ಕಂದಾಯ ಗ್ರಾಮ ರಚನೆ : ಫಲಾನುಭವಿಗಳ ಪಟ್ಟಿ ತಯಾರಿಸಿ

| Published : Jul 26 2025, 12:00 AM IST

ಕಂದಾಯ ಗ್ರಾಮ ರಚನೆ : ಫಲಾನುಭವಿಗಳ ಪಟ್ಟಿ ತಯಾರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಂದಾಯ ಗ್ರಾಮ ರಚನೆ ಸಂಬಂಧ ಸರಕಾರಕ್ಕೆ ಪ್ರಾಥಮಿಕ ಪ್ರಸ್ತಾವನೆ ಸಲ್ಲಿಸಲು ಗ್ರಾಮ ಆಡಳಿತಾಧಿಕಾರಿಗಳು ಅಗತ್ಯ ದಾಖಲೆ ಹಾಗೂ ಫಲಾನುಭವಿಗಳ ಪಟ್ಟಿ ತಯಾರಿಸಿ, ಶೀಘ್ರವಾಗಿ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಕಂದಾಯ ಗ್ರಾಮ ರಚನೆ ಸಂಬಂಧ ಸರಕಾರಕ್ಕೆ ಪ್ರಾಥಮಿಕ ಪ್ರಸ್ತಾವನೆ ಸಲ್ಲಿಸಲು ಗ್ರಾಮ ಆಡಳಿತಾಧಿಕಾರಿಗಳು ಅಗತ್ಯ ದಾಖಲೆ ಹಾಗೂ ಫಲಾನುಭವಿಗಳ ಪಟ್ಟಿ ತಯಾರಿಸಿ, ಶೀಘ್ರವಾಗಿ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು. ಕೊರಟಗೆರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಗ್ರಾಮ ರಚನೆ ಹಾಗೂ ಪೋಡಿ ದುರಸ್ತಿ (ನಮೂನೆ 1 ರಿಂದ 5) ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಕಂದಾಯ ಗ್ರಾಮ ರಚನೆಯ ಪ್ರಕ್ರಿಯೆ ಹಾಗೂ ಪೋಡಿ ದುರಸ್ತಿ ಕಾರ್ಯ ಅತ್ಯಂತ ಮಹತ್ವದ ಹಂತವಾಗಿದ್ದು, ನೈಜ ಮಾಹಿತಿಯೊಂದಿಗೆ ಯಾವುದೇ ವಿಳಂಬ ಮಾಡದೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಗ್ರಾಮ ಆಡಳಿತಾಧಿಕಾರಿಗಳಿಗೆ ನಿರ್ದೇಶಿಸಿದರು. ಸಭೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಫಲಾನುಭವಿಗಳ 11 ಎ ಮತ್ತು 11 ಬಿ ಖಾತೆಗಳ ವಿವರಗಳಿಗೆ ಅಗತ್ಯವಿರುವ ನಿರಾಕ್ಷೇಪಣಾ ಪತ್ರ ನೀಡುವುದರಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಪಿಡಿಒಗಳು ನಿರಾಕ್ಷೇಪಣಾ ಪತ್ರವನ್ನು ಸಂಜೆಯೊಳಗೆ ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು, ಈಗಾಗಲೇ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಹೊಸ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳನ್ನು ಗುರುತಿಸುವ ಕೆಲಸ ಪೂರ್ಣಗೊಂಡಿದ್ದು, ಕೆಲವು ಗ್ರಾಮ ಪಂಚಾಯತಿಗಳಲ್ಲಿ ಈವರೆಗೂ ಕಂದಾಯ ಗ್ರಾಮಗಳನ್ನು ಗುರುತಿಸಿರುವ ಪಟ್ಟಿಯನ್ನು ತಯಾರಿಸಿಲ್ಲ. ಆದಷ್ಟು ಬೇಗ ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.ಹೊಸ ಕಂದಾಯ ಗ್ರಾಮ/ ಉಪ ಗ್ರಾಮ ರಚಿಸುವ ಪ್ರಕ್ರಿಯೆ ಕೇವಲ ದಾಖಲೆ ಪುನರ್‌ ರಚನೆಯ ಕಾರ್ಯವಲ್ಲ. ಇದು ಗ್ರಾಮೀಣ ಹಕ್ಕುದಾರಿಕೆ. ಯೋಜನೆಗಳ ಸಮರ್ಪಕ ಜಾರಿಗೆ ದಾರಿ ಮಾಡಿಕೊಡುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸಮರ್ಥ ನಿರ್ವಹಣೆಯ ಅಗತ್ಯವಿದೆ ಎಂದು ತಿಳಿಸಿದರು.ಸಭೆಯಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಭೂ ದಾಖಲೆಗಳ ಉಪ ನಿರ್ದೇಶಕ ನಿರಂಜನ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ್, ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು, ಮಧುಗಿರಿ ಹಾಗೂ ಕೊರಟಗೆರೆ ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.