ಗ್ಯಾಚ್ಯುವಟಿ ನೀಡಲು ನಿವೃತ್ತ ಅಂಗನವಾಡಿ ನೌಕರರ ಮನವಿ

| Published : Oct 31 2025, 03:15 AM IST

ಸಾರಾಂಶ

ರಾಜ್ಯದಲ್ಲಿ 2011 ರಿಂದ 2023 ಮಾರ್ಚ್ ತನಕ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೂ ಮತ್ತು ಸಹಾಯಕಿಯರಿಗೂ ಸುಪ್ರೀಂ ಕೋರ್ಟ್ ಆದೇಶದಂತೆ 1972ರ ಗ್ರಾಚ್ಯುಟಿ ಮೊತ್ತ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಕರೆಯಂತೆ ಉಡುಪಿ ಜಿಲ್ಲಾ ಸಮಿತಿಯು ಮಂಗವಾರ ಮಕ್ಕಳ ಕಲ್ಯಾಣ ಯೋಜನಾ ಅಧಿಕಾರಿ (ಸಿ.ಡಿ.ಪಿ.ಓ.) ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

2022ರ ಏ.25ರಂದು ಸುಪ್ರೀಂ ಕೋರ್ಟ್ ಅಂಗನವಾಡಿ ಕೇಂದ್ರಗಳಲ್ಲಿ ದುಡಿಯುವ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಯರಿಗೆ 1972 ನಿಬಂಧನೆಗಳನ್ನು ಅನ್ವಯ ಮಾಡುವಂತೆ ತೀರ್ಪಿತ್ತಿತ್ತು. ಅದನ್ನು ಜಾರಿಗೆ ತರುವಂತೆ ಅಂಗನವಾಡಿ ನೌಕರರು 2023ರ ಫೆಬ್ರವರಿಯಲ್ಲಿ ತೀವ್ರ ಹೋರಾಟ ನಡೆಸಿದ್ದರು. ಪರಿಣಾಮ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮಾರ್ಚ್ ತಿಂಗಳಿಂದ ಗ್ರಾಚ್ಯುವಿಟಿ ಜಾರಿಗೊಳಿಸಿತ್ತು. ಅದರಂತೆ 2011ರಿಂದ ನಿವೃತ್ತರಾದ 10,311 ಅಂಗನವಾಡಿ ನೌಕರರಿಗೆ ಇದರ ಲಾಭ ಸಿಗಬೇಕಾಗಿದೆ. ಅದಕ್ಕೆ 183 ಕೋಟಿ ಅನುದಾನ ಬೇಕಾಗಿದ್ದು, 2 ವರ್ಷ ಕಳೆದರೂ ಸರ್ಕಾರ ಇನ್ನೂ ಅದನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ತಕ್ಷಣ ರಾಜ್ಯ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷೆ ಭಾರತಿ ಎಸ್., ನಿವೃತ್ತ ಅಂಗನವಾಡಿ ಕಾರ್ಯಕರ್ತೆರಾದ ಶಾಂತ, ವಸಂತಿ, ಬೇಬಿ, ಪ್ರೇಮ, ದೇವಕಿ, ವಿನೋದ, ಪ್ರಭಾವತಿ, ಸರಸ್ವತಿ ಹಾಗೂ ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ಉಪಸ್ಥಿತರಿದ್ದರು.