ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಗೌಡಗೆರೆ ಹೋಬಳಿಯ ಹೊಸೂರು ವ್ಯಾಪ್ತಿಯಲ್ಲಿ ಹತ್ತಾರು ಗ್ರಾಮಗಳ ರೈತರಿಗೆ ಅನುಕೂಲವಾಗುವ ಏತ ನೀರಾವರಿ ಯೋಜನೆ ಕಳೆದ 4 ದಶಕಗಳಿಂದ ಸ್ಥಗಿತಗೊಂಡಿದ್ದು, ಈ ಯೋಜನೆಗೆ ಮರು ಜೀವ ನೀಡುವ ಉದ್ದೇಶದಿಂದ ಸುವರ್ಣಮುಖಿ ನದಿ ಹರಿಯುವ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇನೆ. ಪ್ರಸ್ತುತ ಬರುವಂತಹ ಬಜೆಟ್ ನಲ್ಲಿ ಈ ಕಾಮಗಾರಿಯ ಅನುಮೋದನೆ ಪಡೆದು ಶೀಘ್ರದಲ್ಲಿಯೇ ಕಾಮಗಾರಿ ನಡೆಸಲಿದ್ದೇವೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ. ಜಯಚಂದ್ರ ಹೇಳಿದರು.ಅವರು ತಾಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದ ಬಳಿ ಏತ ನೀರಾವರಿ ಯೋಜನೆಯ ಕಾಮಗಾರಿ ನಡೆಸಲು ಸ್ಥಳ ಪರಿಶೀಲನೆ ಮಾಡಿ ಮಾತನಾಡಿದರು. ಸುವರ್ಣಮುಖಿ ಹಳ್ಳಕ್ಕೆ ಅಡ್ಡಲಾಗಿ ಶಿರಾ ತಾಲೂಕಿನ ಹೊಸೂರು ಗ್ರಾಮದ ಬಳಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ , 43 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೊಸೂರು ಏತ ನೀರಾವರಿ ಯೋಜನೆಗೆ ಮರು ಜೀವ ನೀಡಿ ಹೊಸೂರು ಕೆರೆಗೆ ನೀರು ಹರಿಸುವ ಗುರಿ ಹೊಂದಲಾಗಿದೆ. ಇದರಿಂದ ಹತ್ತಾರು ಹಳ್ಳಿಗಳ ನೂರಾರು ರೈತರ ಜಮೀನುಗಳಲ್ಲಿ ನೀರಾವರಿ ಕೃಷಿ ಮಾಡಲು ಅನುಕೂಲವಾಗಲಿದೆ. ಅತಿ ಶೀಘ್ರದಲ್ಲಿಯೇ ಹೊಸೂರು ಗ್ರಾಮದ ಹತ್ತಿರ ಬೃಹತ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ. ತಾಲೂಕಿನಲ್ಲಿ 44 ಬೃಹತ್ ಬ್ಯಾರೇಜ್‍ಗಳನ್ನು ನಿರ್ಮಾಣ ಮಾಡಿ ಮಳೆಯ ನೀರನ್ನು ತಡೆದು, ಭೂಮಿಯಲ್ಲಿ ಇಂಗಿಸಿದ ಕಾರಣ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲು ಸಹಕಾರಿಯಾಗಿದೆ. ಇಂತಹ ಕಾಮಗಾರಿಗಳು ನನ್ನ ರಾಜಕೀಯ ಜೀವನದಲ್ಲಿ ಹೆಚ್ಚು ತೃಪ್ತಿ ನೀಡಿವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹುಣಸೇಹಳ್ಳಿ ಎಚ್.ಪಿ.ಶಶಿಧರ್, ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟ ಜುಂಜಯ್ಯ, ಮಾಜಿ ಅಧ್ಯಕ್ಷ ಹನುಮಂತ ರಾಯಪ್ಪ, ಕಾಂಗ್ರೆಸ್ ಮುಖಂಡ ಸಂಕಾಪುರ ಚಿದಾನಂದ, ಮುಖಂಡರಾದ ಹೇರೂರು ಲಕ್ಷ್ಮಿ ರಾಜ್, ಸಾಹುಕಾರ್ ಸಿದ್ದಪ್ಪ, ಚಂದ್ರಣ್ಣ, ದಿಬ್ಬಣ್ಣ, ತಾಲೂಕು ಪಂಚಾಯತಿ ಮಾಜಿ ಸದಸ್ಯ ನಾಗರಾಜು, ನರಸಿಂಹಮೂರ್ತಿ, ಗ್ರಾಮ ಪಂಚಾಯತಿ ಸದಸ್ಯೆ ಯಶೋದಮ್ಮ ನಾಗರಾಜು, ಎಇಇ ಗಂಗಾಧರ್, ಪಿಡಿಒ ರಮೇಶ್, ಕಾಂಗ್ರೆಸ್ ಮುಖಂಡ ಪುಟ್ಟ ಜುಂಜ ಸೇರಿದಂತೆ ಹಲವರು ಹಾಜರಿದ್ದರು.