ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಿಕ್ಷಾ ಚಾಲಕನೋರ್ವ ಮೈಗೆ ಬೆಂಕಿ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಗ್ಗೆ ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಒಂದಿಷ್ಟು ನಾಟಕೀಯ ಬೆಳವಣಿಗೆಗಳು ನಡೆದವು. ಗಾಂಧಿ ವೃತ್ತದಲ್ಲಿ ರಿಕ್ಷಾಗಳ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದ ಚಾಲಕರು ಆತ್ಮಹತ್ಯೆಗೆ ಯತ್ನಿಸಿದ ಚಾಲಕಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.ರಿಕ್ಷಾ ಚಾಲಕರು ಪ್ರತಿಭಟನೆ ನಡೆಸುವ ಸುಳಿವು ಅರಿತಿದ್ದ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಶಿವಮೊಗ್ಗ ರಸ್ತೆ, ಮೆದೆಹಳ್ಳಿ ರಸ್ತೆ, ಸಾರಿಗೆ ಸಂಸ್ಥೆ ನಿಲ್ದಾಣ ಮಾರ್ಗ ಹಾಗೂ ಚಿತ್ರದುರ್ಗ ಕೋಟೆಗೆ ಹೋಗುವ ದಾರಿ ಬಂದ್ ಮಾಡಿ ಚಾಲಕರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪ್ರವಾಸಿಗರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಆರಂಭದಲ್ಲಿ ಕೆಲಕಾಲ ಗಾಂಧಿ ವೃತ್ತ ಬಂದ್ ಮಾಡಿ ನಂತರ ನಗರ ಫೊಲೀಸ್ ಠಾಣೆಗೆ ಮೆರವಣಿಗೆಯಲ್ಲಿ ಹೋಗಬೇಕೆಂದು ಇಚ್ಚಿಸಿದ್ದ ರಿಕ್ಷಾ ಚಾಲಕರ ಇಚ್ಚೆಗೆ ಪೊಲೀಸರು ಅವಕಾಶ ಕೊಡಲಿಲ್ಲ.
ಪ್ರತಿಭಟನಾ ನಿರತ ರಿಕ್ಷಾಚಾಲಕರ ಬಳಿಗೆ ಬಂದ ಎಎಸ್‌ಪಿ ಶಿವಕುಮಾರ್ ಪ್ರತಿಭಟನೆ ಕೈ ಬಿಟ್ಟು ಎಂದಿನಂತೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು. ಈ ವೇಳೆ ಮನವಿ ಸಲ್ಲಿಸಿದ ಆಟೋ ಚಾಲಕರು ಶನಿ್ವಾರ ರಾತ್ರಿ ರಿಕ್ಷಾ ಚಾಲಕನ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನೊಂದ ಚಾಲಕ ಗಾಂದಿ ವೃತ್ತದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆಯತ್ನಿಸಿದ್ದಾನೆ.ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಆತ್ಮಹತ್ಯೆಗೆ ಯತ್ನಿಸಿ ದಾವಣಗೆರೆ ಆಸ್ಪತ್ರೆಯಲ್ಲಿರುವ ಚಾಲಕ ತಿಪ್ಪೇಸ್ವಾಮಿಗೆ ಸೂಕ್ತ ಚಿಕಿತ್ಸೆಕೊಡಿಸಬೇಕು. ಆತನ ಕುಟುಂಬಕ್ಕೆ 25 ಲಕ್ಷ ರುಪಾಯಿ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿತ್ತು. ಮನವಿ ಸ್ವೀಕರಿಸಿದ ಎಎಸ್ಪಿ ಶಿವಕುಮಾರ್ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನಾ ನಿರತ ರಿಕ್ಷಾ ಚಾಲಕರು ಅಲ್ಲಿಂದ ನಿರ್ಗಮಿಸಿದರು.
ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ
ಇದಕ್ಕೂ ಮೊದಲು ಘಟನೆಗೆ ಸಂಬಂದಿಸಿದಂತೆ ಮಾಹಿತಿ ನೀಡಿದ ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಶನಿವಾರ ರಾತ್ರಿ ಪಾನಮತ್ತನಾಗಿ ಸಂಚಾರಿ ನಿಯಮ ಉಲ್ಲಂಘಿಸಿ ಆಟೊಚಾಲನೆ ಮಾಡಿದ ಚಾಲಕ ತಿಪ್ಪೇಸ್ವಾಮಿ ಎಂಬುವಾತನ ಸಂಚಾರಿ ಪೋಲೀಸರು ತಡೆದು ಪ್ರಶ್ನಿಸಿದ್ದಾರೆ. ನಂತರ ಮದ್ಯ ಸೇವಿಸಿರುವುದ ದಾಖಲು ಮಾಡಲು ಹಾಲ್ಕೋ ಮೀಟರ್ ತಪಾಸಣೆಗೆ ಒಳಪಡಿಸಲು ಯತ್ನಿಸಿದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ ಎಂದರು. ಇದಾದ ಬಳಿಕ ಗಾಂಧಿ ವೃತ್ತದ ಮತ್ತೊಂದು ಬಂದಿಗೆ ರಸ್ತೆ ಮೇಲೆ ವೃತ್ತಾಕಾರದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಧ್ಯೆ ನಿಂತಿದ್ದಾನೆ. ಈ ವೇಳೆ ಮೈಗೆ ಸುರಿದುಕೊಂಡಿದ್ದ ಪೆಟ್ರೋಲ್ ಗೆ ಬೆಂಕಿ ತಾಗಿ ಅವಘಡ ಸಂಭವಿಸಿದೆ. ನಾಗರಿಕರು ತಕ್ಷಣವೇ ಚಾಲಕನ ನೆರವಿಗೆ ಧಾವಿಸಿದ್ದರೆ ಸುಟ್ಟ ಗಾಯಗಳಿಂದ ಆತನ ರಕ್ಷಿಸಬಹುದಿತ್ತು. ನಂತರ ಪೊಲೀಸರು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶೇ. 50 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿರುವುದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ರಂಜಿತ್ ಕುಮಾರ್ ಬಂಡಾರು ಹೇಳಿದರು.;Resize=(128,128))
;Resize=(128,128))
;Resize=(128,128))