ಪಿಂಚಣಿದಾರರಿಗೆ ನೀಡಲಾಗುತ್ತಿರುವ ಪೆನ್ಷನ್ ಹಾಗೂ ವರ್ಷಕ್ಕೆ ಎರಡು ಬಾರಿ ನೀಡುವ ತುಟ್ಟಿ ಭತ್ಯೆಯನ್ನು ರದ್ದುಪಡಿಸುವ ಪ್ರಸ್ತಾವನೆಯು ಸಂಪೂರ್ಣ ಅನ್ಯಾಯಕರವಾಗಿದೆ.

ಕಂಪ್ಲಿ: ಪಿಂಚಣಿದಾರರ ಹಿತಾಸಕ್ತಿಗೆ ವಿರುದ್ಧವಾಗಿರುವಂತೆ ಕೇಂದ್ರ ಸರ್ಕಾರ ತರಲು ಮುಂದಾಗಿರುವ ಹೊಸ ಶಾಸನವನ್ನು ಖಂಡಿಸಿ, ತಾಲೂಕಿನ ಸರ್ಕಾರಿ ನಿವೃತ್ತ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು. ತೋಳಿಗೆ ಕಪ್ಪುಬಟ್ಟೆ ಧರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ನಿವೃತ್ತ ನೌಕರರು, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯಾಲಯದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಜೂಗಲ ಮಂಜುನಾಯಕರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ನಿವೃತ್ತ ನೌಕರರು, ಪಿಂಚಣಿದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ ಎಂಬ ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯ, ಪಿಂಚಣಿದಾರರಿಗೆ ನೀಡಲಾಗುತ್ತಿರುವ ಪೆನ್ಷನ್ ಹಾಗೂ ವರ್ಷಕ್ಕೆ ಎರಡು ಬಾರಿ ನೀಡುವ ತುಟ್ಟಿ ಭತ್ಯೆಯನ್ನು ರದ್ದುಪಡಿಸುವ ಪ್ರಸ್ತಾವನೆಯು ಸಂಪೂರ್ಣ ಅನ್ಯಾಯಕರವಾಗಿದೆ. ಇದು ನಿವೃತ್ತ ನೌಕರರ ಜೀವನ ಭದ್ರತೆಯನ್ನು ಹಾಳುಮಾಡುವ ಕ್ರಮವಾಗಿದೆ ಎಂದು ತೀವ್ರವಾಗಿ ಖಂಡಿಸಿದರು. ನಿವೃತ್ತಿಯ ನಂತರ ಪಿಂಚಣಿಯೇ ನಮ್ಮ ಜೀವನಾಧಾರ. ತುಟ್ಟಿ ಭತ್ಯೆ ದೈನಂದಿನ ವೆಚ್ಚಗಳನ್ನು ಸಮತೋಲನಗೊಳಿಸಲು ಸಹಾಯಕವಾಗಿದೆ. ಇಂತಹ ಸೌಲಭ್ಯಗಳನ್ನು ಕಡಿತಗೊಳಿಸುವುದು ಅಥವಾ ರದ್ದುಪಡಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಯಥಾಸ್ಥಿತಿಯಲ್ಲಿ ಪೆನ್ಷನ್ ಹಾಗೂ ತುಟ್ಟಿ ಭತ್ಯೆಯನ್ನು ಮುಂದುವರೆಸಬೇಕು. ಹೊಸ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳಾದ ವಿ. ನಾರಾಯಣರೆಡ್ಡಿ, ಬಿ. ವೀರೇಶಪ್ಪ, ನಾಗರಾಜ ದಬಾಡಿ, ಫಣಿ ಸೋಮಪ್ಪ, ವಿ. ಪಕ್ಕೀರಪ್ಪ, ಎಸ್. ಸೋಮಶೇಖರ, ಹೊನ್ನೂರಮ್ಮ, ಲಕ್ಷ್ಮೀ, ನಾಗರತ್ನ, ಗಂಗಾಧರಗೌಡ, ಆಂಜನೇಯಲು, ಡಾ. ಜಗನ್ನಾಥ ಹಿರೇಮಠ, ಎಸ್.ಎಚ್.ಎಂ. ಚನ್ನಬಸವಯ್ಯ, ಬೆಟ್ಟಪ್ಪ, ನಾಗೇಶ್ವರರಾವ್, ಗುರುಮೂರ್ತಿ, ಜಿ. ಕ್ರಿಷ್ಟಾಚಾರ್, ಕೆ. ಹಾಲಪ್ಪ ಸೇರಿದಂತೆ ಹಲವಾರು ನಿವೃತ್ತ ನೌಕರರು ಭಾಗವಹಿಸಿದ್ದರು.