ಔಷಧ ಬೆಲೆ ಏರಿಕೆಯಿಂದ ಜನರಿಗೆ ಆರ್ಥಿಕ ಹೊರೆ: ಸಂಸದೆ ಡಾ.ಪ್ರಭಾ

| Published : Apr 04 2025, 12:45 AM IST

ಸಾರಾಂಶ

ರಾಷ್ಟ್ರೀಯ ಔಷಧಿ ಬೆಲೆ ನಿರ್ವಹಣಾ ಪ್ರಾಧಿಕಾರ (ಎನ್‌ಪಿಪಿಎ) ತೆಗೆದುಕೊಂಡ ನಿರ್ಧಾರದಿಂದ ಜೀವನ ಅವಶ್ಯಕ ಔಷಧಗಳ ಬೆಲೆ ಶೇ.50ರಷ್ಟು ಏರಿಕೆ ಆಗಲಿದೆ. ಈ ನಿರ್ಧಾರದ ಪರಿಣಾಮವಾಗಿ ದೇಶದ ಕೋಟ್ಯಂತರ ರೋಗಿಗಳು, ವಿಶೇಷವಾಗಿ ಆರ್ಥಿಕ ದುರ್ಬಲರಿಗೆ ಹೆಚ್ಚಿನ ಹೊರೆ ಆಗಲಿದೆ ಎಂದು ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆತಂಕ ವ್ಯಕ್ತಪಡಿಸಿದ್ದಾರೆ.

- ಸೂಕ್ತ ಕ್ರಮಕ್ಕೆ ರಾಸಾಯನಿಕ, ರಸಗೊಬ್ಬರ ಸಚಿವಾಲಯಕ್ಕೆ ಮನವಿ

- - -

ದಾವಣಗೆರೆ: ರಾಷ್ಟ್ರೀಯ ಔಷಧಿ ಬೆಲೆ ನಿರ್ವಹಣಾ ಪ್ರಾಧಿಕಾರ (ಎನ್‌ಪಿಪಿಎ) ತೆಗೆದುಕೊಂಡ ನಿರ್ಧಾರದಿಂದ ಜೀವನ ಅವಶ್ಯಕ ಔಷಧಗಳ ಬೆಲೆ ಶೇ.50ರಷ್ಟು ಏರಿಕೆ ಆಗಲಿದೆ. ಈ ನಿರ್ಧಾರದ ಪರಿಣಾಮವಾಗಿ ದೇಶದ ಕೋಟ್ಯಂತರ ರೋಗಿಗಳು, ವಿಶೇಷವಾಗಿ ಆರ್ಥಿಕ ದುರ್ಬಲರಿಗೆ ಹೆಚ್ಚಿನ ಹೊರೆ ಆಗಲಿದೆ ಎಂದು ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆತಂಕ ವ್ಯಕ್ತಪಡಿಸಿದರು.

ಗುರುವಾರ ಸಂಸತ್ತಿನಲ್ಲಿ ನಡೆದ ಸಾರ್ವಜನಿಕ ಮಹತ್ವದ ವಿಷಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು ಅಸ್ತಮಾ, ಗ್ಲೂಕೋಮಾ, ಥಲಸ್ಸಿಮಿಯಾ, ಕ್ಷಯರೋಗ ಮತ್ತು ಮಾನಸಿಕ ಆರೋಗ್ಯ ತೊಂದರೆಗಳ ಚಿಕಿತ್ಸೆಗೆ ಬಳಸುವ 8 ಅವಶ್ಯಕ ಔಷಧಿಗಳಿಗೆ ಶೇ.50% ಬೆಲೆ ಏರಿಕೆಗೆ ಅನುಮತಿ ನೀಡಲಾಗಿದೆ. ಈ ನಿರ್ಧಾರ ಜೀವರಕ್ಷಕ ಔಷಧಿಗಳ 11 ಸಂಯೋಜನೆಗಳ ಬೆಲೆ ಗಣನೀಯವಾಗಿ ಹೆಚ್ಚಿಸಲಿದೆ. ಪರಿಣಾಮ ದೇಶದ ಲಕ್ಷಾಂತರ ರೋಗಿಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂದರು.

ಔಷಧ ಉತ್ಪಾದನೆಯ ಸ್ಥಿರತೆ ಖಾತ್ರಿಪಡಿಸುವುದು ಮುಖ್ಯವಾದರೂ, ಸಾಮಾನ್ಯ ನಾಗರಿಕರಿಗೆ ಅವಶ್ಯಕ ಔಷಧಿಗಳ ಲಭ್ಯತೆಯನ್ನೂ ಸರ್ಕಾರ ಗಮನದಲ್ಲಿಡಬೇಕು. ಆದ್ದರಿಂದ, ರೋಗಿಗಳಿಗೆ ಅತಿಯಾದ ಆರ್ಥಿಕ ಹೊರೆ ಆಗದಂತೆ ತಡೆಯಲು ಮತ್ತು ಅವಶ್ಯಕ ಔಷಧಿಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಕೇಂದ್ರ ಸರ್ಕಾರವು ಈ ನಿರ್ಧಾರ ಪುನರ್‌ ಪರಿಗಣಿಸಬೇಕು ಮತ್ತು ಸಾರ್ವಜನಿಕ ಆರೋಗ್ಯ ಅಗತ್ಯಗಳೊಂದಿಗೆ ಉದ್ಯಮದ ಸುಸ್ಥಿರತೆ ಸಮತೋಲನಗೊಳಿಸಲು ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕಗಳು, ಬೆಲೆ ಮಿತಿಗಳು ಅಥವಾ ಸಬ್ಸಿಡಿಗಳಂತಹ ಪರ್ಯಾಯಗಳನ್ನು ಅನ್ವೇಷಿಸಬೇಕೆಂದು ಒತ್ತಾಯಿಸಿದರು.

- - - -3ಕೆಡಿವಿಜಿ31: ಡಾ.ಪ್ರಭಾ