ಹಾನಗಲ್ಲ: ಕಂದಾಯ ಗ್ರಾಮ ಗುರುತಿಸಿ ಹಕ್ಕುಪತ್ರ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಾರಿ ಮಾಡುವಲ್ಲಿ ಹಾನಗಲ್ಲ ತಾಲೂಕು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, 7493 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಮುಂದಾಗಿದೆ ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, 30-40 ವರ್ಷಗಳಿಂದ ಮನೆ ನಿರ್ಮಿಸಿಕೊಂಡಿದ್ದು ಮನೆ ದಾಖಲೆಗಳಿಲ್ಲ. ಭೂಗ್ಯಾರಂಟಿ ಯೋಜನೆಯಲ್ಲಿ ಹಾನಗಲ್ಲ ತಾಲೂಕಿನ ಸರ್ಕಾರಿ ಸರ್ವೆ ನಂಬರಿನ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡ 5 ಸಾವಿರ ಕುಟುಂಬಗಳಿಗೆ 67 ಗ್ರಾಮ ಉಪಗ್ರಾಮಗಳನ್ನಾಗಿ ಘೋಷಿಸಿದೆ. ಖಾಸಗಿ ಆಸ್ತಿ ಜಾಗೆಗಳಲ್ಲಿ ಮನೆ ನಿರ್ಮಿಸಿಕೊಂಡ 4 ಸಾವಿರ ಕುಟುಂಬಗಳಿಗೆ 90 ಉಪಗ್ರಾಮಗಳನ್ನು ಘೋಷಿಸಲಾಗಿದೆ. ಇದಲ್ಲದೆ ಇನ್ನೂ 2 ಸಾವಿರ ಕುಟುಂಬಗಳಿಗೆ ಮನೆ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಹಾಗೆಯೇ ಹೊಂಕಣ, ಹಳ್ಳಿಬೈಲ್, ರತ್ನಾಪುರ, ಅರಿಷಿಣಗುಪ್ಪಗಳಲ್ಲಿ ಸಾವಿರ ಕುಟುಂಬಗಳು ಈ ಯೋಜನೆಯಲ್ಲಿ ಇನ್ನೂ ಹಕ್ಕುಪತ್ರ ಸಿಗಬಹುದು. ಇವನ್ನು ಹೊರತುಪಡಿಸಿ ಮಂತಗಿ, ಶಿವಪುರ, ಕೋಣನಕೊಪ್ಪ ಪ್ಲಾಟ್, ಬೆಳವತ್ತಿ, ಭೀಮಾಸತಿ ನಗರ ಪ್ರದೇಶದಲ್ಲಿ ಸಾವಿರ ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ವರ್ದಿಯಲ್ಲಿ 46 ಕುಟುಂಬಗಳು ಜಾಗೆಯ ಪರಿಶೀಲನೆಯಲ್ಲಿವೆ. ಈ ಮನೆಗಳು ಮೋಜಣಿ ವರದಿಯಂತೆ ರಸ್ತೆಯಲ್ಲಿವೆ. ಆದರೆ, ಇನ್ನೊಂದೆಡೆ ರಸ್ತೆ ಇದೆ. ರಸ್ತೆ ಇರುವಲ್ಲಿ ಮನೆ, ಮನೆ ಇರುವಲ್ಲಿ ರಸ್ತೆ ಎನ್ನುವಂತಾಗಿದ್ದು ಇವುಗಳನ್ನು ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದರು.
ಕಳೆದ ಬಾರಿ ಹೊಸಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಹಾನಗಲ್ಲ ತಾಲೂಕಿನ 996 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಫೆ. 14ರಂದು ಹಾವೇರಿಯಲ್ಲಿ ನಡೆಯುವ ಭೂಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ 6488 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಅತಿ ಹೆಚ್ಚು ಹಕ್ಕು ಪತ್ರ ನೀಡುತ್ತಿರುವ ತಾಲೂಕು ಹಾನಗಲ್ಲ ಪ್ರಥಮ ಸ್ಥಾನದಲ್ಲಿದ್ದು, ಕೂಡ್ಲಿಗಿ ದ್ವಿತೀಯ, ತಿಕೋಟಾ ತೃತೀಯ ಸ್ಥಾನದಲ್ಲಿವೆ.7 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಮನೆಗಳ ಹಕ್ಕು ಪತ್ರ ನೀಡುವ ಪ್ರಕ್ರಿಯೆಗಾಗಿ 157 ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕಾಗಿ 35 ಪರವಾನಗಿ ಭೂಮಾಪಕರು ಅವಿರತವಾಗಿ ಶ್ರಮಿಸಿದ್ದಾರೆ. ಗ್ರಾಮಾಡಳಿತ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಸಬ್ ರಜಿಸ್ಟ್ರಾರ್ ಅವರು ಅವಿರತವಾಗಿ ಕಚೇರಿಯ ಅವಧಿಯನ್ನೂ ಹೊರತುಪಡಿಸಿ ಸೇವೆ ಸಲ್ಲಿಸಿದ್ದರಿಂದ ಈ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದರು.
ಫೆ. 14ರಂದು ಹಾವೇರಿಯಲ್ಲಿ ನಡೆಯುವ ಕಂದಾಯ ಗ್ರಾಮಹಕ್ಕು ಪತ್ರ ವಿತರಣಾ ಸಮಾವೇಶದಲ್ಲಿ ಫಲಾನುಭವಿಗಳು ಹಾಗೂ ಮಹಿಳಾ ಫಲಾನುಭವಿಗಳ ಕುಟುಂಬ ಸದಸ್ಯರನ್ನೊಳಗೊಂಡು 15 ಸಾವಿರ ಜನ ಹಾನಗಲ್ಲ ತಾಲೂಕಿನಿಂದ ಪಾಲ್ಗೊಳ್ಳುವ ಸಾಧ್ಯತೆ ಇದೆ. ಫಲಾನುಭವಿಗಳಿಗೆ ತಾಲೂಕಿನಿಂದ 300 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.