ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರ ವಿಚಾರವಾದಿ ಭಾಸ್ಕರ್ ಪ್ರಸಾದ್ ಹಾಗೂ ವಕೀಲ ಅರುಣ್ ಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕ ಮಹಿಳೆಯರಿಂದ ಒಳಮೀಸಲಾತಿ ಕ್ರಾಂತಿಕಾರಿ ರಥಯಾತ್ರೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ರಾಜ್ಯಾದ್ಯಂತ ಸಂಚರಿಸಲಿರುವ ಮಾದಿಗ ಒಳಮೀಸಲಾತಿ ಕ್ರಾಂತಿಕಾರಿ ರಥಯಾತ್ರೆ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರ ವಿಚಾರವಾದಿ ಭಾಸ್ಕರ್ ಪ್ರಸಾದ್ ಹಾಗೂ ವಕೀಲ ಅರುಣ್ ಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕ ಮಹಿಳೆಯರಿಂದ ಕ್ರಾಂತಿಕಾರಿ ರಥಯಾತ್ರೆಗೆ ಚಾಲನೆ ನೀಡಲಾಯಿತು.

ಹೋರಾಟಗಾರ ಭಾಸ್ಕರ್ ಪ್ರಸಾದ್ ಮಾತನಾಡಿ, ಈಗಾಗಲೇ ಹರಿಹರದಿಂದ ಬೆಂಗಳೂರು ವರೆಗೆ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಿ ಸರ್ಕಾರವನ್ನು ಎಚ್ಚರಿಸಲಾಗಿದೆ. ಅದರ ಪರಿಣಾಮ ನಾಗಮೋಹನ ದಾಸ್ ಆಯೋಗದ ಮಧ್ಯಂತರ ವರದಿ ಸ್ವಿಕಾರ ಮಾಡಿ ಎರಡು ತಿಂಗಳ ಗಡುವು ನೀಡಿದೆ. ಆ ಎರಡು ತಿಂಗಳು ನಮ್ಮ ಹೋರಾಟ ಮತ್ತು ಚಳವಳಿಯನ್ನು ನಿರಂತರ ಮತ್ತು ಜೀವಂತವಾಗಿರಿಸಲು ಇಂದಿನಿಂದ ಕ್ರಾಂತಿಕಾರಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ನಮ್ಮ ಸಾಂಸ್ಕೃತಿಕ ನಾಯಕ ಮಲೆಮಾದಪ್ಪನ ಸನ್ನಿಧಿಯಲ್ಲಿ ಪೌರಕಾರ್ಮಿಕ ಮಹಿಳೆಯರು ಈ ರಥ ಯಾತ್ರೆಗೆ ಚಾಲನೆ ನೀಡಿರುವುದು ಸಂತಸ ಮೂಡಿಸಿದೆ. 60 ದಿನಗಳ ಬಳಿಕ ಸರ್ಕಾರ ಒಳಮೀಸಲಾತಿ ಜಾರಿಮಾಡಿದೆ ಮೇಲೆ ಆದೇಶ ಪ್ರತಿಯೊಂದಿಗೆ ಮತ್ತೊಮ್ಮೆ ಮಲೆ ಮಾದಪ್ಪನ ಸನ್ನಿಧಿಗೆ ಬರುತ್ತೇವೆ ಎಂದರು. ಈ ಸಂದರ್ಭದಲ್ಲಿ ಕ್ರಾಂತಿಕಾರಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪಾದಯಾತ್ರೆಗಳು, ವಕೀಲರಾದ ಅರುಣ್ ಕುಮಾರ್, ರಾಜೇಂದ್ರ, ಬಾಬು ಜಗಜೀವನ್ ರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಬೂದುಬಾಳು ಮಾದೇವ, ಪ್ರಧಾನ ಕಾರ್ಯದರ್ಶಿ ರವಿ, ಸಂಘಟನೆ ನೇತೃತ್ವ ವಹಿಸಿರುವ ಮರಡಿಪುರ ರವಿಕುಮಾರ್, ಮಂಜುನಾಥ್, ಶಾಗ್ಯ ಸುಂದರ್, ಹನೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಮುಖಂಡರು ಯುವಕರು ಮತ್ತು ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.