ನಷ್ಟದಲ್ಲಿದ್ದ ಯಲ್ಲಾಪುರದ ಕೈಗಾರಿಕೆ ಸಹಕಾರಿ ಸಂಘಕ್ಕೆ ಪುನಶ್ಚೇತನ

| Published : Sep 22 2024, 01:48 AM IST

ನಷ್ಟದಲ್ಲಿದ್ದ ಯಲ್ಲಾಪುರದ ಕೈಗಾರಿಕೆ ಸಹಕಾರಿ ಸಂಘಕ್ಕೆ ಪುನಶ್ಚೇತನ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ಪಟ್ಟಣದ ಯಲ್ಲಾಪುರ ಕೈಗಾರಿಕಾ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ₹೩೪.೨೭ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಎಪಿಎಂಸಿ ಆವಾರದ ಅಡಿಕೆಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಂಘದ ೯ನೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ ಹೇಳಿದರು.

ಯಲ್ಲಾಪುರ: ಪಟ್ಟಣದ ಯಲ್ಲಾಪುರ ಕೈಗಾರಿಕಾ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ₹೩೪.೨೭ ಲಕ್ಷ ನಿವ್ವಳ ಲಾಭ ಗಳಿಸಿದೆ. ಜೀರ್ಣಾವಸ್ಥೆಯಲ್ಲಿದ್ದ ಈ ಸಂಸ್ಥೆಯನ್ನು ನಾವೆಲ್ಲ ಸೇರಿ ಈ ಹಂತಕ್ಕೆ ತಂದಿದ್ದೇವೆ ಎಂದು ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ ಹೇಳಿದರು.

ಇಲ್ಲಿಯ ಎಪಿಎಂಸಿ ಆವಾರದ ಅಡಿಕೆಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಂಘದ ೯ನೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ೮೬೭ ಶೇರು ಸದಸ್ಯರನ್ನು ಹೊಂದಿರುವ ಸಂಘವು ₹೩೫,೯೪,೨೯೭ ಶೇರು ಬಂಡವಾಳ ಹೊಂದಿದೆ. ಸದಸ್ಯರಿಂದ ಸಂಗ್ರಹಿಸಲಾದ ವಿವಿಧ ನಮೂನೆಯ ಠೇವುಗಳ ಮೊತ್ತ ₹೪೮೯,೫೯,೯೩೫ ಗಳಿವೆ. ಸದಸ್ಯರಿಂದ ಸಂಘಕ್ಕೆ ಬರಬೇಕಾದ ವಿವಿಧ ರೂಪದ ಸಾಲಗಳ ಮೊತ್ತ ₹೫,೧೭,೭೦,೩೧೨ ಗಳಾಗಿವೆ. ವಿಶೇಷವೆಂದರೆ ಸಂಘವು ಯಾವುದೇ ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿಲ್ಲ ಎಂದು ವಿವರಿಸಿದ ಅವರು, ಸಂಘವು ಸ್ವಂತ ಬಂಡವಾಳ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಸಕ್ತ ವರದಿ ವರ್ಷದಲ್ಲಿ ಸದಸ್ಯರಿಗೆ ಶೇರುಗಳ ಮೇಲೆ ಯಾವುದೇ ಡಿವಿಡೆಂಡ್ ನೀಡದಿರಲು ನಿರ್ಧರಿಸಿದೆ ಎಂದರು.

ಒಂದು ಹಂತದಲ್ಲಿ ಮುಚ್ಚಿಹೋಗುವ ಸ್ಥಿತಿಯಲ್ಲಿದ್ದ ಈ ಸಹಕಾರಿ ಸಂಸ್ಥೆಯನ್ನು ನಮ್ಮೆಲ್ಲರ ನಿರ್ದೇಶಕರ ಮಾರ್ಗದರ್ಶನದಲ್ಲಿ ಮತ್ತು ಸಿಬ್ಬಂದಿ ಪರಿಶ್ರಮದಿಂದ ಈ ಹಂತಕ್ಕೆ ತಂದಿದ್ದೇವೆ. ಸಂಘದ ಅಭಿವೃದ್ಧಿಗೆ ಶಾಸಕ ಶಿವರಾಮ ಹೆಬ್ಬಾರ ಮತ್ತು ವಿಕಾಸ ಬ್ಯಾಂಕ್ ನೀಡಿದ ವಿವಿಧ ಬಗೆಯ ನೆರವುಗಳನ್ನು ನಾವು ಮರೆಯುವಂತಿಲ್ಲ. ಎಲ್ಲಕ್ಕಿಂತ ಪ್ರಮುಖ ಸಂಗತಿಯೆಂದರೆ ನಮ್ಮ ಸಂಘದ ಆಡಳಿತಾತ್ಮಕ ವೆಚ್ಚ ಉಳಿದ ಸಂಘಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯೆಂಬುದು ಹೆಮ್ಮೆಯ ಸಂಗತಿ ಎಂದರು.

ಇಬ್ಬರು ಅದೃಷ್ಟವಂತ ಗ್ರಾಹಕರಾದ ಶ್ರೀಧರ ಭಟ್ಟ ಅರೆಗುಳಿ ಮತ್ತು ಈರಮ್ಮ ಭೋವಿವಡ್ಡರ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಕೆ.ಟಿ. ಹೆಗಡೆ, ನಿರ್ದೇಶಕರಾದ ಮುರಳಿ ಹೆಗಡೆ, ಅನಂತ ಗಾಂವ್ಕರ, ನಾಗೇಂದ್ರ ಭಟ್ಟ, ಶ್ರೀಪಾದ ಮೆಣಸುಮನೆ, ಜಯರಾಮ ಹೆಗಡೆ, ಜ್ಯೋತಿ ದೇಸಾಯಿ, ರಾಧಾ ಹೆಗಡೆ, ಗೌರವ ಸಲಹೆಗಾರ ಪಿ.ಜಿ. ಹೆಗಡೆ ಕಳಚೆ, ಕಾನೂನು ಸಲಹೆಗಾರ ಪ್ರಕಾಶ ಭಟ್ಟ ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ರವೀಂದ್ರ ದೇಸಾಯಿ ವಾರ್ಷಿಕ ವರದಿ ಮಂಡಿಸಿ, ನಿರ್ವಹಿಸಿದರು. ಕೇಬಲ್ ನಾಗೇಶ ಸ್ವಾಗತಿಸಿದರು.