ನಿವೃತ್ತ ಎಂಜಿನಿಯರ್ ವೆಂಕಟೇಗೌಡ ನಿಧನ

| Published : Nov 23 2024, 01:16 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ನೀರಾವರಿ ಯೋಜನೆಗೆ ನೀಲನಕ್ಷೆ ರೂಪಿಸಿ, ಅದರ ಸಾಕಾರಕ್ಕೆ ಶ್ರಮಿಸಿದ್ದ ನಿವೃತ್ತ ಎಂಜಿನಿಯರ್ ತಾಲೂಕಿನ ಅಗ್ರಹಾರ ವಳಗೆರಹಳ್ಳಿಯ ವೆಂಕಟೇಗೌಡ(63) ಕಜಕಿಸ್ತಾನದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

ಚನ್ನಪಟ್ಟಣ: ತಾಲೂಕಿನ ನೀರಾವರಿ ಯೋಜನೆಗೆ ನೀಲನಕ್ಷೆ ರೂಪಿಸಿ, ಅದರ ಸಾಕಾರಕ್ಕೆ ಶ್ರಮಿಸಿದ್ದ ನಿವೃತ್ತ ಎಂಜಿನಿಯರ್ ತಾಲೂಕಿನ ಅಗ್ರಹಾರ ವಳಗೆರಹಳ್ಳಿಯ ವೆಂಕಟೇಗೌಡ(63) ಕಜಕಿಸ್ತಾನದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

ಕಜಕಿಸ್ತಾನಕ್ಕೆ ಕುಟುಂಬದೊಂದಿಗೆ ಪ್ರವಾಸ ಕೈಗೊಂಡಿದ್ದ ಅವರು, ಪ್ರವಾಸ ಮುಗಿಸಿ ಹಿಂದಿರುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ವೆಂಕಟೇಗೌಡರು ೧೯೮೭ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಆರಂಭಿಸಿ, ಯುಕೆಪಿ ನಾಲಾ-೧ರ ಮುಖ್ಯ ಎಂಜಿನಿಯರ್ ಆಗಿಯೂ ಸೇವೆ ಸಲ್ಲಿಸಿದ್ದರು. ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಅಧೀಕ್ಷಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕಾವೇರಿ ನೀರಾವರಿ ನಿಗಮದಲ್ಲಿದ್ದಾಗ ತಾಲೂಕಿನ ಜೊತೆಗೆ ಜಿಲ್ಲೆಯ ನೀರಾವರಿ ಕನಸಿನ ವೈ.ಜಿ. ಗುಡ್ಡ, ಮಂಚನಬೆಲೆ, ಕಣ್ವ ಯೋಜನೆಗೆ ನೀಲನಕ್ಷೆ ರೂಪಿಸುವ ಜೊತೆಗೆ, ಸತ್ತೆಗಾಲದಿಂದ ರಾಮನಗರ ಜಿಲ್ಲೆಗೆ ನೀರು ತರುವ ಯೋಜನೆಗೂ ಶ್ರಮಿಸಿದರು. ಒಬ್ಬ ಸರ್ಕಾರಿ ಅಧಿಕಾರಿಯಾಗಿ ರೈತರ ಬದುಕು ಹಸನು ಮಾಡುವ ಯೋಜನೆಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಮೃತದೇಹ ಶನಿವಾರ ಚನ್ನಪಟ್ಟಣಕ್ಕೆ ತರಲಿದ್ದು, ಅಂತ್ಯಕ್ರಿಯೆ ನ. ೨೪ರ ಭಾನುವಾರ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪೊಟೋ೨೨ಸಿಪಿಟಿ೨: ವೆಂಕಟೇಗೌಡ