ಸಾರಾಂಶ
ಕೋಲಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ । ಜೆಡಿಎಸ್ ಮುಖಂಡ ಶ್ರೀನಾಥ್ ವ್ಯಂಗ್ಯ
ಕನ್ನಡಪ್ರಭ ವಾರ್ತೆ ಕೋಲಾರಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆಂದು ಅವರು ಓಡಾಡುವ ರಸ್ತೆಗಳ ಅಭಿವೃದ್ದಿಯ ನಾಟಕ ಸರಿಯಲ್ಲ, ನಿಜಕ್ಕೂ ಸಿಎಂ ಕೋಲಾರಕ್ಕೆ ಬರುವುದರಿಂದ ಹದೆಗೆಟ್ಟ ರಸ್ತೆಗಳು ಸರಿಹೋಗುವಂತಿದ್ದರೆ ಅವರು ಪ್ರತಿ ತಿಂಗಳು ಒಂದು ಗ್ರಾಮ, ಒಂದು ವಾರ್ಡ್‌ಗೆ ಭೇಟಿ ನೀಡಲಿ ಎಂದು ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ವ್ಯಂಗ್ಯವಾಡಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಆಗಮಿಸುವುದರಿಂದ ಕ್ಷೇತ್ರ ಅಭಿವೃದ್ಧಿಯಾಗಿದ್ದೇ ಆದಲ್ಲಿ ನಾವೂ ಸಹ ಸ್ವಾಗತಿಸಿ ಸನ್ಮಾನಿಸುತ್ತೇವೆ, ಅವರು ಬಂದು ಹೋಗುವ ಒಂದೆರಡು ರಸ್ತೆ ಸರಿಪಡಿಸಿದರೆ ಸಾಕೇ? ಸಿದ್ದರಾಮಯ್ಯನವರು ಕೋಲಾರದೊಳಗೆ ಬಂದು ರಸ್ತೆಗಳ ದುಃಸ್ಥಿತಿ ಗಮನಿಸಲಿ ಎಂದು ಸಲಹೆ ನೀಡಿದರು.ರಾಜಧಾನಿಯಿಂದ ೬೦ ಕಿಮೀ ದೂರದಲ್ಲಿ ಕೋಲಾರವಿದ್ದರೂ ಸಹ ಅಭಿವೃದ್ಧಿಪಡಿಸುತ್ತಿಲ್ಲ. ದೂರದ ಜಿಲ್ಲೆಗಳನ್ನು ಕಡೆಗಣಿಸಿದಂತೆಯೇ ನಮ್ಮ ಜಿಲ್ಲೆಯನ್ನೂ ಕಡೆಗಣಿಸಲಾಗುತ್ತಿದ್ದರೂ ಉಸ್ತುವಾರಿ ಸಚಿವರು, ಶಾಸಕರು ಧ್ವನಿಯೆತ್ತದಿರುವುದು ಖಂಡನೀಯ ಎಂದರು.
ಜತೆಗೆ ಕೋಟಿಗಾನಹಳ್ಳಿ ರಾಮಯ್ಯ ಅವರು ನೆಲದ ಸಂಸ್ಕೃತಿ, ಕಲೆಗಳನ್ನು ಕಟ್ಟಿ ಬೆಳೆಸಲು ಕಟ್ಟಿದಂತಹ ಸಂಸ್ಥೆ ಆದಿಮವಾಗಿದ್ದು, ಅಂತಹ ಜಾಗದಲ್ಲಿ ರೆಸಾರ್ಟ್, ವಿಲ್ಲಾಗಳನ್ನು ಕಟ್ಟಿಸಲು ಅವಕಾಶ ಮಾಡಿಕೊಡಲು ಸಿಎಂ ಆಗಮಿಸುತ್ತಿದ್ದು, ಶಿವಗಂಗೆ ಗ್ರಾಮದಲ್ಲಿ ಜನರ ಬದುಕು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.ಜನರು ಜೀವನಕ್ಕಾಗಿ ಇಟ್ಟುಕೊಂಡಿದ್ದ ಅರ್ಧ ಎಕರೆ, ಒಂದು ಎಕರೆ ಜಾಗವನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪಿತ್ತೂರಿ ನಡೆಯುತ್ತಿದೆ. ೭ ರೈತರ ಜಮೀನನ್ನು ಭೂಗಳ್ಳರು ಕಸಿದುಕೊಂಡಿದ್ದು, ಉಳ್ಳವರು ವೈಭೋಗದ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ ಎಂದರು.
ಯರಗೋಳ್ ಡ್ಯಾಂ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ ಪಾತ್ರವೇನೂ ಇಲ್ಲದಿದ್ದರೂ ಪ್ರಚಾರ ಗಿಟ್ಟಿಸಿಕೊಂಡರು ಎಂದು ಲೇವಡಿ ಮಾಡಿದ ಅವರು, ೨ನೇ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಸಿದ್ದರಾಮಯ್ಯ ಸಮಸ್ಯೆಗಳತ್ತ ಗಮನ ಹರಿಸಲಿ ಎಂದು ಕಿವಿಮಾತು ಹೇಳಿದರು.ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇದ್ದಾರೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಕೋಲಾರವು ಕರ್ನಾಟಕದ ಒಂದು ಭಾಗ, ಕೋಳಚೆ ಪ್ರದೇಶಗಳಲ್ಲಿ ಸಮಸ್ಯೆಗಳ ನಡುವೆಯೇ ಜನರು ಬದುಕು ಸಾಗಿಸುತ್ತಿದ್ದಾರೆ. ಚೆನ್ನಾಗಿದ್ದ ರಸ್ತೆಗೆ ಸಿಂಗಾರ ಮಾಡುವ ಬದಲು ಸಮಸ್ಯೆ ಇರುವ ಕಡೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಬೇಕು ಎಂದರು.
ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ಕಸಾಯಿ ಖಾನೆಯಂತಾಗಿದೆ. ಸಾಮಾನ್ಯ ಕಾಯಿಲೆಗಳಿಗೆ ಔಷದ ದೊರೆಯುತ್ತಿಲ್ಲ. ವೈದ್ಯರು ಖಾಸಗಿ ಕೆಲಸಗಳಿಗೆ ಹೆಚ್ಚು ಹೋಗುತ್ತಾರೆ. ಕೋಲಾರವನ್ನು ಮಿನಿ ಬೆಂಗಳೂರು, ಸಿಂಗಪುರ್ ಮಾಡಬೇಡಿ, ಕೋಲಾರವನ್ನಾಗಿಯೇ ಅಭಿವೃದ್ದಿಪಡಿಸಿ ಸಾಕು ಎಂದು ಸಲಹೆ ನೀಡಿದರು.ಕೋಲಾರಕ್ಕೆ ರಿಂಗ್ ರೋಡ್ ಮಾಡಬೇಕು ಎಂದು ಸುಮಾರು ವರ್ಷಗಳ ಹಿಂದೆಯೇ ನೀಲಿ ನಕ್ಷೆ ತಯಾರಿಸಲಾಗಿದೆ. ಆದರೆ ಆ ನಕ್ಷೆ ಗೋಡೆಯ ಮೇಲೆಯೇ ನೇತಾಡುತ್ತಿದೆ. ಕೇವಲ ಭಾಗ್ಯಗಳನ್ನು ಕೊಟ್ಟ ಮಾತ್ರಕ್ಕೆ ಕೋಟ್ಯಾಂತರ ರು. ವ್ಯಯಿಸಿ ಪ್ರಚಾರ ಪಡೆಯುತ್ತಿದ್ದಾರೆ.
ಕೆಜಿಎಫ್ ಶಾಸಕರು ೧೫೦ ಕೋಟಿ ರು. ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿಸಲು ಮುಂದಾಗಿದ್ದು, ಅವರಿಗೆ ಇರುವ ಇಚ್ಛಾಶಕ್ತಿ ಇಲ್ಲಿನ ಸಚಿವರಿಗೆ, ಬೇರೆ ಶಾಸಕರಿಗೆ ಯಾಕಿಲ್ಲ ಎಂದು ಪ್ರಶ್ನಿಸಿದರು.ಕೋಚಿಮುಲ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿಲ್ಲ. ಒಕ್ಕೂಟದ ಆಡಳಿತ ಮಂಡಳಿಯು ಸಮರ್ಥಿಸಿಕೊಳ್ಳಲಾಗದಷ್ಟು ದೊಡ್ಡ ಮಟ್ಟದಲ್ಲಿ ತಪ್ಪು ಮಾಡಿದೆ. ಅರ್ಹರಿಗೆ ಕೆಲಸ ದೊರೆಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡ ಸುಧಾಕರ್ ಇದ್ದರು.---ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಕೋಲಾರದ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.----ಬಾಕ್ಸ್......
ಚುನಾವಣೆ ತಯಾರಿಗೆ ಮಾತ್ರ ಸಿಎಂ ಭೇಟಿಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ದೃಷ್ಟಿಯಿಂದ ಖಂಡಿತ ಕೋಲಾರಕ್ಕೆ ಬರುತ್ತಿಲ್ಲ, ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಶ್ರೀನಾಥ್, ಕಾಂಗ್ರೆಸ್ ಸಮಾವೇಶ, ಸಂಘಟನಾ ಸಭೆ, ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ಕುರಿತು ತೀರ್ಮಾನ ಕೈಗೊಳ್ಳಲು ಸಿಎಂ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದರು.
ಹಲವು ದಶಕಗಳಿಂದ ಅಭಿವೃದ್ಧಿ ಕಾಣದ ಅನೇಕ ರಸ್ತೆಗಳು ಕೋಲಾರದಲ್ಲಿವೆ, ಒಂದೆರಡು ರಸ್ತೆಗಳನ್ನು ಅಭಿವೃದ್ದಿ ಮಾಡಿದರೆ ಸಾಕೇ ಎಂದು ಪ್ರಶ್ನಿಸಿ, ಮಾರ್ಗದ ಮಧ್ಯೆ ಸುಲ್ತಾನ್ ತಿಪ್ಪಸಂದ್ರ ಬಡಾವಣೆದಾರರ ಸಮಸ್ಯೆಗಳು ಇವೆ. ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲ, ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಇವರಿಗೆ ಜನಪರ ಕಾಳಜಿ ಇದ್ದರೆ ಇದನ್ನು ಗಮನಿಸಲಿ ಎಂದರು.