ಹೆಚ್ಚುತ್ತಿರುವ ಬಿಸಿಲಿನ ತಾಪ: ಸಾರ್ವಜನಿಕರು ಹೈರಾಣು

| Published : Apr 01 2024, 12:53 AM IST

ಹೆಚ್ಚುತ್ತಿರುವ ಬಿಸಿಲಿನ ತಾಪ: ಸಾರ್ವಜನಿಕರು ಹೈರಾಣು
Share this Article
  • FB
  • TW
  • Linkdin
  • Email

ಸಾರಾಂಶ

40ರಿಂದ 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಸರಾಸರಿ ಇದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ

ಕನ್ನಡಪ್ರಭ ವಾರ್ತೆ ರಾಯಚೂರು/ಸಿಂಧನೂರು

ಕಳೆದ ಒಂದು ವಾರದಿಂದ ಬಿಸಿಲಿನ ಧಗೆ ಹೆಚ್ಚುತ್ತಿದ್ದು, ಸಾರ್ವಜನಿಕರು ಮಧ್ಯಾಹ್ನ 12ಗಂಟೆಯಾದರೆ ಸಾಕು ಸೂರ್ಯನ ಬಿಸಿಲಿನ ತಾಪಕ್ಕೆ ಮನೆ ಸೇರುತ್ತಿದ್ದಾರೆ.

40ರಿಂದ 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಸರಾಸರಿ ಇದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಬ್ಯಾಂಕ್, ಸರ್ಕಾರಿ ಕಚೇರಿಗಳು, ಎಲ್ಐಸಿ, ಅಂಚೆ ಕಚೇರಿ, ಖಾಸಗಿ ಸಂಘ-ಸಂಸ್ಥೆಗಳಲ್ಲಿ ಫ್ಯಾನ್‌ ವಿದ್ಯುತ್ ನಿಲುಗಡೆಯಿಂದ ಬಂದ್ ಆದರೆ ಸಾಕು ಮೈಯೆಲ್ಲಾ ಬೆವರಿಳಿದು ಸಿಬ್ಬಂದಿ ಹೊರಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಮನೆಗಳಲ್ಲೂ ಸಹ ಸಣ್ಣಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವೃದ್ಧರು ಬೇಸಿಲಿನ ಧಗೆಗೆ ಒದ್ದಾಡುತ್ತಿದ್ದಾರೆ. ಅದರಲ್ಲೂ ರಾತ್ರಿಯ ವೇಳೆ ತಾಸುಗಟ್ಟಲ್ ವಿದ್ಯುತ್ ಹೋದಾಗ ಶೆಕೆ ತಾಳಲಾರದೆ ಸಂಕಟ ಪಡುತ್ತಾರೆ.

ಬೆವರಿಳಿಸಿಕೊಳ್ಳುತ್ತಿರುವ ಸಂಚಾರಿ ಪೊಲೀಸರು: ನಗರದ ಪ್ರಮುಖ ವೃತ್ತಗಳಲ್ಲಿ ಕರ್ತವ್ಯಪಾಲನೆ ಮಾಡುತ್ತಿರುವ ಸಂಚಾರಿ ಪೊಲೀಸರು ಉರಿ ಬಿಸಿಲಿನಿಂದಾಗಿ ನಿತ್ಯವೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಹಾತ್ಮಗಾಂಧಿ, ಬಸವ, ಕನಕದಾಸ, ಕಿತ್ತೂರುಚೆನ್ನಮ್ಮ, ಅಂಬೇಡ್ಕರ್ ವೃತ್ತಗಳಲ್ಲಿ ಕೆಲಸ ಮಾಡುವ ಪೊಲೀಸರು ಬಿಸಿಲಿನ ತಾಪ ತಾಳಲಾರದೆ ತಮ್ಮ ಕರವಸ್ತ್ರವನ್ನು ನೀರಿನಲ್ಲಿ ನೆನೆಸಿಕೊಂಡು ಮುಖ ಒರೆಸಿಕೊಳ್ಳುತ್ತಿರುವುದು ಕಂಡು ಬಂದಿದೆ.

ಹಾಗೆಯೇ ವೃತ್ತಗಳಲ್ಲಿ ಅರವಟ್ಟಿಗೆಗಳಲ್ಲಿನ ನೀರನ್ನು ಸೇವಿಸುತ್ತಾ ಸಂಚಾರಿ ಕೆಲಸದಲ್ಲಿ ತೊಡಗಿದ್ದಾರೆ. ಸಿಗ್ನಲ್‌ಗಳು ಕೈಕೊಟ್ಟರಂತೂ ಪೊಲೀಸರು ಹರಸಾಹಸ ಪಡುತ್ತಾ ವೃತ್ತಗಳ ಮಧ್ಯೆ ಕೈ ಸನ್ನೆ ಮಾಡುತ್ತಾ ಕಾರ್ಯನಿರ್ವಹಿಸುವಾಗ ಅವರ ಸ್ಥಿತಿ ಹೇಳಲಾಗದು. ಇನ್ನು ಎರಡು ತಿಂಗಳು ಬಿಸಿಲಿನ ಧಗೆ ಹೀಗೆಯೇ ಮುಂದುವರೆಯಲಿದ್ದು, ಕನಿಷ್ಠ ಎಲ್ಲಾ ವೃತ್ತಗಳಲ್ಲಿ ಸಂಚಾರಿ ಪೊಲೀಸರಿಗೆ ಕನಿಷ್ಠ ನೆರಳಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇಲ್ಲದಿದ್ದರೆ ವೃತ್ತಗಳ ಅಕ್ಕ-ಪಕ್ಕದ ಅಂಗಡಿ-ಮುಗ್ಗಟ್ಟುಗಳಲ್ಲಿ ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಮತ್ತೇ ಕರ್ತವ್ಯದಲ್ಲಿ ತೊಡಗುತ್ತಾರೆ.

ವೃತ್ತಗಳಲ್ಲಿ ನೆರಳಿನ ಪರ್ಯಾಯ ವ್ಯವಸ್ಥೆಗೆ ಆಗ್ರಹ:

ಸಿಂಧನೂರು ನಗರಸಭೆಯವರು ಸ್ವಯಂಪ್ರೇರಿತರಾಗಿ ಮಹಾತ್ಮಗಾಂಧಿ ವೃತ್ತದಲ್ಲಿ ಸಿಗ್ನಲ್ ಲೈಟ್‌ಗಳು ಬೀಳುತ್ತಿದ್ದಂತೆಯೇ ವಾಹನಗಳನ್ನು ಒಂದೂವರೆ ನಿಮಿಷ ನಿಲ್ಲಿಸುವಾಗ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದರು. ಗಂಗಾವತಿ, ರಾಯಚೂರು, ಕುಷ್ಟಗಿ ರಸ್ತೆಗಳ ವಾಹನಗಳು ಸಿಗ್ನಲ್‌ ಲೈಟ್‌ಗಳಿಗೆ ಅನುಗುಣವಾಗಿ ನಿಂತಾಗ ಹಸಿರು ಬಣ್ಣದ ದೊಡ್ಡ ಗಾತ್ರದ ಬರಕಾಗಳನ್ನು ಹಾಕಿಸಿದ್ದರು. ಎರಡೇ ದಿನದಲ್ಲಿ ತಹಸೀಲ್ದಾರ್‌ ಕಚೇರಿ ಬಳಿ ಹಾಕಿಸಲಾಗಿದ್ದ ಬರಕಾ ಗಾಳಿಯಿಂದಾಗಿ ಕಿತ್ತುಕೊಂಡು ಹೋಯಿತು. ತದನಂತರ ಎರಡು ದಿನದಲ್ಲಿ ಗಂಗಾವತಿ ಹಾಗೂ ಕುಷ್ಟಗಿ ರಸ್ತೆಗಳಿಗೆ ಹೊಂದಿಕೊಂಡಂತೆ ಹಾಕಿದ್ದ ಬರಕಾಗಳು ಕಿತ್ತುಕೊಂಡು ಹೋದವು. ಈಗ ವಾಹನ ಸವಾರರು ಬಿಸಿಲಿನ ತಾಪದಿಂದಾಗಿ ವೃತ್ತಗಳಲ್ಲಿ ನಿಲ್ಲುವುದು ಯಾತನದಾಯಕವಾಗಿದೆ.

ಇದಕ್ಕೆ ಪರ್ಯಾಯವಾಗಿ ನಗರಸಭೆಯವರು ಈ ಮೊದಲು ಹಾಕಿದ ಮೂರು ಸ್ಥಳಗಳಲ್ಲಿ ದೊಡ್ಡ-ದೊಡ್ಡ ತಟ್ಟಿ ಹಾಕಿಸಿ ಅವರು ಕಿತ್ತಿಕೊಂಡು ಹೋಗದಂತೆ, ಗಾಳಿಗೆ ಹಾರಿ ಹೋಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡ ಅಮೀನಸಾಬ ನದಾಫ್ ಒತ್ತಾಯಿಸಿದ್ದಾರೆ.

ಕಡಿಮೆಯಾಗಿರುವ ನೀರಿನ ಅರವಟ್ಟಿಗೆಗಳು:

ಕಳೆದ ವರ್ಷದ ಬಿಸಿಲಿನ ತಾಪವನ್ನು ಹಾಗೂ ಅರವಟ್ಟಿಗೆಗಳನ್ನು ಗಮನಿಸಿದಾಗ ಈ ವರ್ಷ ಬಿಸಿಲಿನ ತಾಪಮಾನ ಕಳೆದ ವರ್ಷ ಮಾರ್ಚ್ ತಿಂಗಳನ್ನು ಹೋಲಿಸಿದಾಗ ಹೆಚ್ಚಿದೆ. ಆದರೆ ಕಳೆದ ವರ್ಷ ಪ್ರತಿ ವೃತ್ತಗಳಲ್ಲೂ ಎರಡ್ಮೂರು ಅರವಟ್ಟಿಗೆಗಳನ್ನು ವಿವಿಧ ಸಂಘ-ಸಂಸ್ಥೆಯವರು ಇಟ್ಟಿದ್ದರು. ಆದರೆ ಈ ವರ್ಷ ಕೋರ್ಟ್ ಸರ್ಕಲ್ ಬಳಿ 2 ಅರವಟ್ಟಿಗೆಗಳು ಮಾತ್ರ ಕಣ್ಣಿಗೆ ಕಾಣುತ್ತಿವೆ. ಉಳಿದಂತೆ ಅಲ್ಲೊಂದು-ಇಲ್ಲೊಂದು ಇವೆ. ಜನಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅದರಲ್ಲೂ ಹಳ್ಳಿಗಳಿಂದ ಬರುವ ಜನತೆಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಬೇಕು.

ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ 1ರಿಂದ ಸಂಜೆ 4 ಗಂಟೆಯವರೆಗೆ ಹೊರಗಡೆ ಸಂಚಾರ ಕಡಿಮೆ ಮಾಡುವುದು ಸೂಕ್ತ ಸಾಮಾನ್ಯ ದಿನಗಳಲ್ಲಿ ಆರೋಗ್ಯಯುತ ವ್ಯಕ್ತಿ 5 ಲೀಟರ್ ನೀರು ಕುಡಿಯಬೇಕು. ಬಿಸಿಲು ಕಾಲದಲ್ಲಿ 10 ಲೀಟರ್‌ಗಿಂತ ಹೆಚ್ಚು ನೀರು ಕುಡಿಯಬೇಕು. ನಿಂಬೆ ಹಣ್ಣಿನ ಶರಬತ್ ಸೇವಿಸಲು ಜನರು ಆದ್ಯತೆ ನೀಡಬೇಕು. ಇದರಿಂದ ಆರೋಗ್ಯಕ್ಕೂ ಉತ್ತಮ.

ಡಾ.ಸುರೇಂದ್ರಬಾಬು, ಡಿಎಚ್ಒ, ರಾಯಚೂರು.