ಕಂದಾಯ ಇಲಾಖೆ ಸೌಲಭ್ಯ ತಲುಪಿಸಿ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ

| Published : Aug 19 2025, 01:00 AM IST

ಸಾರಾಂಶ

ಜಿಲ್ಲೆಯಲ್ಲಿ ಬಗರ್‌ಹುಕುಂ ಅರ್ಜಿಗಳು ವಿಲೇವಾರಿ ಆಗದೇ ಉಳಿದಿದ್ದರೆ ಅವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಗ್ರಾಮಾಡಳಿತ ಅಧಿಕಾರಿಗಳು ಇ ಆಫೀಸ್ ನಿರ್ವಹಣೆಯೊಂದಿಗೆ ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು.

ಹಾವೇರಿ: ಕಂದಾಯ ಇಲಾಖೆಯ ಯೋಜನೆಗಳ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು. ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಅವರ ಸಮಸ್ಯೆವನ್ನು ಆಲಿಸಿ ಪರಿಹರಿಸಿ, ಜನರು ಸರ್ಕಾರದ ಯೋಜನೆಗಳ ಕುರಿತು ಗೊಂದಲಕ್ಕೆ ಒಳಗಾದಲ್ಲಿ ಅದನ್ನು ಬಗೆಹರಿಸಿ ಆ ಯೋಜನೆಯ ಉಪಯುಕ್ತತೆಯನ್ನು ಅವರಿಗೆ ತಲುಪುವಂತೆ ಮಾಡಿ ಎಂದರು.ಜಿಲ್ಲೆಯಲ್ಲಿ ಬಗರ್‌ಹುಕುಂ ಅರ್ಜಿಗಳು ವಿಲೇವಾರಿ ಆಗದೇ ಉಳಿದಿದ್ದರೆ ಅವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಗ್ರಾಮಾಡಳಿತ ಅಧಿಕಾರಿಗಳು ಇ ಆಫೀಸ್ ನಿರ್ವಹಣೆಯೊಂದಿಗೆ ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಕಂದಾಯ ಗ್ರಾಮ, ಪಾವತಿ ಆಂದೋಲನ, ಭೂ ಸುರಕ್ಷೆ ಮೊದಲಾದವುಗಳ ಕುರಿತು ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದರು. ಜಿಲ್ಲೆಯ ಸಾರ್ವಜನಿಕರು ಒಂದೇ ವಿಷಯವಾಗಿ ಪದೇ ಪದೇ ಕಚೇರಿಗೆ ಅಲೆಯುಂತಾಗಬಾರದು. ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ, ಮುಂದಿನ ಸಭೆಯಲ್ಲಿ ಪ್ರಗತಿ ವರದಿ ಸಲ್ಲಿಸುವಂತೆ ಸೂಚನೆ ನೀಡಿ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು. ಸಭೆಯಲ್ಲಿ ತಹಸೀಲ್ದಾರ್ ರೇಣುಕಮ್ಮ, ಉಪತಹಸೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮಾಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಗಾಂಜಾ ಮಾರಾಟ ಆರೋಪ, ನಾಲ್ವರ ಬಂಧನ

ಹಾವೇರಿ: ಜಿಲ್ಲೆಯ ಅಕ್ಕಿಆಲೂರು ಗ್ರಾಮದ ದನದ ಮಾರುಕಟ್ಟೆ ಬಳಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ಹಾನಗಲ್ಲ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ ₹1.20 ಲಕ್ಷ ಮೌಲ್ಯದ 2.78 ಕೆಜಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾನಗಲ್ಲ ತಾಲೂಕಿನ ಶಿರಗೋಡದ ಮುಬಾರಕ ಮಕಾಂದಾರ, ಹಾನಗಲ್ಲಿನ ಹಳೆ ಬಸ್ ನಿಲ್ದಾಣ ನಿವಾಸಿ ಮುಕ್ತಿಯಾರ ಮಕಾಂದಾರ, ಹಾವೇರಿ ನಾಗೇಂದ್ರನಮಟ್ಟಿಯ ಮಹ್ಮದ್‌ಫಜ್ಜಲ ಪೆಂಡಾರಿ ಹಾಗೂ ಹಾವೇರಿ ಹೊಸನಗರದ ಮಹ್ಮದಸಾಕ ಸುಂಕದ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಆರೋಪಿತರೆಲ್ಲರೂ ಸೇರಿಕೊಂಡು ಹಾನಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಕಿಆಲೂರು ದನದ ಮಾರುಕಟ್ಟೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮೇಲಧಿಕಾರಿಗಳ ಅನುಮತಿ ಪಡೆದುಕೊಂಡು ಪೊಲೀಸರು ದಾಳಿ ನಡೆಸಿದ ಕಾಲಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಹಾನಗಲ್ಲ ಪಿಎಸ್‌ಐಗಳಾದ ಸಂಪತ್ ಆನಿಕಿವಿ, ದೀಪಾಲಿ ಗುಡೋಡಗಿ, ಸಿಬ್ಬಂದಿಯವರಾದ ಸುನೀಲ ಕಿಳ್ಳಿಕ್ಯಾತರ, ಪಿಎಂ ಸೊರಟೂರ, ಇಲಿಯಾಸ ಶೇತನಸನದಿ, ಎಲ್.ಎಲ್. ಪಾಟೀಲ, ಅಣ್ಣಪ್ಪ ಮುದ್ದಕ್ಕನವರ, ನಾರಾಯಣ ಗುರ್ಕಿ, ಗುತ್ತೆಪ್ಪ ಬಾಸೂರ, ಬಾಹುಬಲಿ ಉಪಾಧ್ಯಾಯ, ಬಂಗಾರೆಪ್ಪ ಹುರಕಡ್ಲಿ, ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.