ಭಾರಿ ಮಳೆಗೆ ನದಿ ಪ್ರವಾಹ, ಮೊಗೇರ್‌ ಕುದ್ರು ಗ್ರಾಮ ಜಲಾವೃತ

| Published : Jul 19 2024, 12:52 AM IST

ಭಾರಿ ಮಳೆಗೆ ನದಿ ಪ್ರವಾಹ, ಮೊಗೇರ್‌ ಕುದ್ರು ಗ್ರಾಮ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯ ಅಂಗಳದ ವರೆಗೂ ನೀರು, ದನಗಳ ಕೊಟ್ಟಿಗೆ ಸುತ್ತ ನೀರು, ಪ್ರತಿ ಬಾರಿ ಮನವಿ ನೀಡಿದರೂ ಪರಿಹಾರ ಕಾಣದ ಸಮಸ್ಯೆ ಎನ್ನುತ್ತಿರುವ ಸ್ಥಳೀಯರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ತಾಲೂಕಿನ ಮೊಗೇರ್‌ ಕುದ್ರು ಗ್ರಾಮ ಭಾರಿ ಮಳೆಗೆ ನದಿ ನೀರಿನಿಂದ ಸಂಪೂರ್ಣ ಜಲಾವೃತವಾಗಿದ್ದು, ಇಲ್ಲಿನ ಕುಟುಂಬಗಳಿಗೆ ಜಲದಿಗ್ಭಂಧನ ಉಂಟಾಗಿದೆ.

ಅದ್ಯಪಾಡಿಯಲ್ಲಿ ಅಣೆಕಟ್ಟೆ ನೀರು ಭರ್ತಿಯಾಗಿ ಕೆಳಭಾಗದ ಪ್ರದೇಶಗಳಿಗೆ ಜಲಪ್ರವಾಹ ಹರಿದಿದೆ. ಇದರಿಂದಾಗಿ ಮೊಗೇರ್‌ ಕುದ್ರು ಗ್ರಾಮ ದ್ವೀಪ ಸದೃಶವಾಗಿದ್ದು, ನದಿ ನೀರು ನುಗ್ಗಿ ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ಇಲ್ಲಿ ಸುಮಾರು 35 ಕುಟುಂಬಗಳಿದ್ದು, ಇವರಿಗೆ ದೋಣಿ ಬಿಟ್ಟರೆ ಈ ಗ್ರಾಮಕ್ಕೆ ಬೇರೆ ಸಂಪರ್ಕ ವ್ಯವಸ್ಥೆ ಇಲ್ಲ. ಈಗ ಪ್ರವಾಹ ಬಂದ ಕಾರಣ ಈ ಮನೆಗಳಿಗೆ ಹೊರಗಿನ ಸಂಪರ್ಕ ಕಡಿತಗೊಂಡಿದೆ.

ಕೃಷಿ ಭೂಮಿ ನದಿಯಂತಾಗಿದ್ದು, ಅಡಕೆ, ತೆಂಗು, ಭತ್ತ ಮತ್ತು ಬಾಳೆ ಸೇರಿದಂತೆ ಕೃಷಿ ಪೂರ್ತಿ ನೀರು ಪಾಲಾಗಿದೆ. ಅಪಾಯದ ಪರಿಸ್ಥಿತಿಯಲ್ಲೇ ಗ್ರಾಮಸ್ಥರು ದೋಣಿಯಲ್ಲಿ ಸಂಚರಿಸುವಂತಾಗಿದೆ. ನದಿ ನೀರು ಮನೆಗೆ ನುಗ್ಗಿದ ಕಾರಣ 30ಕ್ಕೂ ಅಧಿಕ ಮನೆಗಳು ಮುಳುಗಡೆ ಭೀತಿಯಲ್ಲಿವೆ. ಎಲ್ಲೆಂದರಲ್ಲಿ ನೀರು ಕಾಣಿಸುತ್ತಿದ್ದು, ಹಟ್ಟಿಯಲ್ಲಿರುವ ಜಾನುವಾರುಗಳಿಗೂ ಅಪಾಯ ತಟ್ಟಿದೆ. ಸುತ್ತಲೂ ನೀರು ಆವರಿಸಿರುವುದರಿಂದ ಜಾನುವಾರುಗಳಿಗೂ ಹೊರ ಬರಲು ಸಾಧ್ಯವಾಗುತ್ತಿಲ್ಲ.

ಫಲ್ಗುಣಿ ನದಿಗೆ ನಿರ್ಮಿಸಿರುವ ಈ ಡ್ಯಾಂ ಅವೈಜ್ಞಾನಿಕವಾಗಿದೆ. ಡ್ಯಾಂ ನಿರ್ಮಾಣ ವೇಳೆ ಮುಳುಗಡೆಯಾಗುವ ಪ್ರದೇಶಗಳ ಸರ್ವೆ ನಡೆಸಿಲ್ಲ. ಮಳೆಗಾಲದಲ್ಲಿ ಪದೇ ಪದೇ ಪ್ರವಾಹದ ತೊಂದರೆ ನಿವಾರಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಮನೆಯ ಅಂಗಳದ ವರೆಗೂ ನೀರು, ದನಗಳ ಕೊಟ್ಟಿಗೆ ಸುತ್ತ ನೀರು, ಪ್ರತಿ ಬಾರಿ ಮನವಿ ನೀಡಿದರೂ ಪರಿಹಾರ ಕಾಣದ ಸಮಸ್ಯೆ ಎನ್ನುತ್ತಿರುವ ಸ್ಥಳೀಯರು.