ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಗಳ ಫಲಿತಾಂಶವೇ ಹೆಚ್ಚು

| Published : May 12 2024, 01:24 AM IST

ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಗಳ ಫಲಿತಾಂಶವೇ ಹೆಚ್ಚು
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಕಳಪೆ ಫಲಿತಾಂಶಕ್ಕೆ ಕಾರಣ । ಆಂಗ್ಲ ಮಾದ್ಯಮ ಶಾಲೆಗಳಲ್ಲಿ ಶೇ 94.01 ಫಲಿತಾಂಶ

ಪರೀಕ್ಷಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಕಳಪೆ ಫಲಿತಾಂಶಕ್ಕೆ ಕಾರಣ । ಆಂಗ್ಲ ಮಾದ್ಯಮ ಶಾಲೆಗಳಲ್ಲಿ ಶೇ 94.01 ಫಲಿತಾಂಶ

ಕನ್ನಡಪ್ರಭ ವಾರ್ತೆ ಹೊಸದುರ್ಗ:

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೊಸದುರ್ಗ ತಾಲೂಕಿಗೆ ಶೇ.70.38 ಫಲಿತಾಂಶ ಲಭಿಸಿದ್ದು ಕಳೆದ ಸಾಲಿಗಿಂತ ಶೇ 24.45 ಕಡಿಮೆ ಫಲಿತಾಂಶ ಬಂದಿದೆ.

ಕಳೆದ ಸಾಲಿನಲ್ಲಿ ಉತ್ತಮ ಫಲಿತಾಂಶ ಪಡೆದೆವೆಂಬ ಹಮ್ಮಿನಿಂದ ಬೀಗಿದ್ದ ಶಿಕ್ಷಣ ಇಲಾಕೆ ಈ ಬಾರಿಯ ಕಳಪೆ ಫಲಿತಾಂಶದಿಂದ ಮುಗುಮ್ಮಾಗಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಪಲಿತಾಂಶ ಪಡೆದುಕೊಳ್ಳುವಲ್ಲಿ ಜಿಲ್ಲೆಗಳ ನಡುವೆ ಪೈಪೋಟಿ ಇತ್ತು, ಅಲ್ಲದೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲೇಬೆಕೆಂಬ ಬಯಕೆಯಿಂದ ಹಲವಾರು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಕೆ ಹಾಕಿಕೊಂಡಿತ್ತು. ಅದರೆ ಈ ಬಾರಿ ಅಂತಹ ಯಾವುದೇ ಕಾರ್ಯಕ್ರಮಗಳು ಕಾಣಲಿಲ್ಲ ಅಲ್ಲದೆ ಪರೀಕ್ಷಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳು ಆಗಿದ್ದರಿಂದಲೂ ಕಳಪೆ ಫಲಿತಾಂಶ ಬರಲು ಕಾರಣ ಎನ್ನಲಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಪದ್ಧತಿಯ ಬಗ್ಗೆ ಹಲವರಲ್ಲಿ ಬೇಸರವಿತ್ತು. ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಸಾಮೂಹಿಕ ಕಾಪಿ(ಚೀಟಿ) ಮಾಡಿಸಲಾಗುತ್ತಿತ್ತು ಎನ್ನುವ ಸಂಗತಿಗಳು ಕೇಳ ತೊಡಗಿದ್ದವು. ಆದರೆ ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿದ್ದರಿಂದ ಕಾಪಿ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.ಸರ್ಕಾರಿ ಶಾಲೆಗಳಿಗೆ 71.64 ಫಲಿತಾಂಶ:ತಾಲೂಕಿನಲ್ಲಿ ಅನುದಾನ ರಹಿತ ಆಂಗ್ಲ ಮಾದ್ಯಮ ಶಾಲೆಗಳಲ್ಲಿ ಶೇ 94.01 ಫಲಿತಾಂಶ ಬಂದರೆ, ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳಲ್ಲಿ ಶೇ 71.64 ಫಲಿತಾಂಶ ಬಂದಿದೆ. ತಾಲೂಕಿನ ಸರ್ಕಾರಿ ಶಾಲೆಗಳ ಪಲಿತಾಂಶ ಗಮನಿಸಿದಾಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎನ್ನುವ ಪೋಷಕರ ದೂರಿಗೆ ಮತ್ತಷ್ಠು ಪುಷ್ಠಿ ದೊರತಂತಾಗಿದೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಶಾಲೆಗಳಿಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಅಲ್ಲದೆ ಬಂದರೂ ಕಾಲಹರಣ ಮಾಡಿಕೊಂಡು ಹೊಗುತ್ತಾರೆ ಎನ್ನುವ ದೂರು ಪೋಷಕ ವರ್ಗದಲ್ಲಿ ಕೇಳಿ ಬರುತ್ತಿದೆ.

ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳು: ತಾಲೂಕಿನ ನೀರಗುಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ( ಸರ್ಕಾರಿ), ಮಾಡದಕೆರೆ ಇಂದಿರಾಗಾಂಧಿ ವಸತಿಯುತ ಶಾಲೆ (ಸರ್ಕಾರಿ), ರಂಗಾಪುರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ (ಅನುದಾನ ರಹಿತ), ಬಾಗುರಿನ ವಿದ್ಯಾವಾಹಿನಿ ವಿದ್ಯಾನಿಕೇತನ ಶಾಲೆ (ಅನುದಾನ ರಹಿತ), ಪಟ್ಟಣದ ತೋಟದ ರಾಮಯ್ಯ ಪ್ರೌಢಶಾಲೆ (ಅನುದಾನ ರಹಿತ), ಶ್ರೀರಾಂಪುರದ ವಿದ್ಯಾ ಪ್ರಕಾಶ ಪ್ರೌಢಶಾಲೆಗಳು (ಅನುದಾನ ರಹಿತ), ಶೇ.100ರಷ್ಟು ಫಲಿತಾಂಶ ಪಡೆದಿವೆ.----

ಬಾಕ್ಸ: 5 ವಿದ್ಯಾರ್ಥಿಗಳು ಟಾಪರ್‌

ಕಳೆದ ಸಾಲಿನಲ್ಲಿ 11 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಟಾಪರ್‌ ಗಳಾಗಿದ್ದರು. ಆದರೆ ಈ ಬಾರಿ 5 ವಿದ್ಯಾರ್ಥಿಗಳು ತಾಲೂಕಿಗೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಪಟ್ಟಣದ ಎಂಪಿ ಪ್ರಕಾಶ್ ಪ್ರೌಢಶಾಲೆಯ ಸೈಯದ್ ಜಾಹೇರಾ 625 ಅಂಕಗಳಿಗೆ (614), ಇದೇ ಶಾಲೆಯ ತನುಶ್ರೀ ಪ್ರಸನ್ನ (608), ಬಾಗೂರಿನ ವಿದ್ಯಾವಾಹಿನಿ ವಿದ್ಯಾನಿಕೇತನ ಪ್ರೌಢಶಾಲೆಯ ನೇಸರ ಎಂ.(605), ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆಯ ಮಾನ್ಯ (603), ನೀರಗುಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಲಕ್ಷ್ಮಿ ಜಿ.ಹೆಚ್.(600) ಅಂಕಗಳನ್ನು ಪಡೆದು ತಾಲೂಕಿಗೆ ಟಾಪರ್ ಆಗಿದ್ದಾರೆ.

----

ಕೋಟ್‌:

ಹಲವು ವರ್ಷಗಳಿಂದ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ತಾತ್ಸಾರ ಮನೋಭಾವನೆ ಇತ್ತು. ಹೇಗೋ ಗ್ರೇಸ್‌ ಮಾರ್ಕ್ಸಗಾದರೂ ಹೇಳಿಕೊಡುತ್ತಾರೆ ಎನ್ನುವ ಮನಸ್ಥಿತಿಯಲ್ಲಿ ವಿದ್ಯಾರ್ಥಿಗಳಿದ್ದರು. ಆದರೆ ಈ ಬಾರಿ ಸಿಸಿ ಕ್ಯಾಮರ ಅಳವಡಿಸಿ ಪರೀಕ್ಷಾ ಕ್ರಮವನ್ನು ಬಿಗಿಗೊಳಿಸಿದ್ದರಿಂದ ಕಷ್ಠ ಪಟ್ಟು ಓದಿದ ವಿದ್ಯಾರ್ಥಿಗಳಿಗೆ ಬೆಲೆ ಸಿಕ್ಕಂತಾಗಿದೆ. ಪರೀಕ್ಷಾ ಕ್ರಮವನ್ನು ಈಗೆ ಮುಂದರೆಸಿದರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರೂ ಜಾಗೃತರಾಗುತ್ತಾರೆ.

-ಯಶಸ್ವಿನಿ, ವಿದ್ಯಾರ್ಥಿನಿ ------ಕೋಟ್‌:

ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೂ ಬರುವುದಿಲ್ಲ ಇತ್ತ ಪಾಠ ಪ್ರವಚನಗಳ ಬಗ್ಗೆಯೂ ಗಮನ ನೀಡಲ್ಲ. ಈ ಬಗ್ಗೆ ಪ್ರಶ್ನಿಸಿದರೆ ತಮ್ಮ ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿ ಶಾಲೆಗಳಲ್ಲಿ ಈಯಾಳಿಸುತ್ತಾರೆ. ಇಂತಹ ಪ್ರವೃತ್ತಿ ಹೊಗಬೇಕು. ಶಿಕ್ಷಣ ಇಲಾಕೆ ಹಾಗೂ ಸಮುದಾಯ ಶಿಕ್ಷಕರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಅಲ್ಲದೆ ಪರೀಕ್ಷಾ ಕ್ರಮವನ್ನು ಸರಳೀಕರಣ ಗೊಳಿಸದೆ. ಈ ಬಾರಿಯಂತೆ ಕಟ್ಟುನಿಟ್ಟಿನಿಂದ ನಡೆಸಬೇಕು . ಆಗ ಮಕ್ಕಳು ಓದುತ್ತಾರೆ ಹಾಗೆಯೇ ಓದುವ ಮಕ್ಕಳಿಗೂ ಗೌರವ ಸಿಗುತ್ತದೆ.

-ರೇವಣ್ಣ, ಪೋಷಕರು