ಆದರಳ್ಳಿಗೆ ರಸ್ತೆ ಸಂಪರ್ಕ ಕಡಿತ, ವಿದ್ಯಾರ್ಥಿಗಳ ಪರದಾಟ

| Published : Jul 26 2024, 01:31 AM IST

ಸಾರಾಂಶ

ಕಳೆದ 1 ತಿಂಗಳಿಂದ ನಿರಂತರವಾದ ಮಳೆಯು ಸುರಿಯುತ್ತಿದ್ದು, ತಾತ್ಕಾಲಿಕವಾಗಿ ಮಣ್ಣು ಹಾಕಿ ನಿರ್ಮಿಸಿದ್ದ ರಸ್ತೆಯು ಈಗ ಮತ್ತೆ ಹಾಳಾಗಿ ಹೋಗಿದ್ದರಿಂದ ಬಸ್ ಸಂಚಾರ ಸ್ಥಗಿತ

ಅಶೋಕ ಡಿ.ಸೊರಟೂರ ಲಕ್ಷ್ಮೇಶ್ವರ

ಸಮೀಪದ ಪು. ಬಡ್ನಿ ಗ್ರಾಮದಿಂದ ಆದರಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ತಿಂಗಳು ಸುರಿದ ಮಳೆಗೆ ದೊಡ್ಡ ಹಳ್ಳದ ಹತ್ತಿರ ಕಿತ್ತು ಹೋಗಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಂಕದಾಳ ಗ್ರಾಮದ ವಿದ್ಯಾರ್ಥಿಗಳು ಪು. ಬಡ್ನಿ ಶಾಲೆಗೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪು.ಬಡ್ನಿ ಗ್ರಾಮದಿಂದ ಆದರಳ್ಳಿ, ದೇವೀಹಾಳ, ಸಂಕದಾಳ ಮೊದಲಾದ ಗ್ರಾಮಗಳಿಗೆ ಹೋಗಬೇಕಾದಲ್ಲಿ ಪು. ಬಡ್ನಿ ಗ್ರಾಮದ ಹತ್ತಿರ ಹರಿಯುತ್ತಿರುವ ದೊಡ್ಡ ಹಳ್ಳ ದಾಟಿ ಹೋಗಬೇಕು. ಕಳೆದ ತಿಂಗಳು ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಪು. ಬಡ್ನಿ ಗ್ರಾಮದ ಹತ್ತಿರ ದೊಡ್ಡ ಹಳ್ಳಕ್ಕೆ ಕಟ್ಟಿರುವ ಸೇತುವೆಯ ಅಕ್ಕಪಕ್ಕದ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಅಪಾರ ಹಾನಿ ಸಂಭವಿಸುವಂತೆ ಮಾಡಿತ್ತು. ಇದರಿಂದ ಪು.ಬಡ್ನಿ-ಆದರಳ್ಳಿ, ಸಂಕದಾಳ ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು.

ದೊಡ್ಡ ಹಳ್ಳದ ಸೇತುವೆಯ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಸಂಪೂರ್ಣ ರಸ್ತೆಯು ಹಾಳಾಗಿದ್ದರಿಂದ ಅಂದಿನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಆದರಳ್ಳಿ, ಸಂಕದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಮಣ್ಣು ಹಾಕಿಸಿ ರಸ್ತೆ ದುರಸ್ತಿ ಕಾರ್ಯ ಮಾಡಿಸಿದ್ದರು.

ಆದರೆ ಕಳೆದ 1 ತಿಂಗಳಿಂದ ನಿರಂತರವಾದ ಮಳೆಯು ಸುರಿಯುತ್ತಿದ್ದು, ತಾತ್ಕಾಲಿಕವಾಗಿ ಮಣ್ಣು ಹಾಕಿ ನಿರ್ಮಿಸಿದ್ದ ರಸ್ತೆಯು ಈಗ ಮತ್ತೆ ಹಾಳಾಗಿ ಹೋಗಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಸಂಕದಾಳ ಗ್ರಾಮದ ಸುಮಾರು 25-30 ವಿದ್ಯಾರ್ಥಿಗಳು ಪು.ಬಡ್ನಿ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಬರುವ ವಿದ್ಯಾರ್ಥಿಗಳು 3-4 ಕಿಮೀ ನಡೆದುಕೊಂಡು ಶಾಲೆಗೆ ಬರುವಂತಾಗಿದೆ. ಆದ್ದರಿಂದ ಶೀಘ್ರದಲ್ಲಿ ರಸ್ತೆ ಸುಧಾರಣೆ ಮಾಡಿ ಲಕ್ಷ್ಮೇಶ್ವರ ಪಟ್ಟಣದಿಂದ ಪು. ಬಡ್ನಿ ಮಾರ್ಗವಾಗಿ ಆದರಳ್ಳಿ ಗ್ರಾಮಕ್ಕೆ ಹೋಗುವ ಬಸ್ ಸಂಚಾರ ಆರಂಭಿಸಬೇಕು. ಇಲ್ಲದೇ ಹೋದಲ್ಲಿ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮದ ಶಿವಾನಂದ ಹರಿಜನ ಆಗ್ರಹಿಸಿದ್ದಾರೆ.

ಸಂಕದಾಳ ಗ್ರಾಮಕ್ಕೆ ಬಂದು ಹೋಗುತ್ತಿದ್ದ ಬಸ್‌ ದೊಡ್ಡ ಹಳ್ಳಕ್ಕೆ ಹಾಕಿದ ಮಣ್ಣು ಮತ್ತೆ ಕುಸಿದು ಹೋಗಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಪು.ಬಡ್ನಿ ಗ್ರಾಮಕ್ಕೆ ಬರುವ ವಿದ್ಯಾರ್ಥಿಗಳು ಸುರಿಯುವ ಮಳೆಯಲ್ಲಿ ಬೆಳಗ್ಗೆ 7-8 ಗಂಟೆಗೆ ತೋಯಿಸಿಕೊಂಡು ಶಾಲೆಗೆ ಬರುವುದು ಮತ್ತು ಹೋಗುವಂತಾಗಿದೆ. ಇದು ಅವರ ಅಭ್ಯಾಸದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ ಎಂದು ಪಾಲಕರಾದ ಹಾಲಪ್ಪ ಮೇಟಿ ತಿಳಿಸಿದ್ದಾರೆ.

ಕಳೆದ ತಿಂಗಳು ತಾತ್ಕಾಲಿಕವಾಗಿ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿಸಲಾಗಿತ್ತು. ಈಗ ಮತ್ತೆ ಮಳೆ ಬರುತ್ತಿರುವುದರಿಂದ ಹಾಕಿದ ಮಣ್ಣು ಕುಸಿದು ಬಸ್ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕ ಕೂಡಲೆ ದುರಸ್ತಿ ಮಾಡಿಸುವ ಕಾರ್ಯ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಫಕ್ಕೀರೇಶ ತಿಮ್ಮಾಪೂರ ಹೇಳಿದ್ದಾರೆ.