ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಕ್ರಾಂತಿಕಾರಿ ರಥಯಾತ್ರೆ

| Published : Apr 21 2025, 12:48 AM IST

ಸಾರಾಂಶ

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ. ಮಾದಿಗ ಸಮುದಾಯದ ಮುಖಂಡರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಾ ಬರುತ್ತಿರುವುದನ್ನು ಖಂಡಿಸಿ ಒಳ ಮೀಸಲಾತಿ ಜಾರಿಗೊಳಿಸಿ ಇಲ್ಲವೇ ಕುರ್ಚಿ ಕಾಲಿ ಮಾಡಿ ಎಂದು ಕ್ರಾಂತಿಕಾರಿ ರಥಯಾತ್ರೆ ನೇತೃತ್ವ ವಹಿಸಿದ ಪ್ರಭುರಾಜ್ ಕೊಡ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷ್ಮೇಶ್ವರ: ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ. ಮಾದಿಗ ಸಮುದಾಯದ ಮುಖಂಡರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಾ ಬರುತ್ತಿರುವುದನ್ನು ಖಂಡಿಸಿ ಒಳ ಮೀಸಲಾತಿ ಜಾರಿಗೊಳಿಸಿ ಇಲ್ಲವೇ ಕುರ್ಚಿ ಕಾಲಿ ಮಾಡಿ ಎಂದು ಕ್ರಾಂತಿಕಾರಿ ರಥಯಾತ್ರೆ ನೇತೃತ್ವ ವಹಿಸಿದ ಪ್ರಭುರಾಜ್ ಕೊಡ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕ್ರಾಂತಿಕಾರಿ ರಥಯಾತ್ರೆ ತಾಲೂಕಿನ ಶಿಗ್ಲಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಮಾದಿಗ ಸಮುದಾಯ ಉದ್ದೇಶಿಸಿ ಮಾತನಾಡಿ, ಕಳೆದ ಮೂರು ದಶಕಗಳಿಂದಲೂ ಒಳಮೀಸಲಾತಿ ಜಾರಿಗಾಗಿ ಹೋರಾಟ ನಡೆಸುತ್ತಾ ಬರುತ್ತಿದ್ದರೂ ಯಾವುದೇ ಸರ್ಕಾರ ಕ್ರಮ ಕೈಗೊಳ್ಳದಿರುವುದು ನೋವಿನ ಸಂಗತಿಯಾಗಿದೆ. ಒಳ ಮೀಸಲಾತಿ ಜಾರಿಗೊಳಿಸುವವರೆಗೂ ಹೊಸ ನೇಮಕಾತಿ, ಮುಂಬಡ್ತಿ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದು ಬೇಡ. ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದನ್ನು ತಪ್ಪಿಸಬೇಕು. ಸಮುದಾಯದ ಶಾಸಕರು, ಸಚಿವರು, ಸಚಿವ ಸಂಪುಟದಲ್ಲಿ ಧ್ವನಿಯತ್ತಬೇಕು ಎಂದರು.ಈ ವೇಳೆ ಕ್ರಾಂತಿಕಾರಿ ಹೋರಾಟಗಾರರ ಮಲ್ಲೇಶ ಮಾತನಾಡಿ, ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ, ಸಮುದಾಯದ ಹೋರಾಟಗಾರ ಪ್ರೊಫೆಸರ್ ಬಿ ಕೃಷ್ಣಪ್ಪರವರ ಸಮಾಧಿ ಸ್ಥಳದಿಂದ ಕ್ರಾಂತಿಕಾರಿ ರಥಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ಜರುಗುತ್ತಿದ್ದು, ಒಳ ಮೀಸಲಾತಿ ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಭಾಸ್ಕರ್ ಪ್ರಸಾದ್ ರವರ ಕೈ ಬಲಪಡಿಸಬೇಕಾದರೆ ಗದಗ ಜಿಲ್ಲೆಯ ಸಿಗ್ಲಿ ಗ್ರಾಮದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರಬೇಕು. ಅವರ ಧ್ವನಿಗೆ ಧ್ವನಿಯಾಗಿ ನಿಲ್ಲಬೇಕು. ಜಾತಿ ಗಣತಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಾತಿ ದಾಖಲಾತಿ ಮಾಡುವ ಸಂದರ್ಭದಲ್ಲಿ ಮಾದಿಗ, ಮಾದರ್ ಅಂತ ಸ್ಪಷ್ಟವಾಗಿ ಪೆನ್ನಿನಿಂದ ಬರೆದುಕೊಳ್ಳುವಂತೆ ಹೇಳಬೇಕು. ಹರಿಜನ ಎಂಬ ಶಬ್ದವನ್ನು ಜಾತಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಬರೆಯಿಸಕೂಡದು. ಒಳ ಮೀಸಲಾತಿ ಜಾರಿಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವೆಲ್ಲ ನಮ್ಮ ರಕ್ತವನ್ನಾದರೂ ಚೆಲ್ಲಿ ಒಳ ಮೀಸಲಾತಿ ಜಾರಿಯಾಗುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು. ಕ್ರಾಂತಿಕಾರಿ ರಥಯಾತ್ರೆ ಸವಣೂರು ಪಟ್ಟಣದಿಂದ ಹೊರಟು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿಗೆ ಆಗಮಿಸುತ್ತಿದ್ದಂತೆ ಶಿಗ್ಲಿ ಗ್ರಾಮದ ಅಂಬೇಡ್ಕರ್ ನಗರದ ಮಾದಿಗ ಮುಖಂಡರು, ಯುವಕರು ಅದ್ಧೂರಿಯಿಂದ ಸ್ವಾಗತಿಸಿದರು. ‌ಗ್ರಾಮದ ಬೀದಿಬೀದಿಗಳಲ್ಲಿ ಮೆರವಣಿಗೆಯು ತಮಟೆ ಶಬ್ದದೊಂದಿಗೆ ಜೈ ಜೈ ಮಾದಿಗ. ಜೈ ಜೈ ಅಂಬೇಡ್ಕರ್ ಎಂಬ ಘೋಷಣೆಯೊಂದಿಗೆ ಸಾಗಿದ್ದು ಕಂಡುಬಂದಿತು. ಸುಮಾರು 40ಕ್ಕೂ ಹೆಚ್ಚು ಹೋರಾಟಗಾರರು ಕ್ರಾಂತಿಕಾರಿ ರಥಯಾತ್ರೆ ಕೈಗೊಂಡಿದ್ದು ಮಾದಿಗ ಸಮುದಾಯಕ್ಕೆ ಜಾಗೃತಿಯನ್ನು ಮೂಡಿಸುವ ಕಾರ್ಯ ಎಲ್ಲರ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದೆ.ಈ ಸಂದರ್ಭದಲ್ಲಿ ಮುಖಂಡರಾದ ಎನ್‌. ಡಿ. ಮೇಗಲಮನಿ, ಹನುಮಂತ ಛಬ್ಬಿ, ಕರಿಯಪ್ಪ ಶಿರಹಟ್ಟಿ, ಮೈಲಾರಪ್ಪ ಡಿ. ಎಚ್., ಚಂದ್ರು ಕರಜಿಗಿ, ಮನೋಹರ್ ಕರಜಗಿ, ಶಿವಾನಂದ ಮೇಗಲಮನಿ, ಮಾರ್ತಾಂಡಪ್ಪ ಗಾಳಪ್ಪನವರ್, ಸೋಮಣ್ಣ ಯತ್ತಿನಹಳ್ಳಿ, ಗುಡ್ಡಪ್ಪ ಮತ್ತೂರ್, ಬಸವರಾಜ ಹೊಸಮನಿ ಪಾಲ್ಗೊಂಡರು.