ಜಾಹೀರಾತು, ಪ್ರೀಮಿಯಂ ಎಫ್‌ಎಆರ್‌ಮೂಲಕ ಆದಾಯ ಗಳಿಕೆ: ಬಿಬಿಎಂಪಿ

| Published : Mar 01 2024, 02:15 AM IST

ಸಾರಾಂಶ

ನವದೆಹಲಿ ಮಾದರಿಯಲ್ಲಿ ಹೊಸ ಜಾಹೀರಾತು ನೀತಿ ರಚನೆ, ಪ್ರೀಮಿಯಂ ಎಫ್‌ಎಆರ್ ಶುಲ್ಕ ಸಂಗ್ರಹ, ಮಾರ್ಗಸೂಚಿ ದರ ಆಧಾರಿಸಿ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನವದೆಹಲಿ ಮಾದರಿಯಲ್ಲಿ ಹೊಸ ಜಾಹೀರಾತು ನೀತಿ ರಚನೆ, ಪ್ರೀಮಿಯಂ ಎಫ್‌ಎಆರ್ ಶುಲ್ಕ ಸಂಗ್ರಹ, ಮಾರ್ಗಸೂಚಿ ದರ ಆಧಾರಿಸಿ ಆಸ್ತಿ ತೆರಿಗೆ ಸಂಗ್ರಹ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟಾರೆ ಬರೋಬ್ಬರಿ ₹8 ಸಾವಿರ ಕೋಟಿಗೂ ಅಧಿಕ ಮೊತ್ತದ ಆದಾಯ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದೆ.

ಬೆಂಗಳೂರು ನಗರದಲ್ಲಿ ಹೊರಾಂಗಣ ಜಾಹೀರಾತು ಪ್ರದರ್ಶನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಬಿಬಿಎಂಪಿ ಜಾಹೀರಾತು ವಿಭಾಗದಿಂದ ಬರುತ್ತಿದ್ದ ಆದಾಯ ಸಂಪೂರ್ಣವಾಗಿ ನಿಂತು ಹೋಗಿದೆ. ಹೀಗಾಗಿ, ದೆಹಲಿ ಮಾದರಿಯಲ್ಲಿ ನಗರದಲ್ಲಿ ಮತ್ತೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದಕ್ಕೆ ನಿರ್ದರಿಸಲಾಗಿದೆ. ಇದರಿಂದ ವಾರ್ಷಿಕ ಸುಮಾರು ₹500 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಇನ್ನು ಸಮಗ್ರ ಮತ್ತು ಪಾರದರ್ಶಕ ಐಟಿ ವ್ಯವಸ್ಥೆ ಆಧಾರಿತ ಪ್ರೀಮಿಯಂ ಎಫ್‌ಎಆರ್‌ ವಿತರಣೆ, ಬಳಕೆ ಮತ್ತು ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸಿ ಶುಲ್ಕ ರೂಪದಲ್ಲಿ ₹1 ಸಾವಿರ ಕೋಟಿ ಆದಾಯ ನಿರೀಕ್ಷಿಸಿದೆ.

ಡಿಆರ್‌ಸಿ/ಟಿಡಿಆರ್‌ ಅನ್ನು ಆನ್‌ಲೈನ್‌ ಮೂಲಕ ಮಾರಾಟ ಮತ್ತು ಖರೀದಿಗೆ ಸಾರ್ವಜನಿಕರಿಗೆ ಅನುವು ಮಾಡಿಕೊಡುವುದು. ಬಿಬಿಎಂಪಿ ಎಸ್ಟೇಟ್‌ ಮ್ಯಾನೇಜೆಮೆಂಟ್‌ ನಿಯಮ-2024 ರೂಪಿಸಿ ಆಸ್ತಿಗಳಿಗೆ ಗುತ್ತಿಗೆ ನೀತಿ ರಚನೆ ಮಾಡಲಾಗುವುದು. ಇದರಿಂದ ಪಾಲಿಕೆಗೆ ಹೆಚ್ಚಿನ ವರಮಾನ ಗಳಿಸಲು ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಗಸೂಚಿ ದರ ಆಧಾರಿಸಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್‌ನಿಂದ ಜಾರಿಗೊಳಿಸುವುದಾಗಿ ಬಿಬಿಎಂಪಿ ಬಜೆಟ್‌ ನಲ್ಲಿ ಘೋಷಣೆ ಮಾಡಿದೆ. ಇದರಿಂದ ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಶೇ.20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬ್ಯಾಂಕ್‌ ಮಾದರಿಯಲ್ಲಿ ‘ಒನ್‌ ಟೈಮ್ ಸೆಟ್ಟಲ್ಮೆಂಟ್‌’ (ಓಟಿಎಸ್‌) ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜುಲೈ 31ರ ಒಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡುವ ಸುಸ್ತಿದಾರರಿಗೆ ಸಂಪೂರ್ಣ ಬಡ್ಡಿ ಹಾಗೂ ದಂಡ ಪ್ರಮಾಣದಲ್ಲಿ ಶೇ.100 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಸೌಲಭ್ಯ ಪಡೆಯುವುದಕ್ಕೆ ಹೆಚ್ಚಿನ ಮಂದಿ ಬಾಕಿ ಪಾವತಿಗೆ ಮುಂದಾಗಲಿದ್ದು, ಸುಮಾರು 500 ರಿಂದ ಒಂದು ಸಾವಿರ ಕೋಟಿ ರು.ವರೆಗೆ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ಹೀಗೆ ಒಟ್ಟಾರೆ ₹8 ಕೋಟಿಗೂ ಅಧಿಕ ಮೊತ್ತದ ಆದಾಯ ಸಂಗ್ರಹಿಸುವುದಾಗಿ ಬಿಬಿಎಂಪಿ ಬಜೆಟ್‌ ನಲ್ಲಿ ಘೋಷಿಸಿದೆ.