ಸಾರಾಂಶ
ಶರಣು ಸೊಲಗಿ ಮುಂಡರಗಿ
ತಾಲೂಕಿನ ಬಹುತೇಕ ಗ್ರಾಮಗಳ ರಸ್ತೆಗಳು ಈ ಮೊದಲೇ ತಗ್ಗು ದಿನ್ನೆಗಳಿಂದ ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದ ಇನ್ನಷ್ಟು ತಗ್ಗುದಿನ್ನೆ ಬಿದ್ದು ವಾಹನ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ.ತಾಲೂಕಿನ ರಾಮೇನಹಳ್ಳಿ-ನಾಗರಹಳ್ಳಿ ರಸ್ತೆ, ಹೆಸರೂರು ರಸ್ತೆ, ಕಕ್ಕೂರು ತಾಂಡಾ-ಕಕ್ಕೂರು ರಸ್ತೆ, ಮುಂಡರಗಿ ಘಟ್ಟಿರಡ್ಡಿಹಾಳ, ಕಲಕೇರಿ-ಬಿಡನಾಳ-ಗಂಗಾಪುರ ರಸ್ತೆ, ಕಲಕೇರಿ-ಮುಷ್ಠಿಕೊಪ್ಪ ರಸ್ತೆ, ಹಮ್ಮಿಗಿ- ಗುಮ್ಮಗೋಳ ರಸ್ತೆ, ಬಾಗೇವಾಡಿ-ಜಾಲವಾಡಗಿ ರಸ್ತೆ, ಜಾಲವಾಗಿ-ಮುಂಡವಾಡ-ಬಿದರಹಳ್ಳಿ ರಸ್ತೆ, ಗಂಗಾಪುರ-ಶೀರನಹಳ್ಳಿ-ಸಿಂಗಟಾಲೂರು ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಎಲ್ಲೆಂದರಲ್ಲಿ ದೊಡ್ಡ ದೊಡ್ಡ ತಗ್ಗುಗಳು ಬಿದ್ದಿವೆ. ಕೆಲವೆಡೆ ರಸ್ತೆ ಕಿತ್ತು ಹೋಗಿದೆ. ನಿತ್ಯ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಹರಸಾಹಸಪಡುತ್ತಿರುವುದು ಕಂಡು ಬರುತ್ತಿದೆ.
ಅದರಂತೆ ತಾಲೂಕಿನ ಮುಂಡರಗಿ-ಬಸಾಪುರ- ಹಾರೋಗೇರಿ ರಸ್ತೆ, ಡಂಬಳ ಗ್ರಾಮದ ಬಸ್ ನಿಲ್ದಾಣದಿಂದ ಗದಗ-ಮುಂಡರಗಿ ಪ್ರಮುಖ ರಸ್ತೆಯ ವರೆಗೆ, ಬಾಗೇವಾಡಿಯಿಂದ ಮುರುಡಿ-ಗುಡ್ಡದ ಬೂದಿಹಾಳ, ಚಿಕ್ಕವಡ್ಡಟ್ಟಿ ಹಾಗೂ ಕಪ್ಪತ್ತಗುಡ್ಡದ ರಸ್ತೆ ಕಳೆದ ಅನೇಕ ತಿಂಗಳುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದು, ಈ ರಸ್ತೆಯ ಮೂಲಕ ಶಿರಹಟ್ಟಿ ಹಾಗೂ ಕಪ್ಪತ್ತಗುಡ್ಡಕ್ಕೆ ಬಸ್, ಕಾರು, ಮೋಟರ್ ಸೈಕಲ್ ಹಾಗೂ ಇತರ ವಾಹನ ತೆಗೆದುಕೊಂಡು ಹೋಗುವವರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಳೆದ ಒಂದೂವರೆ ವರ್ಷದಲ್ಲಿ ಯಾವುದೇ ರಸ್ತೆ ಕಾಮಗಾರಿಗಳು ನಡೆಯದಿರುವುದರಿಂದ ರಸ್ತೆಗಳು ಹೆಚ್ಚಿನ ಪ್ರಮಾಣದಲ್ಲಿ ಹದಗೆಟ್ಟು ಹೋಗಿವೆ. ಸಂಬಂಧಪಟ್ಟ ಇಲಾಖೆ ಈ ಕೂಡಲೇ ತಾಲೂಕಿನಲ್ಲಿ ಪ್ರಕೃತಿ ವಿಕೋಪಕ್ಕೆ ಹಾಳಾದ ರಸ್ತೆಗಳ ಮಾಹಿತಿ ನೀಡುವ ಮೂಲಕ ರಸ್ತೆ ನಿರ್ಮಾಣ ಹಾಗೂ ಸಣ್ಣಪುಟ್ಟ ಹಾಳಾದಲ್ಲಿ ರಸ್ತೆಗಳ ರಿಪೇರಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ತಾಲೂಕಿನ ಎಲ್ಲ ಗ್ರಾಮಗಳ ಜನತೆ ಸುಗಮವಾಗಿ ಬಸ್ ಹಾಗೂ ವೈಯಕ್ತಿಕ ವಾಹನಗಳ ಮೂಲಕ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ತಾಲೂಕಿನ ಯಾವುದೇ ರಸ್ತೆಗಳಿಗೆ ಹೋದರೂ ಎಲ್ಲ ರಸ್ತೆಗಳಲ್ಲಿಯೂ ದೊಡ್ಡ ದೊಡ್ಡ ತಗ್ಗು ದಿನ್ನೆಗಳು ಬಿದ್ದು ಹಾಳಾಗಿವೆ. ಅದಕ್ಕೆ ಬಾಗೇವಾಡಿಯಿಂದ ಕಪ್ಪತ್ತಗುಡ್ಡ ರಸ್ತೆ ಹಾಗೂ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಮಾರ್ಗವಾಗಿ ನಾಗರಹಳ್ಳಿ, ಕಕ್ಕೂರು- ಕಕ್ಕೂರು ತಾಂಡಾಗಳಿಗೆ ಸಂಚರಿಸುವವರು ನಿತ್ಯ ಹರಸಾಹಸ ಪಡಬೇಕಾಗಿದೆ. ಸಂಬಂಧಪಟ್ಟ ಜನಪ್ರತಿಗಳು ಈ ಕೂಡಲೇ ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಯಲ್ಲಪ್ಪ ತ್ಯಾಪಿ ತಿಳಿಸಿದ್ದಾರೆ.ಸರ್ಕಾರ ಈಗಾಗಲೇ ಮುಂಡರಗಿ ತಾಲೂಕಿನ ಬಹುತೇಕ ಹಾಳಾದ ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡಿದೆ. 6 ಪ್ಯಾಕೇಜ್‌ಗಳ ಮೂಲಕ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಜಂಗಲ್ ಕಟಿಂಗ್ ಪ್ರಾರಂಭಿಸಿದ್ದು, ಮಳೆ ಕಡಿಮೆಯಾದ ತಕ್ಷಣವೇ ಹೊಂಡ ಮುಚ್ಚುವ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಎಇಇ, ಲೋಕೋಪಯೋಗಿ ಇಲಾಖೆ ಬಸವರಾಜ್ ಎಚ್, ಹೇಳಿದರು.