ಸಾರಾಂಶ
ರಾಜ್ಯ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ವಿಶ್ವ ಹಿರಿಯ ನಾಗರಿಕರ ದಿನದಂದೇ ನಿವೃತ್ತ ನೌಕರರು ಬೀದಿಗಿಳಿದು ಹೋರಾಟ ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸಿದರು.
ಹಾವೇರಿ: ರಾಜ್ಯ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ವಿಶ್ವ ಹಿರಿಯ ನಾಗರಿಕರ ದಿನದಂದೇ ನಿವೃತ್ತ ನೌಕರರು ಬೀದಿಗಿಳಿದು ಹೋರಾಟ ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ನಿವೃತ್ತ ನೌಕರರಿಗೆ ಸೌಲಭ್ಯ ಮತ್ತು ಪಿಂಚಣಿ ನೀಡುವ ನಿಟ್ಟಿನಲ್ಲಿ ತಾರತಮ್ಯ ನಡೆ ಅನುಸರಿಸುತ್ತಿದೆ. ೨೦೨೨ರ ಜುಲೈ ೧ರಿಂದ ೨೦೨೪ರ ಜುಲೈ ೩೧ರ ಅವಧಿಯಲ್ಲಿ ನಿವೃತ್ತರಿಗೆ ನೀಡಬೇಕಾದ ಮರಣ ಮತ್ತು ನಿವೃತ್ತಿ ವೇತನ (ಡಿಸಿಆರ್‌ಜಿ), ನಿವೃತ್ತಿ ನಂತರದ ಏಕಗಂಟಿನ ನಿಧಿ (ಕಮ್ಯುಟೇಶನ್), ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಆರನೇ ವೇತನ ಆಯೋಗದಂತೆ ಜಮಾ ಮಾಡಲಾಗಿದೆ. ಆದರೆ ಈ ಮೊತ್ತವನ್ನು ಏಳನೇ ವೇತನ ಆಯೋಗದ ಶಿಫಾರಸಿನಂತೆ ಜಮಾ ಮಾಡಬೇಕೆಂದು ಆಗ್ರಹಿಸಿದರು.ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ತೀವ್ರಗತಿಯಲ್ಲಿ ಹೆಚ್ಚಳವಾಗಿವೆ. ವೈದ್ಯಕೀಯ ವೆಚ್ಚ, ಶಿಕ್ಷಣ ವೆಚ್ಚದ ಹೆಚ್ಚಳದಿಂದ ಕುಟುಂಬ ನಿರ್ವಹಣೆಯಲ್ಲಿ ಆರ್ಥಿಕತೆ ಹೊರೆಯಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ನಿವೃತ್ತ ನೌಕರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಈಗಾಗಲೇ ಕೊರತೆ ಆಗಿರುವ ವೇತನವನ್ನು ಮರುಹೊಂದಾಣಿಕೆ ಮಾಡಿ ಮುಂಬರುವ ಪಿಂಚಿಣಿಯಲ್ಲೇ ಸೇರಿಸಿ ಪಾವತಿ ಮಾಡಬೇಕು. ಈ ಕುರಿತು ಪರಿಷ್ಕೃತ ಆದೇಶವನ್ನು ಮಾಡಿ ಶೀಘ್ರವೇ ಬಾಕಿ ವೇತನ ಪಾವತಿ ಮಾಡಬೇಕೆಂದು ಒತ್ತಾಯಿಸಿದರು. ಈ ಕುರಿತು ತಮ್ಮ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಅವರ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಆರ್.ಡಿ. ಹೊಂಬರಡಿ, ಎಂ.ಎಫ್. ಬಡಿಗೇರ, ಎನ್.ಐ. ಇಚ್ಚಂಗಿ, ಎಸ್.ಎಂ. ಮಲ್ಲಪ್ಪನವರ, ಕೆ.ಎಸ್. ಪಾಟೀಲ, ವಿ.ಎಚ್. ಸೊರಟೂರ, ಎಸ್.ಜಿ. ಕೋರಿ, ಅಶೋಕ ಬಣಕಾರ, ನಾಡರ ಮತ್ತಿತರರು ಪಾಲ್ಗೊಂಡಿದ್ದರು.