ಪ್ರತಿ ಸರ್ಕಾರಿ ಇಲಾಖೆ, ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಾರ್ವಜನಿಕರು ಕೇಳುವ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು.

ಹೊಸಪೇಟೆ: ಸಾರ್ವಜನಿಕರಿಗೆ ಮಾಹಿತಿ ಹಕ್ಕು ಎಂಬುದು ಸಾಂವಿಧಾನಿಕ ಬದ್ಧವಾಗಿ ದೊರೆತ ಕಾನೂನು ಹಕ್ಕು ಎಂದು ಕಲಬುರಗಿ ಪೀಠದ ಆಯುಕ್ತ ವೆಂಕಟಸಿಂಗ್ ಹೇಳಿದರು.

ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಜಿಲ್ಲಾ, ತಾಲೂಕು, ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗಾರ, ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಸರ್ಕಾರಿ ಇಲಾಖೆ, ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಾರ್ವಜನಿಕರು ಕೇಳುವ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಕೇಳಿದ ಮಾಹಿತಿ ಬೇರೆ ಇಲಾಖೆಗೆ ಸಂಬಂಧಿಸಿದ್ದಾಗಿದ್ದರೆ ವಿಷಯ ನಿರ್ವಾಹಕರು ಅಥವಾ ಅಧಿಕಾರಿಗಳು ವಿಳಂಬ ಮಾಡದೇ ತಕ್ಷಣವೇ ಆ ಅರ್ಜಿಯನ್ನು ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಬೇಕು ಎಂದರು.

ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಕೆ.ಬದ್ರುದ್ದೀನ್ ಮಾತನಾಡಿ, ಈ ಕಾಯ್ದೆ ಅತ್ಯಂತ ಸರಳ ಕಾಯ್ದೆ. ಸರ್ಕಾರದ ಕೆಲಸ ಎಲ್ಲರಿಗೂ ಸಿಗುವಂಥದಲ್ಲ. ಅಧಿಕಾರಿಗಳು ಸಹಾನುಭೂತಿ, ತಾಳ್ಮೆಯಿಂದ ಕಾರ್ಯ ನಿರ್ವಹಿಸಬೇಕು. ಮಾಹಿತಿ ಹಕ್ಕು ಅರ್ಜಿ ಬಂದಾಗ ತಾಳ್ಮೆ ಸಹಾನುಭೂತಿಯಿಂದ ಓದಿಕೊಂಡು ಅರ್ಥಮಾಡಿಕೊಂಡು ಪ್ರತ್ಯುತ್ತರ ನೀಡಬೇಕು. ಸರಿಯಾದ ಸಮಯಕ್ಕೆ ಅಂದರೆ ಕಾಯ್ದೆಯನ್ವಯ 30 ದಿನಗಳ ಒಳಗಾಗಿ ವಿಲೇವಾರಿ ಮಾಡದಿದ್ದಲ್ಲಿ ₹25 ಸಾವಿರ ದಂಡ, ₹1 ಲಕ್ಷದವರೆಗೆ ಪರಿಹಾರ ನೀಡಲು ಶಿಫಾರಸು ಮಾಡಲು ಆಯೋಗಕ್ಕೆ ಅವಕಾಶವಿದೆ ಎಂದರು.

ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಡಾ.ಹರೀಶಕುಮಾರ್ ಮಾತನಾಡಿ, ಜನರ ಆಶೋತ್ತರಗಳಿಗೆ ಅನುಗುಣವಾಗಿ ಕಾಯ್ದೆ ಕಾನೂನು ರೂಪಿಸಲಾಗುತ್ತದೆ. ಅಷ್ಟೇ ಅಧಿಕಾರ ಮಾಹಿತಿ ಹಕ್ಕು ಕೇಳುವ ಸಾರ್ವಜನಿಕನಿಗೆ ಇದೆ. ಸ್ವಾತಂತ್ರ್ಯಬಂದ 50 ವರ್ಷಗಳ ನಂತರ ಈ ಕಾಯ್ದೆ ಅಳವಡಿಸಿಕೊಳ್ಳಲಾಗಿದೆ. ಈ ಕಾಯ್ದೆಯ ಮುಖಾಂತರ ಸಾರ್ವಜನಿಕರು ನೇರವಾಗಿ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅಧಿಕಾರಿಗಳು ಅವರ ಆಶೋತ್ತರಗಳಿಗೆ ಉತ್ತದಾಯಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಡಬೇಕಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಕೇಳಿದ ವಿವಿಧ ಪ್ರಶ್ನೆಗಳು ಮತ್ತು ಸಂಶಯಗಳಿಗೆ ಸೂಕ್ತ ಉತ್ತರ ನೀಡಿ, ಗೊಂದಲಗಳನ್ನು ನಿವಾರಿಸಲಾಯಿತು.

ಕಾರ್ಯಾಗಾರದಲ್ಲಿ ಎಸ್ಪಿ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು.