ಯತ್ನಾಳ ಉಚ್ಚಾಟನೆ ಖಂಡಿಸಿ ರಸ್ತೆ ತಡೆ, ಆಕ್ರೋಶ

| Published : Apr 05 2025, 12:45 AM IST

ಸಾರಾಂಶ

ಕೇಂದ್ರ ಬಿಜೆಪಿ ನಾಯಕರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಕೂಡಲೇ ಮರುಪರಿಶೀಲನೆ ಮಾಡಬೇಕು. ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಲಿಂಗಾಯತ ಪಂಚಮಸಾಲಿ ಸಮಾಜ ನಾಯಕರು, ಹಿಂದೂ ಫೈರ್ ಬ್ರ್ಯಾಂಡ್, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ್ದನ್ನು ಖಂಡಿಸಿ ಮತ್ತು ಉಚ್ಚಾಟನೆ ಮರು ಪರಿಶೀಲಿಸುವಂತೆ ಒತ್ತಾಯಿಸಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜ, ಹಿಂದೂ, ಕನ್ನಡಪರ ಸಂಘಟನೆಗಳು, ಲಿಂಗಾಯತ ಬಾಂಧವರು, ಯತ್ನಾಳ ಅಭಿಮಾನಿಗಳ ನೇತೃತ್ವದಲ್ಲಿ ರಸ್ತೆ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಬಿಜೆಪಿ ನಾಯಕರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಕೂಡಲೇ ಮರುಪರಿಶೀಲನೆ ಮಾಡಬೇಕು. ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಯತ್ನಾಳ ಒಬ್ಬ ಬಿಚ್ಚು ಮನಸಿನ ನಾಯಕ. ಅನ್ಯಾಯಗಳನ್ನು ನೋಡಲಾಗದೆ ವಾಸ್ತವ ವಿಚಾರಗಳನ್ನು ನಾಡಿನ ಜನತೆಗೆ ಹೇಳುತ್ತಾ ಬಂದಿದ್ದಾರೆ. ಹೈಕಮಾಂಡ್ ಬಗ್ಗೆ ಅವರಿಗೆ ದೊಡ್ಡ ಗೌರವವಿದೆ. ಸಾಮರ್ಥ್ಯ ಹೊಂದಿದ ವ್ಯಕ್ತಿಗಳನ್ನು ಸತತವಾಗಿ ತುಳಿಯುತ್ತಾ ಹೋದರೆ ಪಕ್ಷ ಬೆಳೆಯುವುದಾದರೂ ಹೇಗೆಂದು ತಿಳಿಯುತ್ತಿಲ್ಲ. ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಯತ್ನಾಳ ಧೈರ್ಯದಿಂದ ಹೋರಾಟ ನಡೆಸಿದ್ದಾರೆ. ಅದರಲ್ಲಿ ತಪ್ಪು ಇಲ್ಲ ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು. ಉಚ್ಚಾಟನೆಗೆ ಕಾರಣರಾದವರು ಇನ್ನಷ್ಟು ಪರಿವರ್ತನೆ ಆಗಬೇಕು. ಹಿರಿಯರಿಗೆ ಪಕ್ಷದಲ್ಲಿ ಅಧಿಕಾರ-ಅಂತಸ್ತು ಸಿಗುವಂತೆ ಪ್ರಯತ್ನಿಸಬೇಕು. ತಾವೂ ಬೆಳೆದು ಪಕ್ಷದ ಎಲ್ಲರನ್ನು ಬೆಳೆಸುವ ಕಾರ್ಯ ಮಾಡಬೇಕು. ಯತ್ನಾಳರು ಹೈಕಮಾಂಡ್ ಆದೇಶ ಮೀರಿ ನಡೆಯಬಾರದು. ಪಕ್ಷಕ್ಕೆ ಯತ್ನಾಳರನ್ನು ಗೌರವಯುತವಾಗಿ ಮತ್ತೆ ಸೇರಿಸಿಕೊಂಡು ಅವರ ಘನತೆಗೆ ತಕ್ಕದಾದ ಜವಾಬ್ದಾರಿ ನೀಡಬೇಕೆಂದು ಒತ್ತಾಯಿಸಿದರು

ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಮಾತನಾಡಿ, ಯತ್ನಾಳ ಲಿಂಗಾಯತ ಪಂಚಮಸಾಲಿ ಸಮಾಜದ, ಹಿಂದೂ ಧರ್ಮದ ಆಸ್ತಿಯಾಗಿದ್ದಾರೆ. ಭವಿಷ್ಯದಲ್ಲಿ ರಾಜ್ಯದ ಸಿಎಂ ಆಗಲಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದನ್ನು ಮರುಪರಿಶೀಲಿಸಿ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸಿ.ಕೆ.ಮೆಕ್ಕೇದ, ಬಿ.ಬಿ.ಗಣಾಚಾರಿ, ಮಹೇಶ ಹರಕುಣಿ, ಮುರುಗೇಶ ಗುಂಡ್ಲೂರ, ಗಂಗಪ್ಪ ಗುಗ್ಗರಿ, ರಾಜು ಸೊಗಲ, ಗಂಗಾಧರ ಹೋಟಿ, ಮಲ್ಲಿಕಾರ್ಜುನ ಹುಂಬಿ, ಪ್ರಕಾಶ ಹುಂಬಿ, ಶಿವಾನಂದ ಕೋಲಕಾರ, ಗಿರೀಶ ಹರಕುಣಿ ಮಾತನಾಡಿ, ಪ್ರಾಮಾಣಿಕ ಹೋರಾಟಗಾರ ಬಸನಗೌಡ ಪಾಟೀಲ್ ಯತ್ನಾಳರು ಬಿಜೆಪಿಯಲ್ಲಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಹೆದರಿರುವ ಪಕ್ಷದೊಳಗಿನ ಅಪ್ಪ-ಮಕ್ಕಳ ಕುಮ್ಮಕ್ಕಿನಿಂದ ಯತ್ನಾಳರಂತಹ ಹಿಂದುತ್ವದ ಹೋರಾಟಗಾರರಿಗೆ ಅನ್ಯಾಯವಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯವರು ಈ ಕೂಡಲೇ ಯತ್ನಾಳರ ಉಚ್ಚಾಟನೆ ರದ್ದು ಪಡಿಸಿ ಮತ್ತೆ ಅವರನ್ನು ಗೌರವಯುತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು. ಏ.13ರೊಳಗಾಗಿ ಬಿಜೆಪಿ ತನ್ನ ನಿಲುವು ತಿಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂಬುದನ್ನ ನಾಯಕರು ತಿಳಿದುಕೊಳ್ಳಬೇಕು. ಹೀಗೆಯಾದರೆ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಹಿನ್ನೆಡೆಯಾಗಲಿದೆ ಎಂದು ಎಚ್ಚರಿಸಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಧಿಕ್ಕಾರ ಕೂಗಿ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಶಿವಾನಂದ ಬಡ್ಡಿಮನಿ, ಮಹಾಂತೇಶ ಗುಂಡ್ಲೂರ, ಶಿವಾನಂದ ಬೆಳಗಾವಿ, ಈಶ್ವರ ಕೊಪ್ಪದ, ಮಹಾಂತೇಶಗೌಡ ಪಾಟೀಲ, ಅಶೋಕ ಗುಂಡ್ಲೂರ, ಧೂಳಪ್ಪ ಇಟಗಿ, ರಿತೇಶ ಪಾಟೀಲ, ಶಶಿಕುಮಾರ ಪಾಟೀಲ, ರಾಘು ಶೀಗಿಹಳ್ಳಿ, ಪರಪ್ಪ ಬಾಳಿಕಾಯಿ, ಅಶ್ವಿನ ಇಂಗಳಗಿ, ಸಿದ್ಧಾರೂಢ ಹೊಂಡಪ್ಪನವರ, ಶಿವು ಶಿರಸಂಗಿ, ರವಿ ಸಿದ್ಧನಗೌಡರ, ಮಂಜು ಅಮ್ಮಿನಭಾವಿ, ಅಭಿಷೇಕ ಕಲಾಲ, ಸುನೀಲ ಈಟಿ ಸೇರಿದಂತೆ, ಅನೇಕರು ಇದ್ದರು.