ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವಿಚಾರದಲ್ಲಿಯೂ ತಪ್ಪು ಹೇಳಿಕೆಗಳನ್ನು ನೀಡುವುದು, ತಪ್ಪು ಅಂಕಿ-ಅಂಶಗಳನ್ನು ತಿಳಿಸಿ ಜನರನ್ನು ದಾರಿತಪ್ಪಿಸುವಂತಹ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ.
ದೇವದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವಿಚಾರದಲ್ಲಿಯೂ ತಪ್ಪು ಹೇಳಿಕೆಗಳನ್ನು ನೀಡುವುದು, ತಪ್ಪು ಅಂಕಿ-ಅಂಶಗಳನ್ನು ತಿಳಿಸಿ ಜನರನ್ನು ದಾರಿತಪ್ಪಿಸುವಂತಹ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ತಾಲೂಕಿನ ತಿಂಥಿಣಿ ಸಮೀಪದ ಕನಕ ಗುರುಪೀಠದಲ್ಲಿ ಶುಕ್ರವಾರ ಮಾತನಾಡಿದ ಅವರು, ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರ ನಿರಾಕರಿಸಿರುವುದರ ವಿಚಾರದ ಕುರಿತು ಪ್ರತಿಕ್ರಿಯಿಸಿ, ಪ್ರತಿ ವರ್ಷ ಎಲ್ಲ ರಾಜ್ಯಗಳಿಗೆ ಅವಕಾಶ ನೀಡಲಾಗುವುದಿಲ್ಲ, ಕೇಂದ್ರ ಸರ್ಕಾರ ಸರತಿಯಂತೆ ಎಲ್ಲಾ ರಾಜ್ಯಗಳಿಗೆ ಸ್ತಬ್ಧಚಿತ್ರ(ಟ್ಯಾಬ್ಲೋ)ಗಳಿಗೆ ಅವಕಾಶ ನೀಡುತ್ತೆ. 2006ರಿಂದ 2009ರಲ್ಲಿ ಕೇಂದ್ರದಲ್ಲಿ ತಾವೇ ಅಧಿಕಾರದಲ್ಲಿದ್ದಾಗ ಅವಕಾಶ ಕೊಟ್ಟಿಲ್ಲವೇ. ಸುಖಾಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸಬಾರದು. ಇಂತಹ ಹೇಳಿಕೆಗಳಿಗೆ ಯುವ ಜನತೆ ಒಪ್ಪುವದಿಲ್ಲ. ದೇಶದಲ್ಲಿ ತಂತ್ರಜ್ಞಾನ ಮುಂದುವರೆದಿದೆ. ಅಂಗೈಯಲ್ಲಿಯೇ ಎಲ್ಲಾ ವಿಷಯಗಳನ್ನು ತಿಳಿಯುವ ಕಾಲವಿದು. ಇಂಥ ತಪ್ಪು ಸಂದೇಶಗಳನ್ನು ನೀಡಬಾರದು. ಕಾಂಗ್ರೆಸ್ ತಪ್ಪು ದಾರಿಗೆ ಹೊರಟಿದೆ. ಶ್ರೀರಾಮ ಕಾಲ್ಪನಿಕ ಎನ್ನುವದು, ಕರಸೇವಕರ ಸುಳ್ಳು ಪ್ರಕರಣಗಳನ್ನು ಹಾಕುವದು, ಬಂಧಿಸುವದು, ಗೋಲಿಬಾರ್ ಮಾಡುತ್ತಾ ಹಿಂದೂ ವಿರೋಧಿಗಳಾಗಿದ್ದಾರೆ ಎಂದರು.