ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಅರೆ ಸಂಸ್ಕರಿತ ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್.ವ್ಯಾಲಿ ನೀರಿನಿಂದ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಸರ್ಕಾರ ಮೂರನೇ ಹಂತದ ಶುದ್ಧೀಕರಣ ಮರೆತಿದೆ. ಈ ವಿಚಾರ ಹಾಗೂ ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.ಅವಳಿ ವ್ಯಾಲಿಯಲ್ಲಿ ಅಪಾಯ ವಿಶೇಷ ವರದಿಗೆ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ಓಂಕಾರಮೂರ್ತಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎತ್ತಿನಹೊಳೆ ಯೋಜನೆ ಬಿಳಿ ಆನೆ
ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅದೊಂದು ಬಿಳಿ ಆನೆ ಆಗಿ ಪರಿಣಮಿಸಿದೆ. ಅವಳಿ ವ್ಯಾಲಿಗಳ ನೀರಿನಿಂದ ಎರಡೂ ಜಿಲ್ಲೆಗಳಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತ ವರದಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಬಂದಿದೆ, ಇದು ನಮ್ಮ ಹೋರಾಟಕ್ಕೆ ಲಭಿಸಿದ ಗೌರವವೂ ಆಗಿದೆ ಎಂದರು.ಈಗಾಗಲೇ ಉಭಯ ಜಿಲ್ಲೆಗಳ ಅಂತರ್ಜಲ ವಿಷಯುಕ್ತವಾಗಿದೆ, ಅದನ್ನೇ ನಾವು ಹೇಳುತ್ತಿಲ್ಲ ಬದಲಾಗಿ ವಿಜ್ಞಾನಿಗಳು ನೀಡಿರುವ ವಿವಿಧ ವರದಿಗಳು ದೃಢಪಡಿಸಿವೆ, ಯಥೇಚ್ಛವಾಗಿ ಯುರೇನಿಯಂ ಸೇರಿದಂತೆ ವಿವಿಧ ಲೋಹಾಂಶಗಳು ಅಡಗಿವೆ, ವಿಧಿ ಇಲ್ಲದೆ ನಾವೆಲ್ಲಾ ಇನ್ನೂ ಅದೇ ನೀರು ಕುಡಿಯುತ್ತಿದ್ದೇವೆ ಎಂದರು.
3ನೇ ಹಂತದ ಶುದ್ಧೀಕರಣ ಅಗತ್ಯಕೆ.ಸಿ.ವ್ಯಾಲಿ ನೀರನ್ನು ಸದ್ಯ ಕೇವಲ ಎರಡು ಹಂತಗಳಲ್ಲಿ ಸಂಸ್ಕರಣೆ ಮಾಡಿ ಹರಿಸಲಾಗುತ್ತಿದೆ, ೩ನೇ ಹಂತದ ಶುದ್ಧೀಕರಣ ಮಾಡಿ ಎಂದು ಹೋರಾಟ ಮಾಡಿದರೆ ಬೇರೆ ವಿಚಾರಗಳನ್ನು ತಿಳಿಸುತ್ತಾ ಜನರ ದಾರಿ ತಪ್ಪಿಸಲಾಗುತ್ತಿದೆ. ಹೀಗೆಯೇ ಮುಂದುವರಿದರೆ ಮುಂದೆ ಹಲವಾರು ಕಾಯಿಲೆ ಬರುತ್ತವೆ ಎಂದು ಎಚ್ಚರಿಸಿದರು.ಕಳೆದ ಐದು ವರ್ಷಗಳಲ್ಲಿ ೧೨೬ ಕೆರೆ ತುಂಬಿಸಬೇಕಿತ್ತು. ಆದರೆ ಅರ್ಧವೂ ತುಂಬಿಲ್ಲ. ಹಿಂದಿನ ಮೂರ್ನಾಲ್ಕು ವರ್ಷ ಭಾರಿ ಮಳೆ ಕಾರಣ ಕೊಳಚೆ ನೀರು ತಮಿಳುನಾಡಿನತ್ತ ಕೊಚ್ಚಿ ಹೋಗಿದೆ ಅಷ್ಟೇ. ಸರ್ಕಾರ ಪ್ರಶಸ್ತಿ ನೀಡಿದರೆ ಸಾಲದು, ಮಾಧ್ಯಮಗಳು ನೀಡಿರುವ ಸಲಹೆಗಳನ್ನು ಅನುಷ್ಠಾನ ಮಾಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಕೆ.ಓಂಕಾರಮೂರ್ತಿ ಮಾತನಾಡಿದರು. ನೀರಾವರಿ ಹೋರಾಟಗಾರ ವಿ.ಕೆ.ರಾಜೇಶ್, ಮುಖಂಡ ಕಲ್ವಮಂಜಲಿ ರಾಮುಶಿವಣ್ಣ, ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಇಂದಿರಾರೆಡ್ಡಿ, ಸಾಮಾಜಿಕ ಹೋರಾಟಗಾರ ಚಂಜಿಮಲೆ ಡಿ.ಮುನೇಶ್, ನಿವೃತ್ತ ಅರಣ್ಯಾಧಿಕಾರಿ ಪಾಪೇಗೌಡ, ಹೋರಾಟಗಾರರಾದ ಅಶ್ಚತ್ಥನಾರಾಯಣ, ಪುಟ್ಟರೆಡ್ಡಿ, ಮಂಜುನಾಥ, ರಾಘವರೆಡ್ಡಿ, ಎಪಿಎಂಸಿ ಪುಟ್ಟರಾಜು, ಯುವಶಕ್ತಿ ಸುಬ್ಬು ಇದ್ದರು.