ನಗರದಲ್ಲಿ 2 ಲಕ್ಷಕ್ಕೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ವಿವಿಧ ರೀತಿಯ ವ್ಯಾಪಾರ, ವಾಣಿಜ್ಯ ಮತ್ತು ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ
ಕನ್ನಡಪ್ರಭ ವಾರ್ತೆ ಮೈಸೂರು
ವಾಣಿಜ್ಯ ಕಟ್ಟಡಗಳ ಮೇಲಿನ ತೆರಿಗೆ, ರಹದಾರಿ ಶುಲ್ಕ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಶುಲ್ಕವನ್ನು ಪುನರ್ ಪರಿಶೀಲಿಸಬೇಕು ಎಂದು ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.ನಗರದಲ್ಲಿ 2 ಲಕ್ಷಕ್ಕೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ವಿವಿಧ ರೀತಿಯ ವ್ಯಾಪಾರ, ವಾಣಿಜ್ಯ ಮತ್ತು ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಪಾಲಿಕೆಯ ವ್ಯಾಪ್ತಿಯಲ್ಲಿ 20 ರಿಂದ 25 ಸಾವಿರ ವ್ಯಾಪಾರಿಗಳು ಮಾತ್ರ ಟ್ರೇಡ್ ಲೈಸೆನ್ಸ್ ಪಡೆದು ತೆರಿಗೆ ಪಾವತಿಸುತ್ತಿದ್ದಾರೆ. ಉಳಿದ ವ್ಯಾಪಾರ ಸಂಸ್ಥೆಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರುವ ಬದಲು, ಈಗಾಗಲೇ ನಿಯಮಿತವಾಗಿ ತೆರಿಗೆ ಪಾವತಿಸುತ್ತಿರುವ ವ್ಯಾಪಾರಿಗಳ ಮೇಲೆಯೇ ಹೆಚ್ಚುವರಿ ಆರ್ಥಿಕ ಹೊರೆ ಹಾಕುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದು ತಿಳಿಸಿದ್ದಾರೆ.
ಪಾಲಿಕೆಯು ಯಾವುದೇ ಸಮರ್ಪಕ ಸಾರ್ವಜನಿಕ ಸಮಾಲೋಚನೆ ನಡೆಸದೆ ರಹದಾರಿ ಶುಲ್ಕ ಸೇರಿದಂತೆ ಕೆಲವು ಶುಲ್ಕಗಳನ್ನು ಏಕಾಏಕಿ ಶೇ.30 ರಿಂದ 40 ರಷ್ಟು ಹೆಚ್ಚಿಸಿರುವುದು ಅವೈಜ್ಞಾನಿಕ ಹಾಗೂ ವ್ಯಾಪಾರಿಗಳ ಮೇಲೆ ಅನಗತ್ಯ ಆರ್ಥಿಕ ಹೊರೆ ಹೊರಿಸಿದಂತಾಗಿದೆ.ಈಗಾಗಲೇ ವಾಣಿಜ್ಯ ಕಟ್ಟಡಗಳಿಂದ ಆಸ್ತಿ ತೆರಿಗೆ, ವಿವಿಧ ಸೆಸ್ ಹಾಗೂ ಇತರೆ ಶುಲ್ಕಗಳನ್ನು ವಸೂಲಿ ಮಾಡಲಾಗುತ್ತಿದೆ. ಇದರ ಜೊತೆಗೆ ರಹದಾರಿ ಶುಲ್ಕ ಮತ್ತು ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಶುಲ್ಕದ ಹೆಸರಿನಲ್ಲಿ ಮತ್ತಷ್ಟು ಆರ್ಥಿಕ ಹೊರೆ ವಿಧಿಸಲಾಗುತ್ತಿರುವುದು ವ್ಯಾಪಾರಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಶೇಷವಾಗಿ ಹೋಟೆಲ್ ಗಳು, ಅಪಾರ್ಟ್ ಮೆಂಟ್ ಗಳು, ವಾಣಿಜ್ಯ ಮಳಿಗೆಗಳು ಹಾಗೂ ಕೆಲವು ವಸತಿ ಪ್ರದೇಶಗಳಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಕೆಲವರು ಪ್ರತಿ ತಿಂಗಳು ₹2000, ₹3000 ರೂ. ಮೊತ್ತವನ್ನು ಹಣವಾಗಿ ಕೇಳುತ್ತಿರುವ ಕುರಿತು ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಹಣ ನೀಡದಿದ್ದಲ್ಲಿ ಕಸವನ್ನು ನಿಯಮಿತವಾಗಿ ಸಂಗ್ರಹಿಸುವುದಿಲ್ಲ ಎಂಬ ಆರೋಪಗಳೂ ವ್ಯಕ್ತವಾಗುತ್ತಿವೆ. ಅದೇ ಸೇವೆಗೆ ಪ್ರತ್ಯೇಕ ಮಾಸಿಕ ಶುಲ್ಕ ವಿಧಿಸುವುದರಿಂದ ದ್ವಿಗುಣ ವಸೂಲಿಯಾಗಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತು ಪಾಲಿಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ವಾಣಿಜ್ಯ ಕಟ್ಟಡಗಳ ಮೇಲಿನ ತೆರಿಗೆ, ರಹದಾರಿ ಶುಲ್ಕ, ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಶುಲ್ಕ ಸೇರಿದಂತೆ ಎಲ್ಲಾ ರೀತಿಯ ಹೆಚ್ಚುವರಿ ಶುಲ್ಕಗಳನ್ನು ತಕ್ಷಣ ಸಮಗ್ರವಾಗಿ ಪುನರ್ ಪರಿಶೀಲಿಸಿ, ರಾಜ್ಯ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಅನಾನುಕೂಲ ಉಂಟಾಗದಂತೆ ನ್ಯಾಯಸಮ್ಮತ ಹಾಗೂ ವೈಜ್ಞಾನಿಕ ನಿರ್ಧಾರ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದ್ದಾರೆ.