ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಣ್ವ ಜಲಾಶಯ ನಿರ್ಮಾಣವಾದ ಸಮಯದಲ್ಲಿ ಮುಳುಗಡೆಯಾದ ಜಮೀನಿಗೆ ಪರ್ಯಾಯವಾಗಿ ದೊಡ್ಡಮಣ್ಣುಗುಡ್ಡೆಯಲ್ಲಿ ನೀಡಿದ್ದ ಭೂಮಿಯ ಹಕ್ಕು ಪತ್ರವನ್ನು ಶೀಘ್ರದಲ್ಲಿಯೇ ರೈತರಿಗೆ ವಿತರಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.ತಾಲೂಕಿನ ಕಸಬಾ ಹೋಬಳಿ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ಅವರು, ದೊಡ್ಡಮಣ್ಣುಗುಡ್ಡೆಯ ರೈತರಿಗೆ ಭೂಮಿ ಹಕ್ಕು ಪತ್ರ ಕೊಡಿಸುವ ಮೂಲಕ ಅವರು 30 ರಿಂದ 35 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಮುಕ್ತಿ ಕೊಡಿಸಲಾಗುವುದು ಎಂದರು.
ಡಿ.ಕೆ.ಸುರೇಶ್ ರವರು ಸಂಸದರಾಗಿದ್ದ ಅವಧಿಯಲ್ಲಿ ರೈತರ ಭೂಮಿಗೆ ಹಕ್ಕು ಕೊಡಿಸಲು ಸ್ವಂತ ಹಣದಲ್ಲಿ ಡ್ರೋಣ್ ಮೂಲಕ ಸರ್ವೇ ಮಾಡಿಸಿ ರಿಪೋರ್ಟ್ ಸಿದ್ಧಪಡಿಸಿದ್ದರು. ಈ ಡ್ರೋಣ್ ಸರ್ವೇಗೆ ಸುರೇಶ್ ಅವರೇ ವೈಯಕ್ತಿಕವಾಗಿ 68 ಲಕ್ಷ ರು. ಖರ್ಚು ಮಾಡಿದ್ದು, ಸುಪ್ರಿಂಕೋರ್ಟಿನಲ್ಲಿ ದಾವೆ ಹೂಡಿ ನಿಮ್ಮ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ನಿಮ್ಮ ಭೂಮಿಗೆ ಹಕ್ಕು ಕೊಡಿಸುವ ಕೆಲಸವನ್ನು ಸುರೇಶ್ ಅವರ ಕೈಯಲ್ಲಿಯೇ ಮಾಡುತ್ತೇವೆ ಎಂದು ಹೇಳಿದರು.ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆಯಲು ನೀವು ಆಶೀರ್ವಾದ ಮಾಡಿ ನೀವು ಬೆಳೆಸಿದವರಿಂದಲೇ ಜಿಲ್ಲೆಯ ಜನರು ಮೋಸ ಹೋಗಿದ್ದೀರಿ. ಈಗಲಾದರೂ ಕ್ಷೇತ್ರದ ಜನರು ಒಟ್ಟಾಗಿ ಹೊಸದಾಗಿ ಚಿಂತನೆ ನಡೆಸಿ, ಮನೆ ಮಕ್ಕಳನ್ನು ಬೆಂಬಲಿಸುವ ನಿರ್ಧಾರ ಮಾಡಬೇಕು. ನಾವು- ನೀವು ಸೇರಿ ನವ ರಾಮನಗರ ಕಟ್ಟೋಣ ಎಂದು ಇಕ್ಬಾಲ್ ಹುಸೇನ್ ಮನವಿ ಮಾಡಿದರು.
ಸಹಕಾರಿ ಕ್ಷೇತ್ರದಲ್ಲಿ ಸಹಬಾಳ್ವೆಯಿದ್ದು ಆಡಳಿತ ಮಂಡಳಿಗೆ ಇಚ್ಛಾಶಕ್ತಿಯಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದಕ್ಕೆ ಕನ್ನಮಂಗಲ ಎಂಪಿಸಿಎಸ್ ಆಡಳಿತ ಮಂಡಳಿಯವರು ಕಡಿಮೆ ಅವಧಿಯಲ್ಲಿ ಕಟ್ಟಿದ ನೂತನ ಕಟ್ಟಡ ಸಾಕ್ಷಿಯಾಗಿದೆ. ಅಷ್ಟೆ ಅಲ್ಲದೆ ಇತರ ಸಂಘಗಳಿಗೆ ಮಾದರಿಯಾಗುವಂತಿದೆ ಎಂದು ಆಡಳಿತ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಹಾಲನ್ನು ಅಮೃತ ಎನ್ನುತ್ತೇವೆ. ಹೈನುಗಾರಿಕೆ ನಂಬಿರುವ ಜನರಿಗೆ ಕಾಮದೇನು ಎಂದಿಗೂ ಕೈ ಬಿಡುವುದಿಲ್ಲ. ಹಾಗಾಗಿ ಪ್ರತಿ ಕುಟುಂಬದ ಸದಸ್ಯರು, ಮಹಿಳೆಯರು, ಯುವಕರು ಹಸು ಸಾಕಾಣಿಕೆಗೆ ಹೆಚ್ಚು ಒಲವು ತೋರಿ ನಿಮ್ಮ ಬದುಕನ್ನು ನೀವೇ ಸೃಷ್ಟಿಸಿಕೊಳ್ಳಿ. ಬಡವರಿಗೆ ಹಸು ಸಾಕಾಣಿಕೆಗೆ ಇಲಾಖಾ ವತಿಯಿಂದ ನೆರವು ನೀಡುವ ಜೊತೆಗೆ ಸಂಘಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರು. ಅನುದಾನ ನೀಡುತ್ತೇನೆ ಎಂದು ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ಬಮುಲ್ ನಿರ್ದೇಶಕ ಪಿ.ನಾಗರಾಜು ಮಾತನಾಡಿ, ಕಳೆದ 7 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘದಲ್ಲಿ 53 ಹಾಲು ಉತ್ಪಾದಕರಿದ್ದು, ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಪ್ರತಿನಿತ್ಯ 650 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕಡಿಮೆ ಅವಧಿಯಲ್ಲಿ 17.50 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚು ಇದ್ದು ರಾಜ್ಯದಲ್ಲಿ ವರ್ಷಕ್ಕೆ 1600 ಕೋಟಿ ರು. ಸಹಾಯ ಧನ ಹಾಲು ಉತ್ಪಾದಕರ ಕೈ ಸೇರುತ್ತಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ 10 ಸಾವಿರ ಕೋಟಿ ರು. ರೈತರಿಗೆ ಸೇರಿದೆ. ಒಂದು ಬಾಟೆಲ್ ನೀರಿನ ಬೆಲೆ 40 ರು. ಇದೆ, ಆದರೆ ರೈತರ ಹಾಲಿನ ಬೆಲೆ ಜಾಸ್ತಿ ಮಾಡಿದರೆ ಬಿಜೆಪಿ ಯವರು ಹೋರಾಟ ಮಾಡುತ್ತಾರೆ. ಇದನ್ನು ರೈತರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.ಹಸುಗಳಿಗೆ ಹೆಣ್ಣು ಕರು ಜನಿಸುವ ಸೆವೆನ್ ಹಾಕಿಸಿ, ಮನೆಯಲ್ಲಿ ಆರೋಗ್ಯವಂತ ಹಸು ಒಂದು ಇದ್ದರೆ ಐಶ್ವರ್ಯ ಉತ್ಪನ್ನವಾಗುತ್ತದೆ ಎಂಬುದನ್ನು ಮನಗಂಡು ಹೈನುಗಾರಿಕೆ ಕ್ಷೇತ್ರವನ್ನು ನಂಬಿ ಆರ್ಥಿಕವಾಗಿ ಸಬಲರಾಗಿ ಎಂದು ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು ಮಾತನಾಡಿ, ರಾಜ್ಯದಲ್ಲಿ ರೈತರ ಪರ ಕೆಲಸ ಮಾಡಿರುವವರಿಗೆ ಜನರು ಬೆಂಬಲವನ್ನು ಕೊಡಬೇಕು. ನಿಮ್ಮ ಕುಟುಂಬ ಸಾಕಬೇಕಾದರೆ ಯಾರ ಮೇಲೂ ಅವಲಂಬಿತರಾಗದೆ ಹೈನುಗಾರಿಕೆಯಂತಹ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸರ್ಕಾರ ಐದು ಗ್ಯಾರಂಟಿಗಳನ್ನು ನೀಡುವ ಜೊತೆಗೆ ಎಲ್ಲ ವರ್ಗದವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯವರಾದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಅವಕಾಶಗಳಿವೆ. ನಿಮ್ಮ ಪ್ರಗತಿಗೆ ಮತ್ತಷ್ಟು ನೆರವಾಗುವ ಕೆಲಸವಾಗುತ್ತದೆ ಎಂದರು.ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್ ಗೌಡ, ಸದಸ್ಯ ಎಂ. ರಾಜು, ಬಮುಲ್ ನಿರ್ದೇಶಕ ಹರೀಶ್, ಹಾರೋಹಳ್ಳಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್, ರಾಮನಗರ ಶಿಬಿರ ವ್ಯವಸ್ಥಾಪಕ ಡಾ.ಗಣೇಶ್, ವಿಸ್ತರಣಾಧಿಕಾರಿಗಳಾದ ಕವಿತಾ, ಉಮೇಶ್, ಸಂಘದ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷೆ ಮಮತಾ, ನಿರ್ದೇಶಕರಾದ ಸಣ್ಣಪ್ಪ, ಪುಟ್ಟಸ್ವಾಮಯ್ಯ, ಕೆಂಪಲಿಂಗಯ್ಯ, ನರಸಿಂಹಯ್ಯ ಮರಿಸ್ವಾಮಯ್ಯ, ಗುರುರಾಜು, ಶಂಭುಲಿಂಗಯ್ಯ, ಪ್ರಭಾವತಿ, ಸಿಇಒ ಮಂಜುನಾಥ.ಎಸ್, ಮುಖಂಡರಾದ ಗಾಂಧಿನಾಗ, ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಕುರುಬರಹಳ್ಳಿ ವಿ.ಎಸ್.ಎಸ್.ಎನ್ ನಿರ್ದೇಶಕ ಎಂ.ಉಮೇಶ್ , ಮುಖಂಡರಾದ ಶೇಖರ್, ಕೃಷ್ಣಪ್ಪ, ಹಾಲು ಪರೀಕ್ಷಕ ಎಸ್. ಮಂಜು ಉಪಸ್ಥಿತರಿದ್ದರು.