ಸಾರಾಂಶ
ಹಾನಗಲ್ಲ: ಮಳೆ ಬಂದರೆ ರಾಡಿ ಗುಂಡಿಯಲ್ಲಿ ಸರ್ಕಸ್ ನಡಿಗೆ, ಬೇಸಿಗೆ ಬಂದರೆ ಧೂಳುಮಯ, ಬಸ್ ನಿಲ್ದಾಣ ತಿಪ್ಪೆಯಾಗಿದೆ, ಹತ್ತಾರು ವರ್ಷಗಳಿಂದ ರಸ್ತೆ ದುರಸ್ತಿ ಇಲ್ಲ, ಅಧಿಕಾರಿಗಳಿಗೆ ಕೊಟ್ಟ ಮನವಿಗಳು ಫಲ ನೀಡಿಲ್ಲ, ನೋಡ ಬನ್ನಿ ಹಾನಗಲ್ಲ ತಾಲೂಕಿನ ಹೊಸೂರು ಗ್ರಾಮದ ಪ್ರಮುಖ ರಸ್ತೆ ಎಂದು ಸಾರ್ವಜನಿಕರು, ಕರ್ನಾಟಕ ರಕ್ಷಣಾ ವೇದಿಕೆ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ಪ್ರತಿಭಟನೆ ನಡೆಸಿದ್ದಾರೆ.ಹಾನಗಲ್ಲ ತಾಲೂಕಿನಲ್ಲಿರುವ ದೊಡ್ಡ ಗ್ರಾಮ ಹೊಸೂರು. ಇದು ಚಿಕ್ಕಾಂಸಿ ಹೊಸೂರು ಎಂದೇ ಪರಿಚಯವಾಗಿರುವ ಚಿಕ್ಕಾಂಸಿ ಹಾಗೂ ಹೊಸೂರುಗಳು ಒಂದೇ ಗ್ರಾಮ ಎನ್ನುವಂತಿದೆ. ಈ ಹೊಸೂರಿನ ಅತ್ಯಂತ ಜನನಿಬಿಡ ರಸ್ತೆ, ನಾಲ್ಕು ರಸ್ತೆಗಳು ಕೂಡಿರುವ, ಅತ್ಯಂತ ಹೆಚ್ಚು ವಾಹನ ಓಡಾಟ, ಜನ ಸಂದಣಿ ಇರುವ ರಸ್ತೆ ಈ ಮಳೆಗಾಲದಲ್ಲಂತೂ ಓಡಾಟಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹಾಳಾಗಿ ನೀರಿನ ಗುಂಡಿಗಳನ್ನು ದಾಟಿ ಜನ ಸರ್ಕಸ್ ಮಾಡುತ್ತ ಓಡಾಡುವಂತಾಗಿದೆ. ಆದರೆ ಯಾವುದೇ ಇಲಾಖೆಯ ಅಧಿಕಾರಿಗಳು ಇದನ್ನು ಗಮನಿಸುತ್ತಿಲ್ಲ.ಈ ರಸ್ತೆ ಅತ್ಯಂತ ಜನನಿಬಿಡವಾಗಿದೆ. ಇಲ್ಲಿಯೇ ಸಂತೆ ಮಾರುಕಟ್ಟೆ ಸ್ಥಳ ಇದೆ. ಶಾಲೆ ಕಾಲೇಜುಗಳು ಇಲ್ಲಿವೆ. ಬಸ್ ನಿಲ್ದಾಣ, ಗ್ರಾಮ ಪಂಚಾಯಿತಿ, ನಾಡ ಕಚೇರಿ, ಪಶು ಆಸ್ಪತ್ರೆ, ವಿದ್ಯಾರ್ಥಿಗಳ ವಸತಿ ನಿಲಯ ಎಲ್ಲವೂ ಇಲ್ಲಿಯೇ ಇವೆ. ಇಲ್ಲಿಯೇ ಸಂತೆ ನಡೆಯುತ್ತದೆ. ಸಾವಿರಾರು ಜನ ನಿತ್ಯ ಸಂಚರಿಸುವ ಈ ರಸ್ತೆ ಬಗೆಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಲಕ್ಷ್ಯ ನೀಡುತ್ತಿಲ್ಲ. ಈಗ ಬೀಳುತ್ತಿರುವ ಮಳೆಗೆ ರಸ್ತೆಯಲ್ಲಿನ ಗುಂಡಿಗಳು ನೀರಿನಿಂದ ತುಂಬಿ ರಾಡಿಯಲ್ಲಿಯೇ ವಾಹನ ಜನ ಜಾನುವಾರು ಓಡಾಡುವಂತಾಗಿದೆ.ಬಸ್‌ನಿಲ್ದಾಣವೋ ತಿಪ್ಪೆಯೋ :ಇಲ್ಲಿನ ಬಸ್‌ನಿಲ್ದಾಣ ದೇವರಿಗೇ ಪ್ರೀತಿ. ಇಲ್ಲಿಗೆ ಬರುವ ಕೆಲವೇ ಕೆಲವು ಬಸ್‌ಗಳು ಕೂಡ ಬಸ್ ನಿಲ್ದಾಣದ ಒಳಗೆ ಹೋಗುವುದಿಲ್ಲ. ಆವರಣ ತಿಪ್ಪೆಯಾಗಿದೆ. ಇಲ್ಲಿ ಹಾಕಿದ ಕಸವನ್ನು ತೆಗೆಯುವುದಿಲ್ಲ. ಬಸ್ ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ವಿಶ್ರಾಂತಿ ಕೊಠಡಿ ನಾಯಿ ಹಂದಿಗಳ ವಾಸ ಸ್ಥಳವಾಗಿದೆ. ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ ಗೋಡಾವನಗಳನ್ನು ಬಾಡಿಗೆ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇದರ ಬಾಡಿಗೆ ವಸೂಲಿಗೆ ಬಿಟ್ಟರೆ ಇತ್ತ ಹಾಯುವುದೇ ಇಲ್ಲ. ಬೇರೆ ಊರಿನಿಂದ ಬಂದವರಿಗೆ ಇಲ್ಲಿರುವ ಶೌಚಾಲಯವೂ ಬಳಕೆ ಯೋಗ್ಯವಿಲ್ಲ. ಅಧಿಕಾರಿಗಳು ವರ್ಷದಲ್ಲಿ ಎರಡು ಬಾರಿ ಧ್ವಜಾರೋಹಣಕ್ಕೆ ಬರುತ್ತಾರೆ ಎಂದು ಸಾರ್ವಜನಿಕರು ದೂರುತ್ತಾರೆ.ಗಟಾರದ ಕೊಳಚೆ ಡೆಂಘೀ: ಡೆಂಘೀ ಹರಡುವಿಕೆ ಬಗ್ಗೆ ಕಾಳಜಿವಹಿಸಬೇಕಾದ ಗ್ರಾಮ ಪಂಚಾಯತಿ ಪಿಡಿಓ, ಆರೋಗ್ಯ ಇಲಾಖೆ ಸಿಬ್ಬಂದಿ ಇದನ್ನೆಲ್ಲ ಕಂಡೂ ಕಾಣದಂತಿದ್ದಾರೆ. ಸರಕಾರ ಡೆಂಘೀ ನಿಯಂತ್ರಣಕ್ಕೆ ಕಾಳಜಿ ವಹಿಸಬೇಕಾಗಿದೆಯಾದರೂ ಅದು ಹೊಸೂರು ಗ್ರಾಮಕ್ಕೆ ಸಂಬಂಧವೇ ಇಲ್ಲ ಎನ್ನುವಂತಿದೆ. ಗಟಾರ ಗುಂಡಿಗಳಲ್ಲಿ ಹುಳುಗಳು ಆಡುತ್ತಿವೆ. ಆರೋಗ್ಯವೇ ಭಾಗ್ಯ ಎನ್ನುವುದಾದರೆ ಹೊಸೂರಿನ ಸಾರ್ವಜನಿಕ ವ್ಯವಸ್ಥೆಯನ್ನು ಏಕೆ ಅಧಿಕಾರಿಗಳು ಗಮನಿಸುತ್ತಿಲ್ಲ.ಹಾನಗಲ್ಲ ತಾಲೂಕಿನಲ್ಲಿರುವ ಈ ರಸ್ತೆ ಶಿವಮೊಗ್ಗ ಲೋಕೋಪಯೋಗಿ ಇಲಾಖೆಗೆ ಸೇರಿತ್ತು ಎನ್ನಲಾಗಿದೆ. ಕಳೆದ ಎರಡು ವರ್ಷದ ಈಚೆ ಈ ರಸ್ತೆಯನ್ನು ಹಾವೇರಿ ಜಿಲ್ಲಾ ವ್ಯಾಪ್ತಿಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಹಾನಗಲ್ಲಿನ ಲೋಕೋಪಯೋಗಿ ಇಲಾಖೆ ಇದು ನಮ್ಮದಲ್ಲ ಎನ್ನುತ್ತ, ಶಿವಮೊಗ್ಗ ಜಿಲ್ಲಾ ಲೋಕೋಪಯೋಗಿ ಇಲಾಖೆ ಇದು ನಮ್ಮ ಜಿಲ್ಲೆಯಲ್ಲ ಎಂಬ ಕಾರಣಕ್ಕೆ ಈ ರಸ್ತೆಗೆ ದುರಸ್ತಿಯೋಗ ಇಲ್ಲದಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.ನಿವೃತ್ತ ಪಿಎಸ್‌ಐ ನಿಂಗಪ್ಪ ಹೊಸೂರ, ಬಸವರಾಜ ಗುರಣ್ಣನವರ, ಈರಪ್ಪ ಪುರಾಣಿ, ರವಿ ಮಡಿವಾಳರ, ಪ್ರಶಾಂತ ಶಿಗ್ಗಾಂವಕರ, ಮಂಜು ಹುಲ್ಲಾಳದ, ಸೋಮು ಹರವಿ, ವಸಂತ ಸುಣಗಾರ, ಹರೀಶ ಬಡಿಗೇರ, ಮುತ್ತು ಹಿರೇಬಾಸೂರ, ಪ್ರಭು ಪಾಟೀಲ, ವಿನಾಯಕ ಗುರಣ್ಣನವರ, ಮಾಲಿಂಗಗೌಡ ತಾವರಗೊಪ್ಪ ಹಾಗೂ ಸಾರ್ವಜನಿಕರು, ರಕ್ಷಣಾ ವೇದಿಕೆ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಓಟ್ ಕೇಳಾಕ ಬರತಾರ, ಇಂಥಾ ಸಮಸ್ಯೆ ಪರಿಹರಿಸಲ್ಲ ಎಂದು ಜನ ದೂರುತ್ತಿದ್ದಾರೆ. ತಾಲೂಕು ಆಡಳಿತದ ಈ ನಿರ್ಲಕ್ಷ್ಯ ಅಕ್ಷಮ್ಯ, ಅಧಿಕಾರಿಗಳಿಗೆ ಮನವಿ ಕೊಡುತ್ತೇವೆ. ಅನಿವಾರ್ಯವಾದರೆ ಹೋರಾಟಕ್ಕೆ ಮುಂದಾಗುತ್ತೇವೆ. ಏಕೆ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಜಾಣ ಮೌನ ತಳೆದಿದ್ದಾರೆ ಎಂಬುದು ಮಾತ್ರ ಯಕ್ಷ ಪ್ರಶ್ನೆ. ನಿವೃತ್ತ ಪಿಎಎಸ್‌ಐ ನಿಂಗಪ್ಪ ಹೊಸೂರು ಹೇಳಿದರು.