ಒಳಗಿನ ವಿಭಜನೆ ತೊರೆದು ಸಮಗ್ರ ಚಳವಳಿ ಕಟ್ಟಿದಾಗಲೇ ಸಾಮಾಜಿಕ ನ್ಯಾಯ ಸಾಕಾರ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದಲಿತ ಸಂಘರ್ಷ ಸಮಿತಿ (ದಸಂಸ) ಕಳೆದ ಐದು ದಶಕಗಳ ಹೋರಾಟದ ಅನುಭವವನ್ನು ಆತ್ಮಾವಲೋಕನ ಮಾಡಿಕೊಂಡು ಹೊಸ ದಿಕ್ಕಿನಲ್ಲಿ ಪುನರ್‌ ಸಂಘಟನೆಯಾಗಬೇಕಿದೆ. ಸಂಘಟನೆಯೊಳಗಿನ ಬಹಿಷ್ಕೃತ ಮನೋಭಾವ, ಸ್ವಾರ್ಥ ಮತ್ತು ವಿಭಜನೆ ದೂರವಾದಾಗ ಮಾತ್ರ ಸಾಮಾಜಿಕ ನ್ಯಾಯದ ಗುರಿ ಸಾಧಿಸಲು ಸಾಧ್ಯ ಎಂದು ದಸಂಸ ಹಿರಿಯ ಮುಖಂಡ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ತಾಲೂಕಿನ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಿನಾಥಬೆಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಆಯೋಜಿಸಿದ್ದ ಕಾರ್ಯಕರ್ತರ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮಾಲೂರು ತಾಲೂಕಿನ ಹುಣಸೀಕೋಟೆ ಗ್ರಾಮದಲ್ಲಿ ಶೇಷಗಿರಿಯಪ್ಪನ ಭೀಕರ ಕೊಲೆ ಮತ್ತು ಆತನ ಮಗಳು ಅನುಸೂಯಮ್ಮನ ಮೇಲೆ ನಡೆದ ಅತ್ಯಾಚಾರದ ಆರೋಪಿಗಳ ವಿರುದ್ಧದ ಹೋರಾಟ ಯಶಸ್ವಿಯಾಗಲು ಎಲ್ಲರನ್ನು ಒಳಗೊಂಡ ಸಂಘಟನೆಯೇ ಕಾರಣವಾಗಿತ್ತು. ಇಂದಿನ ದಸಂಸವೂ ಅದೇ ಮಾದರಿಯಲ್ಲಿ ಬಹುತ್ವದ ನೆಲೆಗಟ್ಟಿನಲ್ಲಿ ಎಲ್ಲ ವರ್ಗಗಳನ್ನು ಒಳಗೊಂಡು ಬೆಳೆಯಬೇಕಿದೆ. ಸಂಘಟನೆಯ ಜವಾಬ್ದಾರಿ ಹೊತ್ತವರು ಶುದ್ಧಹಸ್ತರು, ಮಾತೃಹೃದಯ ಹೊಂದಿದವರಾಗಿರಬೇಕು. ಹಣ, ಅಧಿಕಾರ ಮತ್ತು ಆಮಿಷಗಳ ಹಿಂದೆ ಹೋದರೆ ಸೇವಾ ಮನೋಭಾವ ಕಣ್ಮರೆಯಾಗಿ ಸ್ವಾರ್ಥವೇ ಮೇಲುಗೈ ಸಾಧಿಸುತ್ತದೆ ಎಂದು ಎಚ್ಚರಿಸಿದರು.ಇಂದು ಸಂಘಟನೆ ಕಟ್ಟುವುದು ಯಾರಿಗೋಸ್ಕರವಲ್ಲ, ನಮ್ಮ ಸಮುದಾಯದ ಭವಿಷ್ಯಕ್ಕಾಗಿ ಎಂಬ ಅರಿವು ಅಗತ್ಯವಾಗಿದೆ. ಕಳೆದ 50 ವರ್ಷಗಳಲ್ಲಿ ರಾಜಕೀಯ ಹಾಗೂ ಸಾಂಘಿಕವಾಗಿ ತೆಗೆದುಕೊಂಡ ಹಲವು ತಪ್ಪು ನಿರ್ಧಾರಗಳನ್ನು ಪ್ರಾಮಾಣಿಕವಾಗಿ ವಿಮರ್ಶಿಸಬೇಕು. ಹೊರಗಿನ ಅಸಮಾನತೆಗಿಂತ ಸಂಘಟನೆಯೊಳಗಿನ ಬಹಿಷ್ಕೃತ ಮನೋಭಾವವೇ ಹೆಚ್ಚು ಅಪಾಯಕಾರಿ. ಕಣ್ಣಿಗೆ ಕಾಣುವ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವವರು ಸಿಗುತ್ತಾರೆ. ಆದರೆ ಒಳಗಿರುವ ವಿಭಜನೆ ನಿವಾರಿಸುವ ಕೆಲಸವನ್ನು ನಾವೇ ಮಾಡಬೇಕಿದೆ ಎಂದು ಹೇಳಿದರು.

ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡ ಅಧ್ಯಯನ ಶಿಬಿರಗಳು ಅಗತ್ಯವಾಗಿದ್ದು, ಗ್ರಾಮ-ಪಟ್ಟಣಗಳಲ್ಲಿ ನಿರಂತರವಾಗಿ ವೈಚಾರಿಕ ಚಟುವಟಿಕೆಗಳು ನಡೆಯಬೇಕು. ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ, ಸಮಾಜವಾದ ಎಂಬ ಹಳೆಯ ಚರ್ಚೆಗಳಲ್ಲೇ ಸಿಲುಕಿಕೊಳ್ಳದೆ ಇಂದಿನ ಸವಾಲುಗಳಿಗೆ ಉತ್ತರ ನೀಡುವ ಚಳವಳಿಯಾಗಿ ದಸಂಸ ರೂಪುಗೊಳ್ಳಬೇಕಿದೆ ಎಂದರು.


ಯುವ ಮುಖಂಡ ನರಸಿಂಹಮೂರ್ತಿ ಮಾತನಾಡಿ, 2015ರ ನಂತರ ದೇಶದ ರಾಜಕೀಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಸ್ಥಿತಿಗತಿ ಕುರಿತು ಗಂಭೀರ ಚರ್ಚೆ ಅಗತ್ಯವಾಗಿದೆ. ಒಳಮೀಸಲಾತಿ ಪ್ರಶ್ನೆಯಲ್ಲಿ ದಸಂಸದ ಬೌದ್ಧಿಕ ವಲಯದ ಅಪ್ರಾಮಾಣಿಕತೆ ಬಹಿರಂಗವಾಗಿದೆ. ಖಾಸಗಿ ವಲಯದಲ್ಲಿ ಮೀಸಲಾತಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನದ ಸಮರ್ಪಕ ಬಳಕೆ, ದಲಿತರ ಮೇಲಿನ ದೌರ್ಜನ್ಯ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ವಿಚಾರದಲ್ಲಿ ಸಂಘಟನೆಗಳು ಬಲವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

ದಸಂಸ ಜಿಲ್ಲಾ ಮುಖಂಡ ಗಡ್ಡಂ ವೆಂಕಟೇಶ್ ಮಾತನಾಡಿ, ಸ್ವಘೋಷಿತ ನಾಯಕತ್ವಕ್ಕೆ ಅವಕಾಶ ನೀಡದೆ ಕಾರ್ಯಕರ್ತರ ಆಧಾರಿತ ಸಂಘಟನೆ ಕಟ್ಟಬೇಕು. ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಚಳವಳಿಯ ಮುಖ್ಯವಾಹಿನಿಗೆ ತಂದು ಹೊಸ ನಾಯಕತ್ವ ರೂಪಿಸಬೇಕು. ಸಮಾಜದಲ್ಲಿ ದಲಿತರಿಂದಲೇ ದಲಿತರ ಶೋಷಣೆ, ಅಧಿಕಾರಿಗಳ ಬೆದರಿಕೆ ಮೂಲಕ ಹಣ ಸಂಪಾದಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಮುನಿರೆಡ್ಡಿ, ಮುನಿವೆಂಕಟಪ್ಪ, ಇಸ್ಕೂಲಪ್ಪ ತಂಡದವರಿಂದ ಸಂಘರ್ಷ ಗೀತೆಗಳ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ್, ದು. ಸರಸ್ವತಿ, ದಸಂಸ ಮುಖಂಡರಾದ ರಾಜಾಕಾಂತ್, ಎನ್.ಪರಮೇಶ್, ಸಿ.ಜಿ.ಗಂಗಪ್ಪ, ಎಸ್.ಎ. ವೆಂಕಟೇಶ್, ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

ಸಿಕೆಬಿ-1 ತಾಲೂಕಿನ ಗೋಪಿನಾಥಬೆಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ ಆಯೋಜಿಸಿದ್ದ ಕಾರ್ಯಕರ್ತರ ಅಧ್ಯಯನ ಶಿಬಿರದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು