ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ ಗ್ರಾಮದ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಾಲಕ-ಪೋಷಕರನ್ನು ಕಳೆದುಕೊಂಡು, ಶೋಕಸಾಗರದಲ್ಲಿ ಮುಳುಗಿದ್ದ ಕುಟುಂಬಗಳ ನಿವಾಸಗಳಿಗೆ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಅಮೀನರೆಡ್ಡಿ ಯಾಳಗಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ ಗ್ರಾಮದ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಾಲಕ-ಪೋಷಕರನ್ನು ಕಳೆದುಕೊಂಡು, ಶೋಕಸಾಗರದಲ್ಲಿ ಮುಳುಗಿದ್ದ ಕುಟುಂಬಗಳ ನಿವಾಸಗಳಿಗೆ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಅಮೀನರೆಡ್ಡಿ ಯಾಳಗಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ನೊಂದ ಸಂತ್ರಸ್ತರಿಗೆ ಸಂಪೂರ್ಣ ನೈತಿಕ ಬೆಂಬಲ ಹಾಗೂ ಧೈರ್ಯ ತುಂಬಿದ ಅವರು, ಮೃತರ ಪ್ರತಿಯೊಂದು ಕುಟುಂಬಕ್ಕೂ ತಮ್ಮ ವೈಯಕ್ತಿಕ ನಿಧಿಯಿಂದ ತಲಾ ₹50,000 ಆರ್ಥಿಕ ಸಹಾಯಧನ ಹಸ್ತಾಂತರಿಸಿದರು.ಅಪಘಾತ ಸಂಭವಿಸಿದ ಘಟನೆ ಅತ್ಯಂತ ನೋವಿನ ಸಂಗತಿಯಾಗಿದ್ದು, ಕತ್ತಲೆ ಆವರಿಸಿದೆ. ಈ ಕಷ್ಟದ ಸಮಯದಲ್ಲಿ ಪಕ್ಷ ಹಾಗೂ ಮುಖಂಡರು ಸಂಪೂರ್ಣವಾಗಿ ಸಂತ್ರಸ್ತರ ಜೊತೆಗಿರುತ್ತಾರೆ ಎಂದು ಹೇಳಿದರು. ಪ್ರತ್ಯೇಕವಾಗಿ ಪ್ರತಿಯೊಂದು ಕುಟುಂಬದ ಸದಸ್ಯರನ್ನು ಭೇಟಿಯಾದ ಅವರು, ಅವರ ಪ್ರಸ್ತುತ ಪರಿಸ್ಥಿತಿ ಹಾಗೂ ಅಗತ್ಯತೆಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿದರು.
ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ಸ್ಥಿತಿಗತಿಯನ್ನು ವಿಚಾರಿಸಿದ ಅವರು, ಅವರ ತಕ್ಷಣದ ವೈದ್ಯಕೀಯ ವೆಚ್ಚ, ಔಷಧೋಪಚಾರ ಹಾಗೂ ತುರ್ತು ನಿರ್ವಹಣೆಗಾಗಿ ತಮ್ಮ ವೈಯಕ್ತಿಕ ನಿಧಿಯಿಂದ ಪ್ರತಿಯೊಬ್ಬ ಗಾಯಾಳಿಗೆ ತಲಾ ₹10,000 ಆರ್ಥಿಕ ನೆರವು ನೀಡಿದರು.ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆಕಸ್ಮಿಕವಾಗಿ ಸಂಭವಿಸಿದ ಈ ದುರಂತದಲ್ಲಿ ಅಗಲಿದ ಅಮೂಲ್ಯ ಜೀವಗಳನ್ನು ಮರಳಿ ತರಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಇಂತಹ ಕಠಿಣ ಸನ್ನಿವೇಶದಲ್ಲಿ ನೊಂದವರ ನೋವಿಗೆ ಮಿಡಿದು, ಅವರಿಗೆ ನೈತಿಕ ಹಾಗೂ ಆರ್ಥಿಕ ಆಸರೆಯಾಗಿ ನಿಲ್ಲುವುದು ನಮ್ಮ ಮೊದಲ ಮಾನವೀಯ ಕರ್ತವ್ಯವಾಗಿದೆ ಎಂದರು. ಭವಿಷ್ಯದಲ್ಲೂ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ ನೀಡಲು ತಾವು ಬದ್ಧವಾಗಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಕಾರ್ಯಕಾರಿ ಸದಸ್ಯರಾದ ರಾಜಶೇಖರ ಗೂಗಲ್, ಡಾ. ಚಂದ್ರಶೇಖರ ಸುಬೇದಾರ್, ಜಿಲ್ಲಾ ಉಪಾಧ್ಯಕ್ಷರಾದ ಅಡಿವಪ್ಪ ಜಕಾ, ಜಿಲ್ಲಾ ಖಜಾಂಚಿಗಳಾದ ತಿರುಪತಿರೆಡ್ಡಿ, ಬಸವನಗೌಡ ಹರಣಗೇರಾ, ತಿರುಪತಿ ಶೇರಿ, ಬಸವರಾಜ ಅರಣಿ, ಶಹಾಪುರ ಗ್ರಾಮೀಣ ಮಂಡಲ ಅಧ್ಯಕ್ಷರಾದ ತಿರುಪತಿ ಹಟಿಕಟಿಗಿ, ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಯಾಳಗಿ, ಮಂಡಲ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಹುಳಕಲ್, ಮುಖಂಡರಾದ ದೇವು ಸುಪುರ್ಕರ್, ಮಹೇಶ್ ಆಲದಾಳ, ಗ್ರಾಮೀಣ ಮಂಡಲದ ಯುವ ಮೋಚಾ ಅಧ್ಯಕ್ಷರಾದ ಮಹೇಶ್ ರಸ್ತಪುರ ಸೇರಿದಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.