ಕಾತರಕಿ, ಗುಡ್ಲಾನೂರು ಹಾಗೂ ಹಾದರಮಗ್ಗಿ ಗ್ರಾಮಗಳ ಅಭಿವೃದ್ಧಿ ಒಟ್ಟಾಗಿ ಪರಿಗಣಿಸಲಾಗುವುದು
ಕೊಪ್ಪಳ: ನಗರದ ರಾಜ್ಯ ಹೆದ್ದಾರಿ 129ರಿಂದ ಕಾತರಕಿ–ಗುಡ್ಲಾನೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭಾನುವಾರ ಅಡಿಗಲ್ಲು ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ, ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹದಗೆಟ್ಟಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.ಕೊಪ್ಪಳ–ಹಿರೇಸಿಂದೋಗಿ ರಸ್ತೆ, ಹಲಿಗೇರಿ ಕ್ರಾಸ್‌ನಿಂದ ಹಿರೇಸಿಂದೋಗಿ ರಸ್ತೆ ಅಭಿವೃದ್ಧಿ ಪೂರ್ಣಗೊಂಡಿದ್ದು, ಬೇಟಗೇರಿ ರಸ್ತೆ, ಹಿರೇಸಿಂದೋಗಿ–ಕಾಟ್ರಳ್ಳಿ–ಕೋಳೂರು–ಕೊಪ್ಪಳ ರಸ್ತೆ ಹಾಗೂ ಚಿಕ್ಕಸಿಂದೋಗಿ–ಗುನ್ನಳ್ಳಿ–ವರತಟ್ನಾಳ–ಮಂಗಳವಾರ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಟಗೇರಿ–ಹನಕುಂಟಿ ರಸ್ತೆಗೆ ಸಹ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಕಾತರಕಿ, ಗುಡ್ಲಾನೂರು ಹಾಗೂ ಹಾದರಮಗ್ಗಿ ಗ್ರಾಮಗಳ ಅಭಿವೃದ್ಧಿ ಒಟ್ಟಾಗಿ ಪರಿಗಣಿಸಲಾಗುವುದು. ಮೂರು ಗ್ರಾಮಗಳ ಮುಖಂಡರುಗಳು ಸೇರಿ ಊರಿನ ಸಮೀಪ ಭೂಮಿ ಒದಗಿಸಿ ಭೂ ಪರಿವರ್ತನೆ (ಎನ್‌ಎ) ಮಾಡಿಸಿದರೆ ಅರ್ಹ ಎಸ್‌ಸಿ–ಎಸ್‌ಟಿ ಫಲಾನುಭವಿಗಳಿಗೆ ನಿವೇಶನ ವಿತರಿಸುವ ಯೋಜನೆ ಜಾರಿಗೊಳಿಸಲಾಗುವುದು. ಎಸ್‌ಸಿಪಿ–ಟಿಎಸ್‌ಪಿ ಸೇರಿದಂತೆ ಲಭ್ಯವಿರುವ ಅನುದಾನ ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಗೂಳಪ್ಪ ಹಲಿಗೇರಿ ಸೇರಿದಂತೆ ವೆಂಕನಗೌಡ್ರು ಹಿರೇಗೌಡ್ರು, ಹನುಮರೆಡ್ಡಿ ಹಂಗನಕಟ್ಟಿ, ಯಲ್ಲನಗೌಡ್ರು, ವಿರೂಪಾಕ್ಷಗೌಡ್ರು, ಶರಣಪ್ಪ ಸಜ್ಜನ್, ನವೋದಯ ವಿರುಪಣ್ಣ, ಕೃಷ್ಣರೆಡ್ಡಿ ಗಲ್ಬಿ, ಯತ್ನಟ್ಟಿ ನಿಂಗಪ್ಪ, ನಾಗರಾಜ ಹುರಕಡ್ಲಿ, ಮಹಾಂತೇಶ್ ಅಂಗಡಿ, ಯಂಕಪ್ಪ ಕೊರಗಲ್, ಗವಿ ಬೇಳೂರು, ಕಾಸಿಂ ಕೊಳ್ಕರ್,ಅಂದಪ್ಪ ಗುಡ್ಲಾನೂರು, ರಾಜು ಭೈರನ್‌ನವರ್, ಸುಧೀರ್, ಸಂತೋಷ ಬೂದಿಹಾಳ್, ಮಲ್ಲು ಪೂಜಾರ್, ಅಕ್ಬರ್ ಪಲ್ಟಾನ್ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.