ಗ್ಯಾರಂಟಿ ಯೋಜನಾ ಸಮಿತಿ ವಿರುದ್ಧ ರೇವಣ್ಣ ಆರೋಪ ನಿರಾಧಾರ

| Published : Feb 08 2025, 12:33 AM IST

ಗ್ಯಾರಂಟಿ ಯೋಜನಾ ಸಮಿತಿ ವಿರುದ್ಧ ರೇವಣ್ಣ ಆರೋಪ ನಿರಾಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಎಚ್.ಡಿ.ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕಿನಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಕೆಲವು ಜನರನ್ನು ಯೋಜನೆಯಿಂದ ಕೈಬಿಡಲಾಗಿದೆ ಎಂಬುದಾಗಿ ಆರೋಪ ಮಾಡಿರುವುದು ನಿರಾಧಾರವಾಗಿದ್ದು, ರೇವಣ್ಣ ಅವರಿಗೆ ಮಾಹಿತಿ ಕೊರತೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಶಾಸಕ ಎಚ್.ಡಿ.ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕಿನಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಕೆಲವು ಜನರನ್ನು ಯೋಜನೆಯಿಂದ ಕೈಬಿಡಲಾಗಿದೆ ಎಂಬುದಾಗಿ ಆರೋಪ ಮಾಡಿರುವುದು ನಿರಾಧಾರವಾಗಿದ್ದು, ರೇವಣ್ಣ ಅವರಿಗೆ ಮಾಹಿತಿ ಕೊರತೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ ತಿಳಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ. ೪ರಂದು ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುವಾಗ ವಿನಾಕಾರಣ ರಾಜಕೀಯ ದುರುದ್ದೇಶದಿಂದ ಗ್ಯಾರಂಟಿ ಸಮಿತಿಯ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯವೈಖರಿಯ ಬಗ್ಗೆ ಮಾತನಾಡುವ ಮೊದಲು ಅಂಕಿಅಂಶಗಳನ್ನು ಪಡೆದುಕೊಂಡು ಮಾತನಾಡಲಿ ಎಂದರು.

ಚನ್ನರಾಯಪಟ್ಟಣ ತಾಲೂಕಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಾರಿಗೆ ತಂದಿರುವ ೫ ಯೋಜನೆಗಳು ಪಕ್ಷಾತೀತವಾಗಿ ಎಲ್ಲ ಫಲಾನುಭವಿಗಳಿಗೆ ತಲುಪುತ್ತಿದ್ದು, ಈ ಸಂಬಂಧ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಸೇರಿ ತಾಲೂಕಿನಲ್ಲಿ ಪ್ರವಾಸ ಮಾಡಿ, ಸದರಿ ಯೋಜನೆಗಳ ಪರಾಮರ್ಶೆ ನಡೆಸಿ, ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ.ಇದನ್ನು ತಾಲೂಕಿನ ಪಲಾನುಭವಿಗಳಿಗೆ ಪಕ್ಷಾತೀತವಾಗಿ ಸಮಿತಿಯು ತಲುಪಿಸುತ್ತಿರುವ ಬಗ್ಗೆ ಅಂಕಿಅಂಶಗಳನ್ನು ಪಡೆಯದೆ ಈ ರೀತಿ ಸುಖಾಸುಮ್ಮನೆ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದುದ್ದು ಎಂದರು.

ಯೋಜನೆಗಳು ಸಹಕಾರಿ: ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬಡ ಮಕ್ಕಳ ಕುಟುಂಬದ ನಿರ್ವಹಣೆಗೆ ವಿದ್ಯಾಭ್ಯಾಸಕ್ಕೆ, ದಿನನಿತ್ಯದ ಖರ್ಚು ವೆಚ್ಚಗಳಿಗೆ ತುಂಬಾ ಸಹಕಾರಿಯಾಗಿದ್ದು, ಶಕ್ತಿ ಯೋಜನೆಯಿಂದ ಬಡ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ಹೋಗಲು ಮತ್ತು ದೇವರ ದರ್ಶನ ಪಡೆಯಲು ತುಂಬಾ ಅನುಕೂಲವಾಗಿದೆ. ಇದರಿಂದ ಮುಜರಾಯಿ ಇಲಾಖೆಗೂ ಸಹ ಆರ್ಥಿಕತೆ ಹೆಚ್ಚಾಗಿದ್ದು, ಈ ಯೋಜನೆಗಳಿಂದ ಜನರ ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಉಂಟಾಗಿದ್ದು, ಈ ಯೋಜನೆಗಳಿಂದ ಜನರು ಖುಷಿಯಾಗಿ ಸರ್ಕಾರದ ೫ ಯೋಜನೆಗಳನ್ನು ಮೆಚ್ಚಿಕೊಂಡು, ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನು ಸಹಿಸದ ಮಾಜಿ ಸಚಿವರು ಅಂಕಿಅಂಶಗಳನ್ನು ನೋಡದೇ ನೀಡಿರುವ ಹೇಳಿಕೆಯನ್ನು ಸಮಿತಿಯು ಕಟುವಾಗಿ ವಿರೋಧಿಸುತ್ತದೆ ಎಂದರು.

ಸಮಿತಿ ಸದಸ್ಯ ವಕೀಲ ಎಸ್. ಎಂ. ನವೀನ್ ಕುಮಾರ್ ಮಾತನಾಡಿ, ದಂಡಿಗನಹಳ್ಳಿ ಹೋಬಳಿ, ಪ್ರಗತಿ ಪರಿಶೀಲನಾ ಸಭೆಯ ನಡೆಸುವ ಸಮಯದಲ್ಲಿ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಜಿ.ಹರೀಶ್ ಅವರು ಪಕ್ಕದಲ್ಲಿದ್ದರೂ ಮಾಹಿತಿಯನ್ನು ತರಿಸಿಕೊಳ್ಳದೇ ಕೇವಲವಾಗಿ ಹೇಳಿಕೆ ನೀಡಿರುವುದನ್ನು ಎಷ್ಟು ಸರಿ. ನಿಮ್ಮದೇ ಪಕ್ಷದ ಶಾಸಕರು ಕ್ಷೇತ್ರದಲ್ಲಿದ್ದು, ಅವರಿಂದ ಮಾಹಿತಿ ತರಿಸಿಕೊಂಡು ನೋಡಬಹುದಾಗಿತ್ತು. ಸದರಿ ಗ್ಯಾರಂಟಿ ಸಮಿತಿಯ ವಿಚಾರದಲ್ಲಿ ನಮ್ಮ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರು ಯಾವುದೇ ಗೊಂದಲ ಮಾಡುತ್ತಿರುವುದಿಲ್ಲ. ಹಿರಿಯರಾದ ಮಾಜಿ ಸಚಿವ ರೇವಣ್ಣ ಅವರು ಸದರಿ ಯೋಜನೆಗಳ ಬಗ್ಗೆ ಸಲಹೆ ಬೇಕಾದರೆ ನೀಡಲಿ, ಸದರಿ ರಾಜ್ಯ ಸರ್ಕಾರದ ಯೋಜನೆಯನ್ನು ರಾಜಕೀಯವಾಗಿ ದ್ವೇಷಿಸುತ್ತಿರುವುದು ಅವರ ಘನತೆಗೆ ಗೌರವ ತಕ್ಕದ್ದಾಗಿರುವುದಿಲ್ಲ. ದಂಡಿಗನಹಳ್ಳಿ ಕ್ಷೇತ್ರದಲ್ಲಿ ೫ ಯೋಜನೆಗೆ ಸಂಬಂಧಪಟ್ಟಂತೆ ಫಲಾನುಭವಿಗಳಿಗೆ ಯೋಜನೆ ತಲುಪದಿದ್ದಲ್ಲಿ ಅವರ ವಿಳಾಸ ನೀಡಲು ನಮ್ಮ ಸಮಿತಿಯೇ ಖುದ್ದಾಗಿ ಅವರ ಮನೆಯ ಬಾಗಿಲಿಗೆ ಹೋಗಿ, ತಲುಪಿಸಲು ಪಕ್ಷಾತೀತವಾಗಿ ಸಿದ್ಧವಿರುತ್ತದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಯು ತಾಲೂಕಿನಲ್ಲಿ ಶೇಕಡ ೯೬.೫ರಷ್ಟು ಫಲಾನುಭವಿಗಳಿಗೆ ತಲುಪಿದ್ದು, ೨೦೨೪ರ ಡಿಸೆಂಬರ್‌ವರೆಗೆ ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ೮೧,೧೧೧ ಫಲಾನುಭವಿಗಳು, ಅನ್ನಭಾಗ್ಯ ಯೋಜನೆಯಡಿ ೮೨,೩೦೧ ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿ ೮೨,೩೧೦ ಫಲಾನುಭವಿಗಳು, ಯುವನಿಧಿ ಯೋಜನೆಯಡಿ ೫೨೬ ಫಲಾನುಭವಿಗಳು ಮತ್ತು ಶಕ್ತಿ ಯೋಜನೆಯಡಿ ೨೫,೦೩೦ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

ಅನ್ನಭಾಗ್ಯಕ್ಕೆ ೪,೦೭,೧೫,೪೮೦ ರುಪಾಯಿಗಳು, ಗೃಹಲಕ್ಷ್ಮಿ ಯೋಜನೆಗೆ ೧೫,೭೧,೧೮,೦೦೦ ರು.ಗಳು, ಶಕ್ತಿಯೋಜನೆಗೆ ೨,೩೪,೪೨,೮೯೯ ರೂಗಳು. ಗೃಹಜ್ಯೋತಿ ಯೋಜನೆಗೆ ೨,೮೦,೨೨,೦೦೦ ರು.ಗಳು, ಯುವನಿಧಿಗೆ ೧೭,೪೩,೦೦೦ ರು.ಗಳು ಒಟ್ಟು ಪ್ರತಿ ತಿಂಗಳು ಸರ್ಕಾರ ನಮ್ಮ ತಾಲೂಕಿಗೆ ಒಟ್ಟು ೨೫ ಕೋಟಿ ರುಪಾಯಿಗಳಿಗಿಂತ ಹೆಚ್ಚು ಅನುದಾನವನ್ನು ನೀಡುತ್ತಿದೆ ಎಂದು ಎಲ್.ಪಿ.ಪ್ರಕಾಶ್ ಗೌಡ ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ಎ.ಪಿ.ರಂಗಸ್ವಾಮಿ, ಸಿ.ಎನ್. ಗಣೇಶ್, ಎ.ಆರ್.ನಾಗೇಶ್, ಬಿ.ಆರ್‌. ಕೆಂಪೇಗೌಡ, ಕೆ. ಎನ್.ನಾಗೇಶ್, ಮಿಲ್ಟ್ರಿ ಮಂಜು, ಎಸ್.ಎಂ.ಜನಾರ್ಧನ್, ಎಚ್.ಕೆ. ರಂಗಸ್ವಾಮಿ ಇದ್ದರು.