ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಈ ಬಾರಿ ಬರಪೊಳೆ ನದಿಯ ಹರಿವಿನಲ್ಲಿ ಸಾಹಸಮಯ ರಾಫ್ಟಿಂಗ್‌ ಮೂಲಕ ವಿಶಿಷ್ಟ ಅನುಭವ ಪಡೆದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಸಮೀಪದ ಕೆ.ಕೆ.ಆರ್. ಬರಪೊಳೆಯಲ್ಲಿ ಆಯೋಜಿಸಿದ್ದ ರಿವರ್ ರಾಫ್ಟಿಂಗ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳ ಪತ್ರಕರ್ತರು ಉತ್ಸಾಹದಿಂದ ಭಾಗವಹಿಸಿದರು.

ಸಿದ್ದಾಪುರ: ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಈ ಬಾರಿ ಬರಪೊಳೆ ನದಿಯ ಹರಿವಿನಲ್ಲಿ ಸಾಹಸಮಯ ರಾಫ್ಟಿಂಗ್‌ ಮೂಲಕ ವಿಶಿಷ್ಟ ಅನುಭವ ಪಡೆದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಸಮೀಪದ ಕೆ.ಕೆ.ಆರ್. ಬರಪೊಳೆಯಲ್ಲಿ ಆಯೋಜಿಸಿದ್ದ ರಿವರ್ ರಾಫ್ಟಿಂಗ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳ ಪತ್ರಕರ್ತರು ಉತ್ಸಾಹದಿಂದ ಭಾಗವಹಿಸಿದರು.ಪತ್ರಕರ್ತರು ಜೀವರಕ್ಷಕ ಜಾಕೆಟ್ ಧರಿಸಿ ಸುಮಾರು ನಾಲ್ಕು ಕಿ.ಮೀ. ದೂರ ರಾಫ್ಟಿಂಗ್‌ ನಡೆಸಿದರು. ಕೂರ್ಗ್ ವೈಟ್ ವಾಟರ್ ರಾಫ್ಟಿಂಗ್‌ ತಂಡದ ಪರಿಣಿತರು ಸುರಕ್ಷಿತವಾಗಿ ರಾಫ್ಟಿಂಗ್‌ ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ತೀತಿರ ಧರ್ಮಜ ಉತ್ತಪ್ಪ, ಪತ್ರಕರ್ತರ ವೃತ್ತಿ ಒತ್ತಡ ನಿವಾರಣೆಗೆ ಇಂತಹ ಮನರಂಜನಾ ಕಾರ್ಯಕ್ರಮಗಳು ಪೂರಕವಾಗಿದ್ದು, ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೂರ್ಗ್ ರಾಫ್ಟಿಂಗ್‌ ಮಾಲೀಕ ಹಾಗೂ ಪರಿಸರ ಪ್ರೇಮಿ ಕುಂಞಂಗಡ ಬೋಸ್ ಮಾದಪ್ಪ ಮಾತನಾಡಿ, ಕಳೆದ ಒಂದೂವರೆ ದಶಕದಿಂದ ಸುರಕ್ಷಿತವಾಗಿ ವೈಟ್ ವಾಟರ್ ರಾಫ್ಟಿಂಗ್‌ ನಡೆಸಲಾಗುತ್ತಿದ್ದು, ಮಳೆ ಪ್ರಮಾಣ ಕಡಿಮೆಯಾದರೂ ರಾಫ್ಟಿಂಗ್‌ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಹಲವು ವರ್ಷಗಳ ಬಳಿಕ ಸಂಘದ ವತಿಯಿಂದ ರಾಫ್ಟಿಂಗ್‌ ಆಯೋಜಿಸಲಾಗಿದ್ದು, ಪತ್ರಕರ್ತರ ಮನೋಲ್ಲಾಸಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.

ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ಕೊಡಗಿನ ವಿವಿಧೆಡೆಯ ಪತ್ರಕರ್ತರು ಇದ್ದರು.