ಸಂವಿಧಾನದಿಂದ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ: ಎಸಿ ಅಪರ್ಣಾ ರಮೇಶ

| Published : Jan 27 2024, 01:16 AM IST

ಸಂವಿಧಾನದಿಂದ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ: ಎಸಿ ಅಪರ್ಣಾ ರಮೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದಿಂದ ನಾವು ಸಶಕ್ತಗೊಂಡಿದ್ದೇವೆ. ಸರ್ವರಿಗೂ ಸಮಾನತೆ, ಮೂಲಭೂತ ಹಕ್ಕು ಹಾಗೂ ಕರ್ತವ್ಯ ನೀಡಿದೆ.

ಶಿರಸಿ:

ಭಾರತಕ್ಕೆ ಸಂವಿಧಾನ ಬಂದ ಮೇಲೆ ಕ್ರಾಂತಿಕಾರಿ ಬದಲಾವಣೆಯಿಂದ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತಿದೆ ಎಂದು ಸಹಾಯಕ ಆಯುಕ್ತೆ ಅಪರ್ಣಾ ರಮೇಶ ಹೇಳಿದರು.ಅವರು ನಗರದ ಶ್ರೀಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ೭೫ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನ ರಚನೆ ಬಳಿಕ ರಾಜ್ಯವೂ ಆರ್ಥಿಕ, ಸಾಮಾಜಿಕ, ಆರೋಗ್ಯ, ಪರಿಸರ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಗಣನೀಯ ಸಾಧನೆ ಮಾಡಿದೆ. ಸಂವಿಧಾನದಿಂದ ನಾವು ಸಶಕ್ತಗೊಂಡಿದ್ದೇವೆ. ಸರ್ವರಿಗೂ ಸಮಾನತೆ, ಮೂಲಭೂತ ಹಕ್ಕು ಹಾಗೂ ಕರ್ತವ್ಯ ನೀಡಿದೆ ಎಂದರು.ಸಂವಿಧಾನದ ನಿಯಮದಂತೆ ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ತಿರಸ್ಕರಿಸುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ೭೫ರ ಗಣರಾಜ್ಯೋತ್ಸವ ದೇಶದ ಪಾಲಿಗೆ ಸುದಿನವಾಗಿದ್ದು ಈ ವೇಳೆ ದೇಶದ ಏಕತೆ, ಸಮಗ್ರತೆಗಾಗಿ ಕಂಕಣ ತೊಡಬೇಕಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ನಮ್ಮದು ಜಾತ್ಯತೀತ ರಾಷ್ಟ್ರ. ಇಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಈ ಹಕ್ಕು ನೀಡಿದ್ದೆ ಡಾ. ಅಂಬೇಡ್ಕರ್ ನೀಡಿದ ಸಂವಿಧಾನ. ನಾವು ನಮ್ಮ ಸಂವಿಧಾನದ ಆಶಯಗಳಿಗೆ ಮೀರಿ ನಡೆಯಬಾರದು ಎಂದು ಹೇಳಿದರು.ಈ ವೇಳೆ ತಮ್ಮ ಸ್ಪುಟವಾದ ಬರಹಗಳ ಮೂಲಕ ಅಕ್ಷರ ಸುಂದರ ಎಂದೇ ಹೆಸರು ಪಡೆದಿರುವ ಸುರೇಶ ವೈ. ಕಲಾಲ, ಆವೇಮರಿಯಾ ಶಾಲೆಯ ಗಣಿತ ಶಿಕ್ಷಕ ಪ್ರಸನ್ ಜೋಶಿ, ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ನಾಯ್ಕ, ಆರೋಗ್ಯ ಇಲಾಖೆಯ ಗೌರಿ ನಾಯ್ಕ ಹಾಗೂ ಸಂಜಯ ಪಟಗಾರ ಅವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ, ಡಿಡಿಪಿಐ ಬಸವರಾಜ ಪಿ, ಡಿವೈಎಸ್‌ಪಿ ಗಣೇಶ ಕೆ.ಎಲ್., ಸಿಪಿಐ ರಾಮಚಂದ್ರ ನಾಯಕ, ಬಿಇಒ ನಾಗರಾಜ ನಾಯ್ಕ, ಪೌರಾಯುಕ್ತ ಕಾಂತರಾಜ, ತಾಪಂ ಇಒ ಸತೀಶ ಹೆಗಡೆ, ಸರ್ಕಾರಿ ನೌಕರರ ಸಂಘದ ಶಿರಸಿ ಶಾಖೆಯ ಜಿಲ್ಲಾಧ್ಯಕ್ಷ ಕಿರಣಕುಮಾರ ನಾಯ್ಕ ಇದ್ದರು.ಗಣರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳು, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಸ್ಕೌಟ್ ಆ್ಯಂಡ್‌ ಗೈಡ್ಸ್, ಭಾರತ ಸೇವಾದಳ ಮತ್ತು ಎನ್‌ಸಿಸಿ ತಂಡದಿಂದ ನಡೆದ ಪಥ ಸಂಚಲನ ಹಾಗೂ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆದವು.