ದ್ಯಾವಸಂದ್ರ ಗ್ರಾಮ ಪಂಚಾಯಿತಿಗೆ ₹7 ಕೋಟಿ 75 ಲಕ್ಷ ಅನುದಾನ ಬಿಡುಗಡೆಯಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಸಚಿವ ಮಹದೇವಪ್ಪನವರು ಹಿಂದುಳಿದ ಸಮುದಾಯದ ಶ್ರೇಯೋಭಿವೃದ್ಧಿಗಾಗಿ 10 ಅಂಬೇಡ್ಕರ್ ಭವನ ಹಾಗೂ 15 ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ತಾಲೂಕಿನಾದ್ಯಂತ ಹಲವು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ರಸ್ತೆ, ಚರಂಡಿ, ಆಸ್ಪತ್ರೆ ಮತ್ತು ಮೂಲ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಹಾರೋಹಳ್ಳಿ- ಮರಳವಾಡಿ ಭಾಗದಲ್ಲಿ ದಶಕಗಳಷ್ಟು ಹಳೆಯ ಯೋಜನೆಗಳಿಗೆ ಮರುಜೀವ ನೀಡಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ತಾಲೂಕಿನ ದ್ಯಾವಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಹತ್ತಾರು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದೇ ರೀತಿ ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ಹಾರೋಹಳ್ಳಿ ತಾಲೂಕಿನ ಜನರ ಒತ್ತಾಸೆಯಂತೆ ಹತ್ತಾರು ಕೋಟಿ ವೆಚ್ಚದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.ದ್ಯಾವಸಂದ್ರ ಗ್ರಾಮ ಪಂಚಾಯಿತಿಗೆ ₹7 ಕೋಟಿ 75 ಲಕ್ಷ ಅನುದಾನ ಬಿಡುಗಡೆಯಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಸಚಿವ ಮಹದೇವಪ್ಪನವರು ಹಿಂದುಳಿದ ಸಮುದಾಯದ ಶ್ರೇಯೋಭಿವೃದ್ಧಿಗಾಗಿ 10 ಅಂಬೇಡ್ಕರ್ ಭವನ ಹಾಗೂ 15 ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದಾರೆ ಎಂದರು.
ಬೆಣಚಕಲ್ದೊಡ್ಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಾಲೂಕಿನಲ್ಲಿ ಅಂತರ್ಜಲ ವೃದ್ಧಿ ಹಾಗೂ ನೀರಾವರಿ ಸೌಲಭ್ಯಕ್ಕೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಚುರುಕುಗೊಳಿಸಲಾಗಿದೆ, ಮರಳವಾಡಿ, ಹನುಮಂತಪುರ ಹಾಗೂ ಚುಳಕನಬೆಟ್ಟದ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ, ಅದೇ ರೀತಿ ಮುಂದೆ ಸುಬೇದಾರನ ಕೆರೆಗೂ ನೀರು ತುಂಬಿಸುವ ಕಾಯಕಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ನಾನು ಶಾಸಕನಾದಾಗಿನಿಂದ ಇಲ್ಲಿಯವರೆಗೆ ಹಾರೋಹಳ್ಳಿ ತಾಲೂಕು ಪ್ರತಿ ಗ್ರಾಮದಲ್ಲೂ ಪ್ರವಾಸ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಆದ್ಯತೆ ಮೇರೆಗೆ ಅಭಿವೃದ್ಧಿ ಕೆಲಸಗಳಿಗೆ ಶ್ರಮಿಸುತ್ತಿದ್ದೇನೆ. ಹಾರೋಹಳ್ಳಿ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣದಲ್ಲಿ ಜಾಗ ಕಳೆದುಕೊಂಡ ನಿರಾಶ್ರಿತರಿಗೆ ₹10 ಕೋಟಿ ಮೀಸಲಾಗಿದ್ದು, ಉಳಿದ ₹20 ಕೋಟಿ ಪರಿಹಾರದ ಹಣ ಬೇಕಾಗಿರುವುದರಿಂದ ಅದನ್ನು ಸರ್ಕಾರಕ್ಕೆ ಒದಗಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ ಎಲ್ಲಾ ನಿರಾಶ್ರಿತರಿಗೂ ಪರಿಹಾರ ಕಲ್ಪಿಸಲಾಗುವುದು ಎಂದರು.
ಮುತ್ತರಾಯನಪುರ, ಗೊಟ್ಟಿಗೆಹಳ್ಳಿ, ಐನೋರದೊಡ್ಡಿ, ಕಾಡುಜಕ್ಕಸಂದ್ರ, ನವಿಕಲ್ದೊಡ್ಡಿ, ಬೆಣಚಕಲ್ದೊಡ್ಡಿ, ಶಂಕುದಾಸದೊಡ್ಡಿ, ಅತ್ತಿಕುಪ್ಪೆ, ದ್ಯಾವಸಂದ್ರ, ಕೋನಸಂದ್ರ, ರಾಂಪುರ, ಗುಂಡನಗೊಲ್ಲಹಳ್ಳಿ, ಕರಿಕಲ್ದೊಡ್ಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಯಿತು.ತಹಸೀಲ್ದಾರ್ ಹರ್ಷವರ್ಧನ್, ಇಒ ಅಪೂರ್ವ ಕುಲಕರ್ಣಿ, ಜಿಪಂ ಅಧಿಕಾರಿ ಚಂದ್ರಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೆ.ಸಿ.ಬಿ ಅಶೋಕ್, ಬಮುಲ್ ನಿರ್ದೇಶಕ ಹರೀಶ್, ಮುಖಂಡರಾದ ಭುಜಂಗಯ್ಯ, ರಾಂಪುರ ನಾಗೇಶ್, ಗಬ್ಬಾಡಿ ಜಗದೀಶ್ವರ್ ಗೌಡ, ಕಾಡುಜಕ್ಕಸಂದ್ರ ಶಿವಕುಮಾರ್, ತಾಮಸಂದ್ರ ನಾಗೇಶ್ ಮತ್ತಿತರರು ಹಾಜರಿದ್ದರು.