ಮುಳಗುಂದ: ಸಮೀಪದ ಚಿಂಚಲಿ ಗ್ರಾಮದಲ್ಲಿ ಕಲ್ಲೂರು ರಸ್ತೆಯಿಂದ ನೀಲಗುಂದ ಗ್ರಾಮದ ರಸ್ತೆಯವರೆಗೆ ಲೋಕೋಪಯೋಗಿ ಇಲಾಖೆಯಿಂದ ಸಿಸಿ ರಸ್ತೆ, ಚರಂಡಿ ಕಾಮಗಾರಿ ಪ್ರಾರಂಭಿಸಿದ್ದು, ಹಲವು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ.

ಈ ರಸ್ತೆ ಹುಬ್ಬಳ್ಳಿ, ಅಣ್ಣಿಗೇರಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಳೆದ ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರು ಭೂಮಿಪೂಜೆ ನೆರವೇರಿಸಿ, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರೈಸಲು ಸೂಚನೆ ನೀಡಿದ್ದರು.

ಆದರೆ ಕಾಮಗಾರಿ ನನೆಗುದಿಗೆ ಬಿದ್ದಿದ್ದರಿಂದ ಚರಂಡಿ ಜಾಗದ ಎರಡು ಪಕ್ಕದ ನೆಲವನ್ನು ಅಗೆದು ರಸ್ತೆ ಮೇಲೆ ಮಣ್ಣು ಹಾಕಿದ್ದು, ಎದುರು ಬರುವ ವಾಹನಗಳಿಗೆ ಜಾಗವೇ ಇಲ್ಲದಂತಾಗಿ ವಾಹನಗಳು ಚರಂಡಿಗೆ ಬಿದ್ದ ಉದಾಹರಣೆಗಳು ನಡೆದಿವೆ. ಕಳೆದ ವಾರದ ಹಿಂದೆ ಬೇರೆ ಊರಿಂದ ಬಂದ ಇಬ್ಬರು ದಂಪತಿಗಳು ಆಟೋದಲ್ಲಿ ಹೋಗುವಾಗ ಚರಂಡಿಯಲ್ಲಿ ಬಿದ್ದು ಅದರ ತ್ಯಾಜ್ಯ ಅವರಿಗೆಲ್ಲ ಮೆತ್ತಿ ಬೇರೊಬ್ಬರ ಮನೆಯಲ್ಲಿ ಸ್ನಾನ ಮಾಡಿ ಹೋಗುವ ಮುನ್ನವೇ ಮತ್ತೊಂದು ಟ್ರ್ಯಾಕ್ಟರ್ ಟ್ರೇಲರ್ ಉರುಳಿ ಮತ್ತೊಂದು ಅವಘಡ ಸಂಭವಿಸಿದೆ. ಇಂತಹ ಅನೇಕ ಅವಘಡಗಳು ಸಂಭವಿಸಿದರೂ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಕೆಲವು ಕಡೆಗೆ ಕಬ್ಬಿಣದ ಬಾರ್‌ಗಳನ್ನು ಹೆಣೆದಿದ್ದು, ಅಕ್ಕಪಕ್ಕದ ರಸ್ತೆಗಳಿಗೆ ಸಂಚರಿಸಲು ಜಾಗವಿಲ್ಲದಂತಾಗಿದೆ. ಅದರ ಮೇಲೆ ಯಾರಾದರೂ ಬಿದ್ದರೆ ಶಿವನ ಪಾದ ಸೇರುವುದು ಗ್ಯಾರಂಟಿ. ಈ ರಸ್ತೆ ಜನದಟ್ಟಣೆ ಹಾಗೂ ವಾಹನ ದಟ್ಟನೆಯಿಂದ ಕೂಡಿದ್ದು, ಇದೇ ಜಾಗದಲ್ಲಿಯೇ ವಾರಕ್ಕೊಂದು ಬಾರಿ ಸಂತೆ ನಡೆಯುತ್ತದೆ. ವಾಹನಗಳು ಸಂಚರಿಸುವಾಗ ಅದರಿಂದ ಬರುವ ಧೂಳು ಸಾರ್ವಜನಿಕರನ್ನು ನಿದ್ದೆಗೆಡಿಸುವಂತೆ ಮಾಡಿದೆ.

ಇದರಿಂದ ಕೆಲವು ವೃದ್ಧರಿಗೆ ಆರೋಗ್ಯದಲ್ಲಿ ಸಮಸ್ಯೆಯುಂಟಟಾಗಿ ದಿನನಿತ್ಯ ಆಸ್ಪತ್ರೆಗೆ ತೆರಳುವಂತಾಗಿದೆ. ಅಲ್ಲದೇ ಚರಂಡಿಯಲ್ಲಿ ತ್ಯಾಜ್ಯ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಕಾಮಗಾರಿ ಅಪೂರ್ಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದು, ಸಾರ್ವಜನಿಕರ ತೊಂದರೆ ಆಲಿಸದಂತಾಗಿದೆ. ಕಾಮಗಾರಿ ಬೇಗನೇ ಮುಗಿಸದೇ ಹೋದಲ್ಲಿ ಸಾರ್ವಜನಿಕರು ರಸ್ತೆ ಬಂದ್ ಮಾಡಿ ಹೋರಾಟಕ್ಕಿಳಿಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನೋಟಿಸ್: ರಸ್ತೆ ಕಾಮಗಾರಿಗೆ ಸಾರ್ವಜನಿಕರು ಸಹಕಾರ ನೀಡುತ್ತಿಲ್ಲ ಎಂಬ ಆರೋಪವಿದೆ. ಆದರೂ ಗುತ್ತಿಗೆದಾರನಿಗೆ ಈಗಾಗಲೇ ನೋಟಿಸ್ ನೀಡಿದ್ದು, ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಲೋಕೋಪಯೋಗಿ ಎಂಜಿನಿಯರ್‌ ಕಿರಣ ಕೆ. ಎಂದು ತಿಳಿಸಿದರು.