ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಅಂಚೆ ಕಚೇರಿಯ ಎದುರಿನ ರಸ್ತೆಯಿಂದ ಶಿಗ್ಲಿ ನಾಕಾವರೆಗೆ ಇರುವ ಪ್ರಮುಖ ರಸ್ತೆಗೆ ಡಿವೈಡರ್ ಅಳವಡಿಸುವಂತೆ ಕರವೇ ಸ್ವಾಭಿಮಾನಿ ಸೇನೆ ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದರೂ ಸಹ ಯಾವುದೇ ರೀತಿ ಕ್ರಮವಾಗದಿರುವುದನ್ನು ಖಂಡಿಸಿ ಸದಸ್ಯರು ಮಂಗಳವಾರ ಹೊಸ ಬಸ್ ನಿಲ್ದಾಣದ ಎದುರು ರಸ್ತೆ ತಡೆ ಮಾಡಿ ಪ್ರತಿಭಟಿಸಿ ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ ತಿಮ್ಮಾಪುರಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಶರಣು ಗೋಡಿ, ತಾಲೂಕು ಅಧ್ಯಕ್ಷ ನಾಗೇಶ ಅಮರಾಪೂರ ಮಾತನಾಡಿ, ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಪಾಳಾ ಬಾದಾಮಿ ರಸ್ತೆಗೆ ಕಳೆದ ೨-೩ ವರ್ಷಗಳ ಹಿಂದೆ ಗದಗ ಅಗಸಿಯಿಂದ ಶಿಗ್ಲಿ ಕ್ರಾಸ್ ವರೆಗೆ ಸಿಸಿ ರಸ್ತೆ ಮಾಡಿದಾಗ ಪೋಸ್ಟ್ ಆಫೀಸನಿಂದ ಶಿಗ್ಲಿ ಕ್ರಾಸ್‌ವರೆಗೆ ರಸ್ತೆ ವಿಭಜಕ ಅಳವಡಿಸಿಲ್ಲ. ರಸ್ತೆ ವಿಭಜಕ ಅಳವಡಿಸುವಂತೆ ಕಳೆದ ಮೇ ತಿಂಗಳಲ್ಲಿ ಇಲಾಖೆಗೆ ಮನವಿ ಮಾಡಿ ೨೦ ದಿನಗಳ ಗಡುವು ನೀಡಲಾಗಿತ್ತು, ಆದರೆ ಇದುವರೆಗೂ ಇದರ ಬಗ್ಗೆ ಯಾವುದೇ ಕ್ರಮಗಳಿಲ್ಲ ಎಂದು ಆರೋಪಿಸಿದರು. ಇದು ಜನನಿಬಿಡ ರಸ್ತೆಯಾಗಿದ್ದರಿಂದ ಇಲ್ಲಿ ಅನೇಕ ಅಪಘಾತ ಸಂಭವಿಸುತ್ತಿವೆ. ಅಲ್ಲದೆ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವುದರಿಂದ ಹೆಚ್ಚಿನ ಅನಾಹುತ ಸಂಭವಿಸುತ್ತವೆ. ಇದು ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲವೆ ಎಂದು ಪ್ರಶ್ನಿಸಿದರು. ಅಲ್ಲದೆ ರಸ್ತೆ ಮಧ್ಯದಲ್ಲಿ ಅಳವಡಿಸಿರುವ ಬೀದಿ ದೀಪಗಳು ಹಾಳಾಗಿ ಹೋಗಿದ್ದರು. ಪುರಸಭೆಯ ಅಧಿಕಾರಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಕಾಣುತ್ತಿಲ್ಲವೆಂಬುದು ಬೇಸರದ ಸಂಗತಿಯಾಗಿದೆ. ಇದರಿಂದ ಆಗುವ ಅನಾಹುತಗಳಿಗೆ ಹೊಣೆ ಯಾರು? ತಕ್ಷಣ ಈ ಕುರಿತು ಕಾಮಗಾರಿ ಪ್ರಾರಂಭಿಸಿ ರಸ್ತೆ ಡಿವೈಡರ್ ಅಳವಡಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು ಇಲ್ಲದಿದ್ದಲ್ಲಿ ಕರವೇ ವತಿಯಿಂದ ಮುಂದಿನ ದಿನಗಳಲ್ಲಿ ಇದೇ ರಸ್ತೆಯ ಮೇಲೆ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇವೆ ಎಂದು ಹೇಳಿದರು.ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ ತಿಮ್ಮಾಪೂರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಮನವೊಲಿಸಿ ಮನವಿ ಸ್ವೀಕರಿಸಿ ಒಂದು ತಿಂಗಳಲ್ಲಿ ರಸ್ತೆ ಡಿವೈಡರ್ ಮಾಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.ಈ ವೇಳೆ ತಾಲೂಕು ಅಧ್ಯಕ್ಷ ನಾಗೇಶ ಅಮರಾಪೂರ, ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ಯಲ್ಲಪ್ಪ ಹಂಜಗಿ, ಕೈಸರ್ ಅಹ್ಮದ್‌ಅಲಿ, ದುದ್ದು ಅಕ್ಕಿ, ಆಶ್‌ಪಾಕ್ ಬಾಗೋಡಿ, ಜ್ಯೋತಿ ಸೋಮಶೇಖರ, ಮಾಲತೇಶ ಉಮಚಗಿ, ಝರೀನಾ ಮುಲ್ಲಾ, ಶಕುಂತಲಾ ನೂಲ್ವಿ, ಮುತ್ತುರಾಜ್ ಗಡೆಪ್ಪನವರ, ಬಾಬು ಮನಿಯಾರ, ಇಲಿಯಾಸ್ ಮನಿಯಾರ್, ಇರ್ಪಾನ್ ಹರಪನಹಳ್ಳಿ, ಶರಣಪ್ಪ ಬಸಾಪೂರ, ಪೀರಸಾಬ ರಿತ್ತಿ, ನದೀಮ್ ಕುಂದಗೋಳ, ಮಂಜುನಾಥ ಲಮಾಣಿ, ಸಚಿನ್ ಲಮಾಣಿ, ಶರಣು ಬೆಳವಿಗಿ, ಪ್ರವೀಣ, ಅಭಿಷೇಕ ಸಾತಪೂತೆ, ಕಾರ್ತಿಕ ಬಳ್ಳಾರಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.