ಕೆಲಸಕ್ಕೆ ವೇಗ ನೀಡಿ ಜನರ ಅಲೆದಾಟ ತಪ್ಪಿಸಿ: ಕೆ.ನೇಮರಾಜನಾಯ್ಕ

| Published : Jul 02 2025, 12:19 AM IST

ಕೆಲಸಕ್ಕೆ ವೇಗ ನೀಡಿ ಜನರ ಅಲೆದಾಟ ತಪ್ಪಿಸಿ: ಕೆ.ನೇಮರಾಜನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಂದಾಯ ಇಲಾಖೆಯಲ್ಲಿನ ಹಲವಾರು ಸೇವೆಗಳನ್ನು ಜನತೆಗೆ ತಡವಿಲ್ಲದೇ ತಲುಪಿಸಲು ಗ್ರಾಮ ಸಹಾಯಕರಿಂದ ತಹಸೀಲ್ದಾರರವರೆಗಿನ ಎಲ್ಲ ಸಿಬ್ಬಂದಿ ಕೆಲಸಕ್ಕೆ ವೇಗ ನೀಡಬೇಕು.

ಕಂದಾಯ ದಿನಾಚರಣೆ ಸಮಾರಂಭ ಉದ್ಘಾಟಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಕೊಟ್ಟೂರು

ತಾಲೂಕಿನ ಕಂದಾಯ ಇಲಾಖೆಯಲ್ಲಿನ ಹಲವಾರು ಸೇವೆಗಳನ್ನು ಜನತೆಗೆ ತಡವಿಲ್ಲದೇ ತಲುಪಿಸಲು ಗ್ರಾಮ ಸಹಾಯಕರಿಂದ ತಹಸೀಲ್ದಾರರವರೆಗಿನ ಎಲ್ಲ ಸಿಬ್ಬಂದಿ ಕೆಲಸಕ್ಕೆ ವೇಗ ನೀಡಬೇಕು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಕೂಡ್ಲಿಗಿಯಿಂದ ತಾಲೂಕು ಪ್ರತ್ಯೇಕಗೊಂಡ ನಂತರ ಈ ಭಾಗದ ಕಂದಾಯ ಸೇವೆಗಳಲ್ಲಿ ವ್ಯತಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಕಚೇರಿಗೆ ಬರುವ ಜನರನ್ನು ಕೂರಿಸಿ ಸಮಾಧಾನದಿಂದ ಮಾತನಾಡಿಸಿ ಹೆಚ್ಚು ಅಲೆದಾಡಿಸದೇ ಅವರ ಕೆಲಸಗಳನ್ನು ಸಿಬ್ಬಂದಿ ತಡವಿಲ್ಲದೇ ಮಾಡಿಕೊಂಡಬೇಕು. ಇದಕ್ಕಾಗಿ ಗ್ರಾಮ ಸಹಾಯಕರು, ವಿಎ, ಆರ್‌ಐ, ಶಿರಸ್ತೇದಾರ, ಉಪ ತಹಸೀಲ್ದಾರ್ ಹಾಗೂ ತಹಸೀಲ್ದಾರರು ಒಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದರು.

ಗ್ರಾಮ ಲೆಕ್ಕಾಧಿಕಾರಿಗಳಿಗೆ ವೈಯಕ್ತಿಕವಾಗಿ ಲ್ಯಾಪ್ ಟಾಪ್ ವಿತರಣೆ ಮಾಡುವ ಯೋಜನೆಗೆ ಮುಂದಾಗಿದ್ದೆ, ಅಷ್ಟರಲ್ಲಿ ಸರ್ಕಾರವೇ ಲ್ಯಾಪ್ ಟಾಪ್ ನೀಡಿದೆ. ಕ್ಷೇತ್ರದ ಯಾವುದೇ ಇಲಾಖೆಯ ಸಿಬ್ಬಂದಿಗೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ತಿಳಿಸಿದಲ್ಲಿ ಅದನ್ನು ಮಾಡಿಕೊಡುವೆ. ನೌಕರರ ಅವಶ್ಯಕತೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುತ್ತೇನೆ. ಕಂದಾಯ ಇಲಾಖೆ ಮಾತ್ರವಲ್ಲದೇ ಎಲ್ಲ ಇಲಾಖೆಯವರು ಕಚೇರಿಗೆ ಬರುವ ಜನರನ್ನು ಗೌರವದಿಂದ ಕಾಣಬೇಕು. ಯಾರನ್ನೂ ಉದಾಸೀನ ಮಾಡಬಾರದು ಎಂದು ಸಲಹೆ ನೀಡಿದರು.

ತಹಸೀಲ್ದಾರ ಜಿ.ಕೆ. ಅಮರೇಶ ಮಾತನಾಡಿ, ತಾಲೂಕಿನಲ್ಲಿ ಕಂದಾಯ ಇಲಾಖೆಯ ಎಲ್ಲ ದಾಖಲೆಗಳ ಡಿಜಿಟಿಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೆ 7.23 ಲಕ್ಷ ಪ್ರತಿಗಳು ಶಿರಸ್ತೇದಾರರ ಸಹಿಯೊಂದಿಗೆ ಡಿಜಿಟಲ್ ಆಗಿದ್ದು, ಜನರು ನೇರವಾಗಿ ಪ್ರತಿ ಪಡೆಯಬಹುದಾಗಿದೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿರುವುದರಿಂದ ಕೆಲಸಕ್ಕೆ ವೇಗ ಸಿಗಲಿದೆ. ತಾಲೂಕಿನಾದ್ಯಂತ ನಮ್ಮ ಇಲಾಖೆಯ ಸಿಬ್ಬಂದಿಯವರು ಜನತೆಗೆ ಸೂಕ್ತವಾಗಿ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಪಂ ಇಒ ಡಾ. ಆನಂದಕುಮಾರ್, ಎಡಿಆರ್‌ಎಲ್ ವಿಜಯಕುಮಾರ್, ಗ್ರೇಡ್-2 ತಹಸೀಲ್ದಾರ ಎಂ.ಪ್ರತಿಭಾ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಯೋಗೀಶ್ವರ ದಿನ್ನೆ ಇದ್ದರು. ಮುಖಂಡರಾದ ಎಂಎಂಜೆ ಹರ್ಷವರ್ಧನ, ಮೃತ್ಯುಂಜಯ ಬಾದಾಮಿ, ಚಂದ್ರಶೇಖರ, ಕಾರ್ತಿಕ, ಬೂದಿ ಶಿವಕುಮಾರ ಸೇರಿ ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು ಸಿ.ಮ. ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರ ನೀಡಿರುವ ಲ್ಯಾಪ್‌ಟಾಪ್‌ಗಳನ್ನು 14 ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಾಗೂ ಫಲಾನುಭವಿಗಳಿಗೆ ಡಿಜಿಟಲ್ ದಾಖಲೆಗಳನ್ನು ಶಾಸಕರು ವಿತರಿಸಿದರು.