ದಿನದಿಂದ ದಿನಕ್ಕೆ ಕೊಟ್ಟೂರು ಪಟ್ಟಣದಲ್ಲಿ ವಾಹನಗಳ ಸಂಚಾರ ಮತ್ತು ಜನದಟ್ಟನೆ ಹೆಚ್ಚಿಸಿಕೊಂಡಿರುವ ಕಾರಣಕ್ಕೆ ಟ್ರಾಫಿಕ್ ಜಾಮ್ ಆಗುತ್ತಿದ್ದು
ಜಿ.ಸೋಮಶೇಖರ ಕೊಟ್ಟೂರು
ಸಂಚಾರ ದಟ್ಟಣೆ ನಿಯಂತ್ರಿಸುವ ಹಿನ್ನೆಲೆ ಕೊಟ್ಟೂರು ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ನಗರಾಭಿವೃದ್ಧಿ ಇಲಾಖೆ ಮೂಲಕ ಸಾರ್ವಜನಿಕರ ಆಕ್ಷೇಪಣೆ ಸ್ವೀಕರಿಸುವ ಮಹತ್ವದ ಕಾರ್ಯ ಮುಕ್ತಾಯಗೊಳಿಸಿದ್ದರಿಂದ ಪಟ್ಟಣದ ಜನತೆಗೆ ಇನ್ನೂ ಕೆಲವೇ ವರ್ಷಗಳಲ್ಲಿ ವರ್ತುಲ ರಸ್ತೆ ಒದಗಿಸಿ ಕೊಡುತ್ತಿರುವುದು ಜನರಲ್ಲಿ ಹೊಸ ಬಗೆಯ ಭರವಸೆ ಮೂಡಿಸಿದೆ.ದಿನದಿಂದ ದಿನಕ್ಕೆ ಕೊಟ್ಟೂರು ಪಟ್ಟಣದಲ್ಲಿ ವಾಹನಗಳ ಸಂಚಾರ ಮತ್ತು ಜನದಟ್ಟನೆ ಹೆಚ್ಚಿಸಿಕೊಂಡಿರುವ ಕಾರಣಕ್ಕೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದ್ದರು. ಕೊಟ್ಟೂರೇಶ್ವರ ಜಾತ್ರಾ ಮಹೋತ್ಸವ ಮತ್ತು ಕಾರ್ತಿಕ ಮಹೋತ್ಸವಗಳಲ್ಲಿ ಸಂಚಾರದ ಒತ್ತಡ ಮತ್ತಷ್ಟು ಹೆಚ್ಚಾಗಲಿದ್ದು, ಈ ಕಾರಣಕ್ಕೆ ಪಟ್ಟಣದಲ್ಲಿ ರಿಂಗ್ ರೋಡ್ ನಿರ್ಮಾಣ ಮಾಡಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸುತ್ತಲೇ ಬಂದಿದ್ದರು.
ಇದೀಗ ಸರ್ಕಾರ ನಗರ ಮತ್ತು ಪಪಂ ವ್ಯಾಪ್ತಿಯಲ್ಲಿ ವರ್ತುಲ ನಿರ್ಮಾಣದ ಮಹತ್ವದ ಕಾರ್ಯ ಯೋಜನೆ ರೂಪಿಸಿ ಕೊಟ್ಟೂರು ಸೇರಿದಂತೆ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಮತ್ತು ಕಮಲಾಪುರ ಪಟ್ಟಣಗಳನ್ನು ಆಯ್ಕೆ ಮಾಡಿಕೊಂಡು ವರ್ತುಲ ರಸ್ತೆ ನಿರ್ಮಾಣದ ರೂಪರೇಷ ತಯಾರಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯಗಳಿಗೆ ಸೂಚಿಸಿರುವ ಹಿನ್ನೆಲೆ ನಗರಾಭಿವೃದ್ಧಿ ಇಲಾಖೆ ಈ ಸಂಬಂಧ ಇಲ್ಲಿನ ಜನತೆಯ ಆಕ್ಷೇಪಣೆ ಸಲ್ಲಿಸಲು ಸಮಯ ನಿಗದಿಗೊಳಿಸಿತ್ತು. ಈ ಅವಧಿ ಈಗಾಗಲೇ ಮುಕ್ತಾಯಗೊಂಡಿರುವುದರಿಂದ ಈ ಯೋಜನೆ ಶೀಘ್ರ ಕಾರ್ಯ ರೂಪ ಪಡೆಯುತ್ತದೆ ಎಂಬ ಆಶಾ ಭಾವನೆ ಜನತೆ ಹೊಂದಿದ್ದಾರೆ.ಪಪಂ ವ್ಯಾಪ್ತಿಯಿಂದ ವರ್ತುಲ ರಸ್ತೆ ಬ್ರೀಡ್ ಪ್ಲಾನ್ ತಯಾರುಗೊಂಡಿದ್ದು, ಯಾವ ಯಾವ ಪ್ರದೇಶದ ಮೂಲಕ ಹಾದು ಹೋಗುತ್ತದೆ ಎಂಬ ವಿವರ ಸಾರ್ವಜನಿಕವಾಗಿ ಪ್ರಕಟಿಸಿದೆ. ಜತೆಗೆ ಯಾವ ಮಾರ್ಗದಲ್ಲಿ ರಿಂಗ್ ರೋಡ್ ನಿರ್ಮಾಣವಾಗುತ್ತದೆ ಎಂಬ ಪರಿಚಯ ವಿವರಿಸಿದೆ.
ಅನುಕೂಲ: ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕೊಟ್ಟೂರು ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮಾಣಗೊಂಡರೆ ಪಟ್ಟಣದ ಒಳಪ್ರದೇಶದ ವಾಹನಗಳ ಸಂಚಾರ ದಟ್ಟನೆ ತಗ್ಗಲಿದೆ. ಅದಲ್ಲದೇ ಹೊರ ಭಾಗದ ವಾಹನ ಸಂಚಾರ ಪರ್ಯಾಯ ಮಾರ್ಗದ ಮೂಲಕ ತಿರುಗಿಸಿ ಅನುವು ಮಾಡಿಕೊಡಲಾಗುತ್ತದೆ.ಈಗಾಗಲೇ ಸರ್ಕಾರದ ಸೂಚಿಯಂತೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಗೆ ಪಪಂ ಕಾರ್ಯಾಲಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರ ಕಾಲಾವಧಿ ಇದೀಗ ಮುಕ್ತಾಯಗೊಂಡಿದ್ದು, ಯೋಜನೆಯ ಸಂಪೂರ್ಣ ಮಾಹಿತಿ ಮತ್ತು ಗ್ರಿಡ್ ಯೋಜನೆಯ ಮತ್ತಷ್ಟು ವಿವರ ಪಡೆದುಕೊಳ್ಳಲು ಪ್ರತಿಯೊಬ್ಬರಿಗೂ ಪಪಂ ಕಾರ್ಯಾಲಯ ಅವಕಾಶ ಕಲ್ಪಿಸಿ ಕೊಟ್ಟಿದೆ.
ಕೊಟ್ಟೂರು ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡುವ ಉದ್ದೇಶವಿರಿಸಿಕೊಂಡು ನಗರಾಭಿವೃದ್ಧಿ ಇಲಾಖೆ ಯೋಜನೆ ರೂಪಿಸಿ ಅಂದಾಜು ನಕ್ಷೆ ಪ್ರಕಟಿಸಿದೆ. ಇದರಿಂದ ಪಟ್ಟಣದ ಜನತೆಗೆ ಸಮಸ್ಯೆಗಳು ಇದ್ದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸುವ ಕಾರಣಕ್ಕಾಗಿ ಸಾರ್ವಜನಿಕರ ಗಮನಕ್ಕೆ ತಂದು ಪ್ರಕಟಿಸಿದ್ದೇವೆ ಎಂದು ಕೊಟ್ಟೂರು ಪಪಂ ಮುಖ್ಯಾಧಿಕಾರಿ ಎ.ನಸುರುಲ್ಲಾ ತಿಳಿಸಿದ್ದಾರೆ.ಕೊಟ್ಟೂರು ಜನತೆಯ ಬಹು ದಿನದ ಬೇಡಿಕೆಯಾಗಿದ್ದ ವರ್ತುಲ ರಸ್ತೆ ನಿರ್ಮಾಣ ಕಾರ್ಯ ಇದೀಗ ಕಾರ್ಯರೂಪ ಪಡೆಯುವತ್ತ ಮುಂದಾಗಿರುವುದು ಸಂತೋಷದ ಸಂಗತಿ. ಪದೇ ಪದೇ ಪಟ್ಟಣದ ರಸ್ತೆಗಳಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಮತ್ತು ವಾಹನಗಳ ಸಂಚಾರದ ದಟ್ಟನೆ ಈ ರಸ್ತೆಯ ಮೂಲಕ ಕಡಿಮೆಯಾಗಲಿದೆ ಎಂದು ಕೊಟ್ಟೂರು ವಾಹನ ಮಾಲೀಕ ಮಲ್ಲಿಕಾರ್ಜುನ ತಿಳಿಸಿದ್ದಾರೆ.