ಚಿಕ್ಕಮಗಳೂರುಕೃಷಿಯಲ್ಲಿ ಹೆಚ್ಚು ರಾಸಾಯನಿಕ, ಕ್ರಿಮಿನಾಶಕ ಬಳಸುತ್ತಿರುವುದರಿಂದ ನಾವು ತಿನ್ನುತ್ತಿರುವ ಆಹಾರವೇ ವಿಷ ಮಿಶ್ರಿತವಾಗಿದೆ. ವಿಷಮುಕ್ತ ಆಹಾರಕ್ಕಾಗಿ ಸಾವಯವ ಕಷಿ ಪದ್ಧತಿಯೊಂದಿಗೆ ಸಿರಿಧಾನ್ಯ ಬಳಸಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.

- ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೃಷಿಯಲ್ಲಿ ಹೆಚ್ಚು ರಾಸಾಯನಿಕ, ಕ್ರಿಮಿನಾಶಕ ಬಳಸುತ್ತಿರುವುದರಿಂದ ನಾವು ತಿನ್ನುತ್ತಿರುವ ಆಹಾರವೇ ವಿಷ ಮಿಶ್ರಿತವಾಗಿದೆ. ವಿಷಮುಕ್ತ ಆಹಾರಕ್ಕಾಗಿ ಸಾವಯವ ಕಷಿ ಪದ್ಧತಿಯೊಂದಿಗೆ ಸಿರಿಧಾನ್ಯ ಬಳಸಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ನಗರದ ಎಐಟಿ ಕಾಲೇಜಿನ ಆಂಫಿ ಥಿಯೇಟರ್‌ನಲ್ಲಿ ಭಾನುವಾರ ಸಿರಿಧಾನ್ಯ ಮೇಳದ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳೇ ರಾಮಬಾಣ. ಸಾವಯವ ಕೃಷಿಯಲ್ಲಿ ಬೆಳೆದ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲೂ ಸಿರಿಧಾನ್ಯಗಳನ್ನು ಬೆಳೆಯಬಹುದು. ಸರ್ಕಾರ ಕೂಡ ಸಿರಿಧಾನ್ಯ ಗಳನ್ನು ಹೆಚ್ಚು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.ಬರ ನಿರೋಧಕ ಶಕ್ತಿ ಸಿರಿಧಾನ್ಯಗಳಿಗೆ ಇರುವುದರಿಂದ ಮಳೆ ಕಡಿಮೆಯಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದು. ಸಿರಿ ಧಾನ್ಯಗಳಿಂದ ಮಧುಮೇಹ, ಹೃದಯ ಬೇನೆ ಮತ್ತಿತರೆ ಕಾಯಿಲೆ ತಡೆಯಬಹುದು, ಅಧಿಕ ಪೌಷ್ಠಿಕತೆ ಹೊಂದಿವೆ. ಹೀಗಾಗಿ ಕೃಷಿ ಕುಟುಂಬದಲ್ಲಿರುವ ಎಲ್ಲರೂ ಸಾವಯವ ಮತ್ತು ಸಿರಿಧಾನ್ಯಗಳ ಕೃಷಿಗೆ ಹೆಚ್ಚು ಒತ್ತುಕೊಡಬೇಕು ಎಂದು ಮನವಿ ಮಾಡಿದರು.ಉದ್ಘಾಟನೆ ನೆರವೇರಿಸಿ ಮಾತನಾಡಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪ್ರಾಕೃತಿಕ ಸರಪಳಿಯನ್ನು ಮನುಷ್ಯ ತುಂಡರಿ ಸಿರುವುದರಿಂದ ಸ್ವಾವಲಂಬಿಯಾಗಬೇಕಿದ್ದ ರೈತ ಇಂದು ಪರಾವಲಂಬಿಯಾಗಬೇಕಿದೆ. ಎಲ್ಲ ಜೀವಜಂತುಗಳಿಗೂ ಭಗ ವಂತ ಕೆಲ ಶಕ್ತಿ ಮತ್ತು ಮಿತಿಗಳನ್ನು ಕೊಟ್ಟಿದ್ದಾನೆ. ಹುಳ ಹುಪ್ಪಟೆಗಳನ್ನು ಕಪ್ಪೆ ತಿಂದರೆ, ಕಪ್ಪೆ ಹಾವಿಗೆ ಆಹಾರವಾಗಿತ್ತು. ಹಾವು ನವಿಲಿನ ಆಹಾರವಾಗುತ್ತಿತ್ತು. ಆದರೆ, ಭೂಮಿಗೆ ಕ್ರಿಮಿನಾಶಕ ಮತ್ತು ರಾಸಾಯನಿಕ ಸುರಿದಿರುವ ಪರಿಣಾಮ ಇಂತಹ ಪ್ರಾಕೃತಿಕ ಸರಪಳಿಯೇ ತುಂಡಾಗಿದೆ. ಹೀಗಾಗಿ ಅಮೃತವಾಗಬೇಕಿದ್ದ ತಾಯಿ ಹಾಲೇ ವಿಷವಾಗುತ್ತಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಸಹಜ ಕೃಷಿ ಬಿಟ್ಟಿದ್ದೇವೆ. ಸ್ವಾವಲಂಬನೆಯಿಂದ ಪರಾವಲಂಬಿಗಳಾಗಿದ್ದೇವೆ. ಮತ್ತೆ ಸಹಜ ಕೃಷಿಯತ್ತ ಹೊರಳುವುದೇ ಈಗಿರುವ ಏಕೈಕ ಮಾರ್ಗ. ಇಂತಹ ಸಾವಯವ ಕೃಷಿ ಮೇಳಗಳು ರೈತನನ್ನು ಸ್ವಾವಲಂಬಿ ಯಾಗಿಸಲು ಪೂರಕವಾಗಲಿ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಕೃಷಿ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ. ಕೃಷಿ ಕುಟುಂಬದಲ್ಲೇ ಹುಟ್ಟಿದ್ದರೂ ಇಂದು ಕೃಷಿಯಿಂದ ದೂರ ಉಳಿಯುತ್ತಿದ್ದಾರೆ. ಕೃಷಿ ಬದುಕು ಲಾಭದಾಯಕ, ಇದರಲ್ಲಿ ನೆಮ್ಮದಿ ಕಂಡುಕೊಳ್ಳಬಹುದು ಎಂಬುದನ್ನು ತೋರಿಸಿಕೊಡಬೇಕಿದೆ. ಕೃಷಿ ಬದುಕು ನಾಶವಾದರೆ ಇಡೀ ದೇಶ, ಮಾನವ ಕುಲ ನಾಶವಾದಂತೆ. ಹೀಗಾಗಿ ಕೃಷಿ ಬದುಕಿಗೆ ಹೆಚ್ಚಿನ ಮಹತ್ವ ಕೊಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ಕರಾಳ ದಿನಗಳಲ್ಲಿ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಹಾಗೂ ಗ್ಯಾರಂಟಿ ಯೋಜನೆಗಳ ಮಹತ್ವದ ಬಗ್ಗೆ ತಿಳಿಸಿದರು. ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿದರು. ರೈತ ಮುಖಂಡ ಹೊನ್ನೂರು ಪ್ರಕಾಶ್ ಉಪನ್ಯಾಸ ನೀಡಿದರು. ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಎಚ್.ಕುಮಾರಸ್ವಾಮಿ, ರೈತ ಮುಖಂಡರಾದ ಬಸವರಾಜಪ್ಪ, ಕಲ್ಮರುಡಪ್ಪ, ಸುರೇಶ್, ಬಾಲ ಕೃಷ್ಣ, ಕೃಷಿ ವಿಜ್ಞಾನಿ ಡಾ.ಕೃಷ್ಣಮೂರ್ತಿ, ರವಿ ಉಪಸ್ಥಿತರಿದ್ದರು. ಸ್ವಾಗತಿಸಿದ ಜಂಟಿ ಕೃಷಿ ನಿರ್ದೇಶಕ ಡಾ.ತಿರುಮಲೇಶ್ ಪ್ರಾಸ್ತಾವಿಕ ಮಾತನಾಡಿದರು. ರೂಪನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಸಿರಿಧಾನ್ಯ ಪಾಕ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು. ಕೃಷಿ ಮತ್ತು ಸಂಬಂಧಿತ ಇಲಾಖೆಗಳಿಂದ ವಸ್ತು ಪ್ರದರ್ಶನ, ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನದ ಜತೆಗೆ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. 4 ಕೆಸಿಕೆಎಂ 5ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಆಂಫಿ ಥಿಯೇಟರ್‌ನಲ್ಲಿ ಭಾನುವಾರ ಸಿರಿಧಾನ್ಯ ಮೇಳದ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಕೆಫೆಕ್ಸ್‌ ಅಧ್ಯಕ್ಷ ಬಿ.ಎಚ್‌. ಹರೀಶ್‌ ಇದ್ದರು.