ಬತ್ತಕ್ಕೆ ತಿಗಣಿ ಕಾಟ: ಬೆಳೆ ಕ್ಷೀಣ

| Published : Oct 06 2025, 01:01 AM IST

ಸಾರಾಂಶ

ಮಳೆ-ಬಿಸಿಲಿನ ವಾತಾವರಣಕ್ಕೆ ಬತ್ತದ ತೆನೆಗಳಿಗೆ ತಿಗಣೆ ಹುಳುಗಳ ಕಾಟ ವ್ಯಾಪಕವಾಗಿದ್ದು, ಹಾಲುಗಾಳುಗಳಿಂದ ಕೀಟಗಳು ರಸ ಹೀರುವುದರಿಂದ ಭತ್ತದ ಕಾಳುಗಳು ಜೊಳ್ಳಾಗಿ ಬೆಳೆ ನಷ್ಟದ ಆತಂಕ ರೈತರನ್ನು ಕಾಣುತ್ತಿದೆ.

ನಷ್ಟದ ಆತಂಕದಲ್ಲಿ ರೈತರು । ಆರ್ಥಿಕ ಹೊರೆಯ ಭೀತಿಕನ್ನಡಪ್ರಭ ವಾರ್ತೆ ಶಿರಸಿ

ಮಳೆ-ಬಿಸಿಲಿನ ವಾತಾವರಣಕ್ಕೆ ಬತ್ತದ ತೆನೆಗಳಿಗೆ ತಿಗಣೆ ಹುಳುಗಳ ಕಾಟ ವ್ಯಾಪಕವಾಗಿದ್ದು, ಹಾಲುಗಾಳುಗಳಿಂದ ಕೀಟಗಳು ರಸ ಹೀರುವುದರಿಂದ ಭತ್ತದ ಕಾಳುಗಳು ಜೊಳ್ಳಾಗಿ ಬೆಳೆ ನಷ್ಟದ ಆತಂಕ ರೈತರನ್ನು ಕಾಣುತ್ತಿದೆ.

ಘಟ್ಟದ ಮೇಲಿನ ಪ್ರಮುಖ ಆಹಾರ ಬೆಳೆಯಾಗಿರುವ ಭತ್ತಕ್ಕೆ ಪ್ರತಿ ವರ್ಷವು ಒಂದಿಲ್ಲೊಂದು ಕೀಟ ಹಾಗೂ ರೋಗಭಾದೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಎದುರಿಸುವಂತಾಗಿದೆ. ಪ್ರಸಕ್ತ ಹಂಗಾಮಿನಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಬಹುತೇಕ ಕಡೆ ಸದ್ಯ ತೆನೆ ಹಂತದವರೆಗೆ ಬತ್ತ ಬೆಳವಣಿಗೆಯಾಗಿದೆ. ಈ ಹಂತದಲ್ಲಿ ಎಲೆ ಸುರಳಿ ಕೀಟ, ಕೊಳವೆ ಹುಳು, ಗಣ್ಣು ಹುಳಗಳ ಕಾಟ ಹೆಚ್ಚಿದೆ. ಮರಿಹುಳು ಕಾಂಡವನ್ನು ಕೊರೆದು ಸುಳಿ ಒಣಗುವಂತೆ ಮಾಡುತ್ತವೆ. ಇದರ ಹಾವಳಿ ತೆನೆ ಹಂತದಲ್ಲಿ ಕಂಡುಬಂದಿದ್ದು, ಬಿಳಿಯ ಜೊಳ್ಳು ತೆನೆಗಳು ಉಂಟಾಗುತ್ತಿವೆ. ಬನವಾಸಿ, ದಾಸನಕೊಪ್ಪ, ಅಂಡಗಿ, ಚಿಗಳ್ಳಿ, ಮಳಗಿ ಸೇರಿ ಮುಂಡಗೋಡ ಭಾಗದಲ್ಲಿ ಈ ರೋಗ ವ್ಯಾ‍ಪಕವಾಗಿದ್ದು, ರೈತರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.

ಬಹಳಷ್ಟು ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಬತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ರೈತರು ರೋಗ ಹತೋಟಿಗೆ ತರಲು ಅಪಾರ ಪ್ರಮಾಣದಲ್ಲಿ ಔಷಧ ಸಿಂಪಡಿಸಿದ್ದರು. ಅದು ಸುಧಾರಿಸಿತು ಎನ್ನುವಷ್ಟರಲ್ಲಿಯೇ ಈಗ ತೆನೆ ತಿಗಣೆ ಕಾಟದಿಂದ ರೈತ ಬಸವಳಿದು ಹೋಗಿದ್ದಾರೆ. ಮುಂಗಾರಿನಲ್ಲಿ ನಾಟಿ ನೆಟ್ಟು, ಗೊಬ್ಬರ ಹಾಕಿ ಬೆಳೆಸಿದ್ದ ಬತ್ತದ ಬೆಳೆ ಇನ್ನು ಒಂದೆರಡು ತಿಂಗಳಲ್ಲಿ ಕೊಯ್ಲುಗೆ ಬರಲಿದೆ. ಆದರೆ ಈ ಸಮಯದಲ್ಲಿಯೇ ತಿಗಣೆ ಬಾಧೆ ವ್ಯಾಪಿಸಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಿಗಣಿ ಹುಳಗಳು ಸೂಕ್ಷ್ಮವಾಗಿದ್ದು, ತೆನೆಯಲ್ಲಿರುವ ಭತ್ತದ ಕಾಳಿನ ಬಣ್ಣದಲ್ಲಿಯೇ ಇರುತ್ತವೆ. ಹೀಗಾಗಿ ಅವುಗಳು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಈ ಹುಳುಗಳು ಹಾಲು ತುಂಬುವ ಸಮಯದಲ್ಲಿ ಭತ್ತದ ಮೇಲೆ ದಾಳಿ ಮಾಡಿ ಬತ್ತದ ಕಾಳಿನ ಹಾಲನ್ನು ಹೀರುತ್ತವೆ. ಇದರಿಂದ ಭತ್ತದ ಕಾಳು ಜೊಳ್ಳು ಆಗಲಿದ್ದು, ಇಳುವರಿ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಭತ್ತದ ಬೆಳೆಗಾರರನ್ನು ಕಾಡುತ್ತಿದೆ.

ತೆನೆ ತಿಗಣೆಯು ಮೊಟ್ಟೆ ಒಡೆದು ಮರಿ ಹೊರ ಬರಲು ಸುಮಾರು ಮೂರರಿಂದ ಐದು ದಿನಗಳು ಬೇಕಾಗುತ್ತದೆ. ಜತೆಗೆ ಈ ಹುಳುಗಳು 22ರಿಂದ 28 ದಿನಗಳ ಅವಧಿಯಲ್ಲಿ ಐದು ಹಂತಗಳ ರೂಪದಲ್ಲಿ ಬೆಳೆಯುತ್ತಿದ್ದು. ಒಂದು ಪ್ರೌಢ ಕೀಟವು ಸುಮಾರು 75ರಿಂದ 135 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿರುವುದರಿಂದ ಸಂತನೋತ್ಪತ್ತಿ ತೀವ್ರಗತಿಯಲ್ಲಿ ನಡೆಯುತ್ತದೆ. ಹೀಗಾಗಿ ನೋಡ ನೋಡುತ್ತಿದ್ದಂತೆಯೇ ಭತ್ತದ ಗದ್ದೆಯನ್ನು ವ್ಯಾಪಿಸಿ ಬಿಡುತ್ತವೆ. ಬನವಾಸಿ ಭಾಗದ ಭತ್ತದ ಗದ್ದೆಗಳಿಗೆ ಭೇಟಿ ನೀಡಿ, ಬೆಳೆಗಾರರಿಗೆ ಕೀಟ ನಿಯಂತ್ರಣದ ಕುರಿತು ಸಲಹೆ ನೀಡಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದರು.

ಆತಂಕ:

ಮೇ ತಿಂಗಳಿನಿಂದ ಆರಂಭವಾದ ಮಳೆ ಸೆಪ್ಟೆಂಬರ್‌ವರೆಗೆ ಸುರಿದಿದ್ದು, ಮಳೆಯ ಆರ್ಭಟಕ್ಕೆ ಕೀಟ ಹಾಗೂ ರೋಗ ಬಾಧೆ ಕಡಿಮೆ ಇರಬೇಕಿತ್ತು. ನಿರಂತರವಾಗಿ ಸುರಿದ ಮಳೆಯಿಂದ ಬತ್ತದ ಸಸಿಗಳ ಬೆಳವಣಿಗೆಯೂ ನಿಧಾನಗತಿಯಾಗಿತ್ತು. ಕಾಳು ಹೊರುತ್ತಿರುವಾಗ ತಿಗಣಿ ಹುಳುಗಳು ಅದನ್ನು ತಿನ್ನುತ್ತಿವೆ. ಎಲೆ ಸುರಳಿ ಕೀಟ, ಕೊಳವೆ ಹುಳು ನಿಯಂತ್ರಣಕ್ಕೆ ಈಗಾಗಲೇ ಮೂರು ಬಾರಿ ಔಷಧಿ ಸಿಂಪಡಣೆ ಮಾಡಲಾಗಿದ್ದು, ಈಗ ತಿಗಣಿ ಹುಳುಗಳ ಕಾಟ ಕಾಡುತ್ತಿದೆ. ಕೀಟ ಬಾಧೆ ನಿಯಂತ್ರಣವಾಗದಿದ್ದರೆ ಇಳುವರಿ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.