ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ರಿಕ್ಕಿ ರೈ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.ರಿಕ್ಕಿ ರೈ ಭದ್ರತೆಗಾಗಿ ಮೂವರು ಗನ್ ಮ್ಯಾನ್ ಗಳನ್ನು ಹೊಂದಿದ್ದಾರೆ. ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಮೂವರು ಗನ್ ಮ್ಯಾನ್ ಗಳು, ಮನೆ ಕೆಲಸದವರು, ಸೆಕ್ಯುರಿಟಿ ಗಾರ್ಡ್ ಹಾಗೂ ಮ್ಯಾನೇಜರ್ ವಿಭಿನ್ನ ಹೇಳಿಕೆ ನೀಡಿದ್ದಾರೆ. ಅಲ್ಲದೆ , ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಕ್ಕೂ ವಿಚಾರಣಾಧೀನರ ಹೇಳಿಕೆಗೂ ತಾಳೆಯಾಗಿಲ್ಲ ಎನ್ನಲಾಗಿದೆ. ಇದನ್ನು ನೋಡಿದರೆ ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರುವ ಅನುಮಾನವೂ ಪೊಲೀಸರಿಗೆ ಮೂಡಿದೆ.
ಹೀಗಾಗಿ ರಿಕ್ಕಿ ರೈ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಇಷ್ಟೇ ಅಲ್ಲದೆ ತನಿಖೆಯ ದಿಕ್ಕು ತಪ್ಪಿಸಲು ಸಿಮ್ ಇಲ್ಲದ ಫೋನ್ ಬಿಸಾಕಿರುವುದು ಹಾಗೂ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿರಬಹುದು ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ.ಇದೇ ಕಾರಣಕ್ಕಾಗಿ ಪೊಲೀಸರು ರಿಕ್ಕಿ ರೈ ನೆಲೆಸಿದ್ದ ಬಿಡದಿ ಬಳಿಯ ಕರಿಯಪ್ಪನದೊಡ್ಡಿ ಮನೆಯಲ್ಲಿರುವ ಗನ್ ಗಳು ಹಾಗೂ ಬುಲೆಟ್ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ.
ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸಿಕ್ಕ ಬುಲೆಟ್ ಕಾಟ್ರಿಡ್ಜ್ ಇಟ್ಟುಕೊಂಡು, ಈ ಬುಲೆಟ್ ಅನ್ನು ಯಾವ ಗನ್ ಮೂಲಕ ಹಾರಿಸಿದ್ದಾರೆ ಎಂಬುದನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೇಲ್ನೋಟಕ್ಕೆ ಎಸ್ಬಿಬಿಎಲ್, ಅಂದರೆ ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಅಥವಾ ಡಿಬಿಬಿಎಲ್, ಅಂದರೆ ಡಬಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಎಂಬುದು ಪತ್ತೆಯಾಗಿದೆ.ರಿಕ್ಕಿ ರೈ ಮನೆ ಪರೀಶಿಲಿಸಿರುವ ಪೊಲೀಸರು ಭದ್ರತೆಗಾಗಿ ಬಳಸುತ್ತಿದ್ದ ಗನ್ ಗಳೆಷ್ಟು, ಎಷ್ಟು ಗನ್ ಗಳಿಗೆ ಲೈಸೆನ್ಸ್ ಇದೆ, ಎಷ್ಟು ಬುಲೆಟ್ಸ್ ಗಳಿವೆ ಎಂಬುದರ ಮಾಹಿತಿ ಕಲೆ ಹಾಕಿದ್ದಾರೆ. ಫೈರಿಂಗ್ ನಡೆದ ಸ್ಥಳದಲ್ಲಿ ಸಿಕ್ಕಿರುವ ಬುಲೆಟ್ ಹಾಗೂ ರಿಕ್ಕಿ ರೈ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ಬಳಸುತ್ತಿದ್ದ ಗನ್ ಗೂ ಸಾಮ್ಯತೆ ಕಂಡು ಬಂದಿದೆ. ಇದರ ಆಧಾರದ ಮೇಲೆ ಇದೊಂದು ಫೇಕ್ ಅಟ್ಯಾಕ್ ಎಂಬು ಅನುಮಾನ ದಟ್ಟವಾಗಿ ಕಾಡುತ್ತಿದೆ.
ರಸ್ತೆ ಪಕ್ಕದ ಲೇಔಟ್ನ ಕಾಂಪೌಂಡ್ ಒಳಭಾಗದಿಂದ ಫೈರಿಂಗ್ ಆಗಿರಬಹುದು. ಶಾರ್ಪ್ಶೂಟರ್ಸ್ಗಳು, ಕಾರಿನ ಮುಂಭಾಗದ ಡ್ರೈವರ್ ಸೀಟ್ ನತ್ತ ಫೈರ್ ಮಾಡಿರಬಹುದು. ಫೈರ್ ಆಗಿರುವ ಗುಂಡು ಕಾರಿನಿಂದ ಹೊರಗೆ ಹೋಗಿಲ್ಲ. ಹೀಗಾಗಿ ಎಷ್ಟು ದೂರದಿಂದ ಫೈರ್ ಮಾಡಿದ್ದಾರೆ ಎಂಬುದರ ತನಿಖೆಯಲ್ಲಿ ಪೊಲೀಸರು ತೊಡಗಿದ್ದಾರೆ.ಎ-1 ರಾಕೇಶ್ ಮಲ್ಲಿ ವಿಚಾರಣೆಗೆ ಹಾಜರು :
ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ ಮುತ್ತಪ್ಪ ರೈ ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಿದ್ದರು. ಆದರೆ, ರಾಕೇಶ್ ಮಲ್ಲಿ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ರಾಕೇಶ್ ಮಲ್ಲಿ ಬಿಡದಿ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ವಕೀಲರ ಜೊತೆ ಆಗಮಿಸಿದ ರಾಕೇಶ್ ಮಲ್ಲಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ಗೌಡ ವಿಚಾರಣೆ ನಡೆಸಿದ್ದಾರೆ.