ಬಸ್ ಸಂಚಾರ ಪುನರಾರಂಭ : ಮೆಣಸಿನ ಹಾಡ್ಯದಲ್ಲಿ ಹಬ್ಬದ ವಾತಾವರಣ

| Published : Jul 12 2024, 01:33 AM IST

ಬಸ್ ಸಂಚಾರ ಪುನರಾರಂಭ : ಮೆಣಸಿನ ಹಾಡ್ಯದಲ್ಲಿ ಹಬ್ಬದ ವಾತಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ತಾಲೂಕಿನ ಅತ್ತಿಕೊಡಿಗೆ ಗ್ರಾಪಂ ಮೆಣಸಿನಹಾಡ್ಯ ಸಾತುಕೊಡಿಗೆ ಭಾಗದಲ್ಲಿ ಸಂಚರಿಸುತ್ತಿದ್ದ ಕೆಕೆಬಿ ಬಸ್ ಸಂಚಾರ ಕೊರೊನಾ ಸಮಯದಲ್ಲಿ ಸ್ಥಗಿತಗೊಂಡಿದ್ದರಿಂದ ಈ ಭಾಗದ ಜನರಿಗೆ ಓಡಾಡಲು ಬೇರೆ ವಾಹನದ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗ್ರಾಮಸ್ಥರ ಪರವಾಗಿ ಕೃತಜ್ಞತೆ: ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲೂಕಿನ ಅತ್ತಿಕೊಡಿಗೆ ಗ್ರಾಪಂ ಮೆಣಸಿನಹಾಡ್ಯ ಸಾತುಕೊಡಿಗೆ ಭಾಗದಲ್ಲಿ ಸಂಚರಿಸುತ್ತಿದ್ದ ಕೆಕೆಬಿ ಬಸ್ ಸಂಚಾರ ಕೊರೊನಾ ಸಮಯದಲ್ಲಿ ಸ್ಥಗಿತಗೊಂಡಿದ್ದರಿಂದ ಈ ಭಾಗದ ಜನರಿಗೆ ಓಡಾಡಲು ಬೇರೆ ವಾಹನದ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ ಸಂಚಾರ ಪುನರಾರಂಭ ಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಫಲಪ್ರದವಾಗಿರಲಿಲ್ಲ. ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಟಿ.ಗೋಪಾಲಕೃಷ್ಣ ಬಸ್ ಇಲ್ಲದೆ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ಶಾಸಕ ಟಿ.ಡಿ. ರಾಜೇಗೌಡರ ಗಮನಕ್ಕೆ ತಂದಾಗ ಶಾಸಕರು ಬಸ್ ಸಂಚಾರ ಪುನರಾರಂಭಗೊಳಿಸುವಂತೆ ಕೆಕೆಬಿ ಬಸ್‌ನ ಮಾಲೀಕ ಕಳಸದ ಕೃಷ್ಣಭಟ್‌ಗೆ ಮನವಿ ಮಾಡಿದಾಗ ಕೃಷ್ಣಭಟ್‌ ಬಸ್ ಸಂಚಾರ ಪುನರಾರಂಭಿಸುವ ಭರವಸೆ ನೀಡಿದ್ದರು. ಪತ್ರ ನೀಡಿದ ಕೇವಲ ೧೫ ದಿನದಲ್ಲಿ ಕೆಕೆಬಿಯವರಿಂದ ಸಕಾರಾತ್ಮಕ ಸ್ಪಂದನೆ ದೊರೆತು ಮಂಗಳವಾರದಿಂದ ಬಸ್ ಸಂಚಾರ ಪುನರಾರಂಭಗೊಂಡಿದೆ. ಇದಕ್ಕೆ ಕಾರಣರಾದ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಕೆಕೆಬಿ ಬಸ್ ಮಾಲಕರಾದ ಕೃಷ್ಣಭಟ್‌ ರವರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದ್ದಾರೆ. ಮಂಗಳವಾರ ಮೆಣಸಿನಹಾಡ್ಯದ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲಾ ಮುಂಭಾಗದಲ್ಲಿ ಬಸ್‌ಗೆ ಪೂಜೆ ಸಲ್ಲಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಲಾಯಿತು. ಮೆಣಸಿನಹಾಡ್ಯ ಸಾತುಕುಡಿಗೆ, ಕೊಗ್ರೆ ಜಯಪುರ ಕೊಪ್ಪ ತೀರ್ಥಹಳ್ಳಿ ಮಾರ್ಗವಾಗಿ ಓಡಾಡುವ ಬಸ್ಸು ಜನಸಾಮಾನ್ಯರಿಗೆ ಉಪಯೋಗವಾಗಲಿದೆ. ಸುಮಾರು ನಾಲ್ಕೂವರೆ ವರ್ಷಗಳ ನಂತರ ಪುನರಾರಂಭಗೊಂಡ ಬಸ್ ಸಂಚಾರ ಮೆಣಸಿನ ಕೊಡಿಗೆ, ಸಾತುಕೊಡಿಗೆ ಕುಗ್ರಾಮದ ಜನರಿಗೆ ಹಬ್ಬದ ವಾತಾವರಣ ಮೂಡಿಸಿತು.