ಸಾರಾಂಶ
ರಾಮನಗರ: ಡೇರಿ ಚುನಾವಣಾ ಪ್ರಕ್ರಿಯೆ ನಡೆಸಲು ತಡವಾಗಿ ಆಗಮಿಸಿದ್ದಲ್ಲದೆ ನಾಮಪತ್ರ ಸಲ್ಲಿಸಲು ಸಮಯ ಮುಗಿದ ಹಾಗೂ ಕೋರಂ ಕೊರತೆ ನೆಪವೊಡ್ಡಿ ಚುನಾವಣೆ ಮುಂದೂಡಿದ ಚುನಾವಣಾಧಿಕಾರಿಯನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡು ಮನೆಯೊಳಗೆ ಕೂಡಿ ಹಾಕಲು ಯತ್ನಿಸಿದ ಘಟನೆ ತಾಲೂಕಿನ ಬಿಡದಿ ಹೋಬಳಿ ಬಿ.ಗೊಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.ಈ ಘಟನೆಯಿಂದಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಚುನಾವಣಾಧಿಕಾರಿಯನ್ನು ಸುರಕ್ಷಿತವಾಗಿ ಕರೆದೊಯ್ದರು. ಮತ್ತೊಂದೆಡೆ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಬಿ.ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬೆಳಗ್ಗೆ 9 ಗಂಟೆಗೆ ಸಂಘದ ಕಚೇರಿಯಲ್ಲಿಯೇ ಚುನಾವಣೆ ನಿಗದಿಯಾಗಿತ್ತು. ಆದರೆ, ಚುನಾವಣೆ ಪ್ರಕ್ರಿಯೆ ನಡೆಸಬೇಕಾಗಿದ್ದ ರಿಟರ್ನಿಂಗ್ ಅಧಿಕಾರಿಯಾದ ಸಹಕಾರ ಸಂಘದ ಹಿರಿಯ ನಿರೀಕ್ಷಕಿ ಪದ್ಮಾವತಿ ಬೆಳಗ್ಗೆ 9.45ಕ್ಕೆ ಸಂಘದ ಕಚೇರಿಗೆ ಆಗಮಿಸಿದರು.ಈ ವೇಳೆಗಾಗಲೇ 10 ನಿರ್ದೇಶಕರ ಪೈಕಿ ಮೂಡಲ ಗಿರಿಯಪ್ಪ, ರತ್ನಮ್ಮ, ಜಿ.ಡಿ. ಜಗದೀಶ್ , ಶಂಕರಯ್ಯ, ಜಿ.ಎಸ್. ಮುದ್ದಯ್ಯ, ರವಿಕುಮಾರ್ ಸೇರಿ 6 ಮಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಾಮಪತ್ರ ಸಲ್ಲಿಸುವ ಸಂಬಂಧ ನಿರ್ದೇಶಕರು ಚರ್ಚೆ ನಡೆಸಲು ಹೊರ ಹೋಗಿ ಬರುವ ವೇಳೆಗೆ ಚುನಾವಣಾಧಿಕಾರಿ ಪದ್ಮಾವತಿ ಕೋರಂ ಅಭಾವ ಇದೆ. ಜೊತೆಗೆ ನಾಮಪತ್ರ ಸಲ್ಲಿಸಲು ಸಮಯವೂ ಮೀರಿದೆ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ನಿರ್ದೇಶಕರು ಚುನಾವಣಾಧಿಕಾರಿಯನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ. ಚುನಾವಣೆ ರದ್ದಾದ ವಿಷಯ ತಿಳಿಯುತ್ತಿದ್ದಂತೆ ಸಂಘದ ಬಳಿ ಜಮಾಯಿಸಿದ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಚುನಾವಣೆ ನಡೆಸಬೇಕೆಂದು ಪಟ್ಟು ಹಿಡಿದರು.ಈ ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಚುನಾವಣಾಧಿಕಾರಿಯಿಂದ ವಿವರ ಪಡೆದು ನಿರ್ದೇಶಕರು ಮತ್ತು ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ರಿಟರ್ನಿಂಗ್ ಅಧಿಕಾರಿ ಪದ್ಮಾವತಿ ಕೋರಂ ಅಭಾವ ಹಾಗೂ ನಾಮಪತ್ರ ಸಲ್ಲಿಕೆಗೆ ಸಮಯ ಮುಗಿದ ಕಾರಣ ಚುನಾವಣೆ ಮುಂದೂಡಲಾಗಿದೆ ಎಂದು ಹೇಳಿ ಸಂಘದ ಕಚೇರಿಯಿಂದ ಹೊರಟರು.ಅಲ್ಲಿಯೇ ನೆರೆದಿದ್ದ ಗ್ರಾಮಸ್ಥರು ರಿಟರ್ನಿಂಗ್ ಅಧಿಕಾರಿಯನ್ನು ಹೊರ ಹೋಗಲು ಅವಕಾಶ ನೀಡದೆ ಮಾತಿನ ಚಕಮಕಿ ನಡೆಸಿದರು. ಪೊಲೀಸರ ರಕ್ಷಣೆಯಲ್ಲಿ ಹೊರ ಹೋದ ಅಧಿಕಾರಿ ಪದ್ಮಾವತಿ ಅವರನ್ನು ಮಹಿಳೆಯರು ಎಳೆದಾಡಿ ಮನೆಯಲ್ಲಿ ಕೂಡಿ ಹಾಕಲು ಪ್ರಯತ್ನಿಸಿದರು. ಕೊನೆಗೆ ಪೊಲೀಸರು ಅವರನ್ನು ರಕ್ಷಿಸಿ ಕಳುಹಿಸಿದರು.ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಿರ್ದೇಶಕರು ಹಾಗೂ ಗ್ರಾಮಸ್ಥರು, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜುರವರ ಅಣತಿಯಂತೆ ಚುನಾವಣಾಧಿಕಾರಿ ನಡೆದುಕೊಳ್ಳುತ್ತಿದ್ದಾರೆ. ಉದ್ದೇಶ ಪೂರಕವಾಗಿ ಡೇರಿ ಚುನಾವಣೆ ಮುಂದೂಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.ಈಗಾಗಲೇ ಡೇರಿ ಚುನಾವಣೆ ಎರಡು ಬಾರಿ ಮುಂದೂಡಲಾಗಿತ್ತು. ಈಗ ಮೂರನೇ ಬಾರಿ ನಿಗದಿಯಾಗಿದ್ದ ಚುನಾವಣೆಯೂ ರದ್ದಾಗಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಇರುವುದು ಸ್ಪಷ್ಟವಾಗಿದೆ. ಪಿ.ನಾಗರಾಜುರವರು ತಮ್ಮ ಹಿತಾಸಕ್ತಿಗಾಗಿ ಸಂಘವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಚುನಾವಣಾಧಿಕಾರಿಗಳ ತಪ್ಪಿನಿಂದ ಡೇರಿ ಚುನಾವಣೆ ಮೂರು ಬಾರಿ ಮುಂದೂಡಿಕೆಯಾಗಿದ್ದು, ಸೂಪರ್ ಸೀಡ್ ಆಗುವ ಆತಂಕ ಎದುರಾಗಿದೆ. ಈ ಕೂಡಲೇ ಹಿರಿಯ ಅಧಿಕಾರಿಗಳು ಗಮನಹರಿಸಿ ಡೇರಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಾದಿ ಹಿಡಿಯುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಪಾಪಣ್ಣ, ಡೇರಿ ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ಭಾಗವಹಿಸಿದ್ದರು.