ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗಣೇಶಮೂರ್ತಿ ಮೆರವಣಿಗೆ ಸಮಯದಲ್ಲಿ ಉಂಟಾಗಿದ್ದ ಕೋಮು ಗಲಭೆಯಿಂದಾಗಿ ಪ್ರಕ್ಷುಬ್ದಗೊಂಡಿದ್ದ ನಾಗಮಂಗಲ ಪಟ್ಟಣ ಸಹಜ ಸ್ಥಿತಿಯತ್ತ ಮರಳುತ್ತಿದೆ.ಪಟ್ಟಣದಾದ್ಯಂತ ಪೊಲೀಸ್ ಭದ್ರತೆ ಮುಂದುವರಿದಿದೆ. ಯಾವುದೇ ಸಣ್ಣ ಪುಟ್ಟ ಘಟನೆಗಳು ಮರುಕಳಿಸದಂತೆ ಎಲ್ಲಡೆ ಹದ್ದಿನ ಕಣ್ಣಿಟ್ಟಿರುವ ಖಾಕಿ ಪಡೆ ಕಟ್ಟೆಚ್ಚರ ವಹಿಸಿದೆ.
ಶುಕ್ರವಾರ ಬೆಳಿಗ್ಗೆ ಎಂದಿನಂತೆ ಹಾಲು, ತರಕಾರಿ, ಔಷಧಿ ಸೇರಿದಂತೆ ಇನ್ನಿತರೆ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದರೆ, ಬಹುತೇಕ ದಿನಸಿ ಮತ್ತು ಬಟ್ಟೆ ಅಂಗಡಿಗಳು ಶುಕ್ರವಾರವೂ ಮುಚ್ಚಿದ್ದವು. ಶುಕ್ರವಾರ ಸಂಪೂರ್ಣ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ.ಪ್ರತಿನಿತ್ಯ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಜನರ ಸಂಖ್ಯೆ ವಿರಳವಾಗಿತ್ತು. ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನ ನಡೆದವು.
ಪಟ್ಟಣ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಶುಕ್ರವಾರ ವಾರದ ಸಂತೆ ನಡೆಯಲಿಲ್ಲ. ಸಂತೆ ಬೀದಿಯಲ್ಲಿ ಬೆರಳೆಣಿಕೆಯಷ್ಟು ತರಕಾರಿ ಮಾರಾಟ ಹೊರತುಪಡಿಸಿ ಬೇರ್‍ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ.ಬುಧವಾರ ರಾತ್ರಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಪಟ್ಟಣ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೆಸ್ಕಾಂ ಸಿಬ್ಬಂದಿ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೂ ಹೆದ್ದಾರಿ ಬದಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿ ಸುಟ್ಟುಹೋಗಿದ್ದ ಕೇಬಲ್ ಬದಲಿಸಿ ಈ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಿದರು.
ಮುಸ್ಲಿಂ ಸಮುದಾಯವೇ ಹೆಚ್ಚಾಗಿರುವ ಪಟ್ಟಣದ ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಯಾವೊಂದು ಅಂಗಡಿಗಳೂ ತೆರೆದಿರಲಿಲ್ಲ. ಇದರಿಂದ ಎರಡೂ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಮಾಗಡಿ- ಜಲಸೂರು ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತಿತ್ತು. ಕೋಮು ಗಲಭೆಯಿಂದಾಗಿ ಭಯಭೀತರಾಗಿದ್ದ ಪಟ್ಟಣದ ಜನರು ನಿಟ್ಟುಸಿರು ಬಿಟ್ಟು ತಮ್ಮ ಕೆಲಸ ಕಾರ್ಯ ಮುಂದುವರಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ಕೊಟ್ಟು ಗಲಭೆಯಿಂದ ಹಾನಿಗೊಳಗಾಗಿರುವ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಂಧಿತ ಕುಟುಂಬಸ್ಥ ಮಹಿಳೆಯರು ಕೇಂದ್ರ ಸಚಿವ ಎಚ್ಡಿಕೆ ಬಳಿ ತೆರಳಿ ನಮ್ಮವರ ತಪ್ಪಿಲ್ಲದಿದ್ದರೂ ಪೊಲೀಸರು ರಾತ್ರಿ ವೇಳೆ ಮನೆಗೆ ನುಗ್ಗಿ ಬಂಧಿಸಿ ಕರೆದೊಯ್ದಿದ್ದಾರೆ ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡರು.ನಂತರ ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್, ಮಾಜಿ ಎಂಎಲ್‌ಸಿ ಸಂಪಂಗಿ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪಟ್ಟಣಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಬದರಿಕೊಪ್ಪಲು ಹಾಗೂ ಗಣೇಶ ಮೂರ್ತಿಮೆರವಣಿಗೆ ವೇಳೆ ಕಲ್ಲು, ಗಾಜಿನ ಬಾಟಲ್ ತೂರಾಟ ನಡೆಸಿ ಗಲಭೆ ಸೃಷ್ಟಿಸಿದ್ದ ಮಂಡ್ಯ ಹಾಗೂ ಮೈಸೂರು ರಸ್ತೆಯ ಮುಸ್ಲಿಂ ವಾರ್ಡ್‌ಗಳಲ್ಲಿ ಯುವಕರ ಸಂಖ್ಯೆ ವಿರಳವಾಗಿತ್ತು. ಬದರಿಕೊಪ್ಪಲಿನ ಮುಖ್ಯದ್ವಾರದಲ್ಲಿ ಪೊಲೀಸ್ ಪ್ಯಾಟ್ರೋಲಿಂಗ್ ವಾಹನ ನಿಯೋಜಿಸಿ ಇನ್ಸ್‌ಪೆಕ್ಟರ್ ಸಂತೋಷ್ ನೇತೃತ್ವದ ಪೊಲೀಸ್ ಭದ್ರತೆ ಒದಗಿಸಲಾಗಿದೆ.