ಸಾರಾಂಶ
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಸಭೆ- 75 ವರ್ಷ ತುಂಬಿದ ಹಿರಿಯರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನಿವೃತ್ತ ಸರ್ಕಾರಿ ನೌಕರರು ಉತ್ತಮ ಸಮಾಜ ಕಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಎಚ್.ಎಚ್.ಸತೀಶ್ ಸಲಹೆ ನೀಡಿದರು.ಶುಕ್ರವಾರ ಪಟ್ಟಣದ ಅಗ್ರಹಾರದ ಅನ್ನಪೂರ್ಣ ರಂಗನಾಥರಾವ್ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ 2024–25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ದ್ವೇಷದ ಭಾವನೆಯಿದೆ. ಈ ಭಾವನೆ ಹೋಗಲಾಡಿಸಿ ಪ್ರೀತಿಯಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕು. ಯುವ ಜನಾಂಗ ದುಶ್ಚಟಗಳಿಗೆ ದಾಸವಾಗಿ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು ಇಂತವರಿಗೆ ಮಾರ್ಗದರ್ಶನಮಾಡಿ ಉತ್ತಮ ದಾರಿಗೆ ಮರಳುವಂತೆ ಮಾಡಬೇಕಾಗಿದೆ ಎಂದರು.
ಶಿಕ್ಷಣ ಪಡೆದ ವಿದ್ಯಾವಂತರು ಸಮಾಜಕ್ಕೆ ಒಳ್ಳೆ. ಕಾರ್ಯ ಮಾಡಬೇಕು. ಆದರೆ, ಪ್ರಸ್ತುತ ಬಹುತೇಕ ವಿದ್ಯಾವಂತರೇ ಜನರಿಗೆ ಅನ್ಯಾಯ ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ. ಪ್ರಾಮಾಣಿಕವಾಗಿದ್ದು ವಂಚನೆ ಇಲ್ಲದೆ ಬದುಕುವುದೇ ಸಾರ್ಥಕ ಜೀವನವಾಗಿದೆ. ಆತ್ಮತೃಪ್ತಿಯಿಂದ ಸಂತೋಷವಾಗಿರುವುದನ್ನು ಕಲಿಯಬೇಕು. ಸಂತೋಷ ನಮ್ಮೊಳಗೆ ಹುಡುಕಿ ಕೊಳ್ಳಬೇಕು. ಸರ್ಕಾರಿ ನೌಕರರಾಗಿದ್ದಾಗ ಕೆಲವೊಂದು ತಪ್ಪುಗಳನ್ನು ಮಾಡುವುದು ಸಹಜ. ಆ ತಪ್ಪುಗಳಿಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದು ಪರಿಹಾರವಾಗುತ್ತದೆ. ನನ್ನ ವೃತ್ತಿ ಜೀವನದಲ್ಲಿ 26 ವರ್ಷ ಸರ್ಕಾರಿ ವೈದ್ಯನಾಗಿ ಕೆಲಸ ಮಾಡಿ ದ್ದೇನೆ. ನಂತರ ಕೆಲಸ ಬಿಟ್ಟು ಹುಟ್ಟೂರಿನ ಜನ ತೋರಿಸಿದ ಪ್ರೀತಿ ಋಣ ತೀರಿಸಲು ಅತಿ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಬಡವರಿಗೆ ಉಚಿತವಾಗಿಯೂ ಸೇವೆ ಸಲ್ಲಿಸಿದ್ದೇನೆ ಎಂದರು.ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್.ಗಣಪತಿ ಮಾತನಾಡಿ, ನಿವೃತ್ತ ನೌಕರರ ಸಂಘ 2011 ರಲ್ಲಿ ಸ್ಥಾಪನೆಗೊಂಡಿತು. ನಿವೃತ್ತ ನೌಕರರು ವರ್ಷಕ್ಕೊಮ್ಮೆ ಸೇರುವುದರಿಂದ ಸಂಬಂಧಗಳು ಗಟ್ಟಿಗೊಳ್ಳಲು ಸಾಧ್ಯ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಿವೃತ್ತರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಿವಕುಮಾರ್ ವಾರ್ಷಿಕ ಜಮಾ–ಖರ್ಚು ಮಂಡಿಸಿ ಪ್ರಸ್ತುತ ಸಂಘದಲ್ಲಿ 115 ಸದಸ್ಯರಿದ್ದಾರೆ. ಮುಂದೆ ಸಂಘದ ಸದಸ್ಯರನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ 75 ವರ್ಷ ಪೂರೈಸಿದ ನಿವೃತ್ತ ಸರ್ಕಾರಿ ನೌಕರರಾದ ಡಾ.ಎಚ್.ಎಸ್.ಸತೀಶ್, ಜಯಮ್ಮ, ಸೂರ್ಯನಾರಾಯಣ, ಎಚ್.ಎಸ್.ಶಂಕರ್, ಆರ್.ಜಯಣ್ಣ, ಎಂ.ಪಿ.ಚಕ್ರಪಾಣಿ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಆರ್. ಸುನಂದಮ್ಮ ವಹಿಸಿದ್ದರು. ಉಪಾಧ್ಯಕ್ಷ ಶಶಿಮೋಹನ್, ಎಂ.ಎಸ್.ಚಿಣ್ಣಪ್ಪ, ಎಂ.ಪಿ.ಚಕ್ರಪಾಣಿ ಇದ್ದರು. ಕೆ.ಎಸ್.ರಾಜಕುಮಾರ್ ಸ್ವಾಗತಿಸಿದರು. ಪಿ.ಎಸ್.ವಿದ್ಯಾನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪವನಂಜಯ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))