡಿಗಳನ್ನು ಪರಿಶೀಲಿಸಲಾಗುತ್ತಿದೆ. ಉಮೇದುವಾರ ರಲ್ಲದೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಕೂಡ ಭದ್ರತಾ ಕೊಠಡಿಯನ್ನು ಭೇಟಿ ನೀಡಲು ಅವಕಾಶ ನೀಡಲಾಗಿದೆ ಎಂದರು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಮತ ಎಣಿಕೆ ನಡೆಯಲಿದೆ. ಸುಮಾರು 125 ಮಂದಿ ಏಜೆಂಟರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಹಾಗೂ ಅಂಚೆ ಮತಪತ್ರಗಳ ಎಣಿಕೆಗೆ ಒಟ್ಟು 12 ಟೇಬಲ್‍ಗಳನ್ನು ನಿಗದಿಪಡಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆದು ಬೆಳಿಗ್ಗೆ 8 ರಿಂದ ಅಂಚೆ ಮತ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಆರಂಭಿಸಲಾಗುವುದು. ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ವಿಧಾನ ಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು ಮತ್ತು ಶಿರಾ ತಾಲೂಕುಗಳ ಮತಎಣಿಕೆ ಹಾಗೂ ಎರಡನೇ ಮಹಡಿಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ನಡೆಯಲಿದೆ ಎಂದರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260ಮತಗಟ್ಟೆಗಳ ಎಣಿಕೆಯು 19 ಸುತ್ತುಗಳಲ್ಲಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 288 ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಹಿರಿಯೂರು ವಿಧಾನಸಭಾ ಕ್ಷೇತ್ರದ 287 ಮತಗಟ್ಟೆಗಳ ಎಣಿಕೆ 21 ಸುತ್ತುಗಳಲ್ಲಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದ 242 ಮತಗಟ್ಟೆಗಳ ಎಣಿಕೆ 18ಸುತ್ತುಗಳಲ್ಲಿ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 299 ಮತಗಟ್ಟೆಗಳ ಎಣಿಕೆಯು 22 ಸುತ್ತುಗಳಲ್ಲಿ, ಶಿರಾ ವಿಧಾನಸಭಾ ಕ್ಷೇತ್ರದ 267 ಮತಗಟ್ಟೆಗಳ ಎಣಿಕೆಯು 20ಸುತ್ತುಗಳಲ್ಲಿ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ 240ಮತಗಟ್ಟೆಗಳ ಎಣಿಕೆಯು 18 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಮತ ಎಣಿಕೆ ಕಾರ್ಯಕ್ಕೆ ಭದ್ರತೆ ಒದಗಿಸಲು ಒಟ್ಟಾರೆ 1800 ಸಿಬ್ಬಂದಿ ನಿಯೋಜಿಸಲಾಗಿದೆ. ಇಬ್ಬರು ಎಎಸ್ಪಿ,3 ಡಿಎಸ್ಪಿ, 18 ಮಂದಿ ಸಿಪಿಐ,51 ಸ ಸಿಪಿಐ , 833 ಮಂದಿ ಎಎಸ್ ಐ ಸೇರಿದಂತೆ ಪೋಲೀಸ್ ಪೇದೆಗಳು ಕಾರ್ಯನಿರ್ವಹಿಸುವರು ಎಂದರು. ಮತ ಎಣಿಕೆ ದಿನದಂದು ಪ್ರಮುಖ ರಾಜಕೀಯ ಪಕ್ಷಗಳ ಧುರೀಣರ ಮನೆಗಳಿಗೂ ಭದ್ರತೆ ಒದಗಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಕಾರ್ತಿಕ್ ಉಪಸ್ಥಿತರಿದ್ದರು.