ವಿದ್ಯಾರ್ಥಿಗಳು ಎತ್ತರಕ್ಕೇರಲು ಕಾಯಿದೆ ರೂಪಿಸಬೇಕು

| Published : Jun 30 2025, 12:34 AM IST

ಸಾರಾಂಶ

ಅಕ್ಷರ ಮತ್ತು ಆರೋಗ್ಯ ಸುಭಿಕ್ಷವಾಗಿ ಇರದ ದೇಶ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಶಿಕ್ಷಕರ ನಿವೃತ್ತಿ ವಯಸ್ಸನ್ನು 60 ರಿಂದ 70 ವರ್ಷಕ್ಕೇರಿಸಿ ಅವರ ಅನುಭವದ ಅನುಕೂಲ ಪಡೆದು ವಿದ್ಯಾರ್ಥಿಗಳು ಶೈಕ್ಷಣಿಕ ವಾಗಿ ಎತ್ತರದ ಸ್ಥಾನಕ್ಕೇರಲು ರಾಜ್ಯ ಸರ್ಕಾರ ಹೊಸ ಕಾಯಿದೆ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.ಪಟ್ಟಣದ ಈಶ್ವರನಗರದಲ್ಲಿ ನಿವೃತ ಶಿಕ್ಷಕಿ ಸಿ.ಇ. ತ್ರಿವೇಣಿ ಅವರಿಗೆ ಸಮಾನ ಮನಸ್ಕ ಶಿಕ್ಷಕರು ಮತ್ತು ಬಡಾವಣೆಯ ನಿವಾಸಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಬುದ್ದಿವಂತಮತ್ತು ಅನುಭವಿ ಶಿಕ್ಷಕರಕೊರತೆಯಿದ್ದು ನಿವೃತ್ತಿ ವಯಸ್ಸು ಏರಿಸಿದರೆ ಇದರ ಬವಣೆ ನೀಗಲಿದೆ ಎಂದರು.ಅಕ್ಷರ ಮತ್ತು ಆರೋಗ್ಯ ಸುಭಿಕ್ಷವಾಗಿ ಇರದ ದೇಶ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮ್ಮಯ್ಯ ಅವರ ಸರ್ಕಾರದಲ್ಲಿ ಇವೆರಡು ಇಲ್ಲದೆ ಮಹಿಳೆಯರಿಗೆ 2 ಸಾವಿರ ನೀಡಿ ಉಚಿತ ಬಸ್ ಪ್ರಯಾಣ ನೀಡಿರುವುದೇ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.2004ರಲ್ಲಿ ನಾನು ಶಿಕ್ಷಣ ಸಚಿವನಾಗಿದ್ದಾಗ ಅಂದು ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನನ್ನನ್ನು ಸೇರಿದಂತೆ ಕೆಲವುಶಿಕ್ಷಕ ಬಾಂಧವರನ್ನು ಕರೆಯಿಸಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಉತ್ತುಂಗ ಸ್ಥಾನದಲ್ಲಿದೆ ಎಂದುಸನ್ಮಾನಿಸಿದ್ದಾಗಿ ಅವರು ಸ್ಮರಿಸಿದರು.ಇಲಾಖೆಯಲ್ಲಿನ ನನ್ನ ಬಿಗಿ ಕ್ರಮಗಳು ಮತ್ತು ಕಠಿಣ ನಿಯಮ ಸಹಿಸದ ಕೆಲವು ಮಠಾಧೀಶರು‌, ಚರ್ಚ್ ನ ಪಾದ್ರಿಗಳು ಮತ್ತು ಮಸೀದಿಯ ಮುಲ್ಲಾಗಳು ಮುಖ್ಯ ಮಂತ್ರಿಗಳಿಗೆ ಚಾಡಿ ಹೇಳಿ ನನ್ನನ್ನು ಸಚಿವ ಸ್ಥಾನದಿಂದ ತೆಗೆಸಿದ್ದರು. ಇದು ದೇಶದ ಪ್ರಸ್ತುತ ಸ್ಥಿತಿ ಎಂದು ವಿಷಾದ ವ್ಯಕ್ತಪಡಿಸಿದ ವಿಶ್ವನಾಥ್‌ ಅವರು, ಸತ್ಯ ಹೇಳುವವರು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವವರು ಯಾರಿಗೂ ಬೇಡವಾಗಿದೆ ಎಂದು ಅವರು ನೊಂದು ನುಡಿದರು.ಶಿಕ್ಷಕರುಗಳು ಸೇವೆಯಿಂದ ನಿವೃತರಾದ ನಂತರ ತಮ್ಮ ವಿದ್ಯೆಯನ್ನು ಧಾರೆ ಎರೆದು ಸದೃಢ ಮತ್ತು ಶಿಕ್ಷಿತಸಮಾಜದ ಕಟ್ಟುವ ಕೆಲಸ ಮಾಡಬೇಕು. ಪ್ರತಿಯೊಬ್ಬರು ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ನಿವೃತ ಡಿಡಿಪಿಐ ಸಿ.ಎಸ್. ರಾಮಲಿಂಗು, ಶಿಕ್ಷಣ ತಜ್ಞ ಡಾ.ಜಿ. ಅಚ್ಚುತರಾವ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರಾಜಶೇಖರ, ರಾಜ್ಯಶಾಸ್ತ್ರ ಉಪನ್ಯಾಸಕ ಕೆ.ಎಲ್. ರಮೇಶ್ ಮಾತನಾಡಿದರು. ಅರಕೆರೆವಿರಕ್ತ ಮಠದ ಸಿದ್ದೇಶ್ವರ ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ ಶಿಕ್ಷಕಿ ಸಿ.ಇ. ತ್ರಿವೇಣಿ ದಂಪತಿಯನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಪುರಸಭೆ ಮಾಜಿ ಉಪಾಧ್ಯಕ್ಷ ನಾರತ್ನಮ್ಮ, ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಕೆ.ಎಲ್. ಜಗದೀಶ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ವಕೀಲ ಕೆ.ವಿ. ಮಹೇಶ್, ಮುಖಂಡರಾದ ಅರುಣ್ ಬಿ. ನಗರಗುಂದ್, ವೈ.ಎಸ್. ಚಂದ್ರಶೇಖರ್, ಸಣ್ಣಲಿಂಗಪ್ಪ, ಎಂ.ಬಿ. ಲೋಕನಾಥ್, ನಾಗಭೂಷಣ್, ಮಂಚೇಗೌಡ ಮೊದಲಾದವರು ಇದ್ದರು.